Site icon Vistara News

ಸಚಿವ ಬಿ.ಸಿ. ನಾಗೇಶ್‌ ಮನೆ ಮೇಲೆ ದಾಳಿ ಯತ್ನಕ್ಕೆ ಬಿಜೆಪಿ ನಾಯಕರ ಖಂಡನೆ

ಬೆಂಗಳೂರು: ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಅವರ ನಿವಾಸದ ಮೇಲೆ ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕ NSUI ಕಾರ್ಯಕರ್ತರು ದಾಳಿ ನಡೆಸಲು ಯತ್ನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪಠ್ಯಪುಸ್ತಕ ಪರಿಷ್ಕರಣೆಯನ್ನು ವಿರೋಧಿಸಿ ಈ ದುಷ್ಕೃತ್ಯವನ್ನು ಮಾಡಿದ್ದಾರೆ ಎನ್ನಲಾಗಿದ್ದು, ರಾಜ್ಯದ ಬಿಜೆಪಿ ಮುಖಂಡರು ಈ ಘಟನೆಯನ್ನು ಖಂಡಿಸಿದ್ದಾರೆ.

ಡಾ. ಸಿ. ಎನ್‌. ಅಶ್ವತ್ಥನಾರಾಯಣ್: ಸಚಿವ ಬಿ.ಸಿ. ನಾಗೇಶ್‌ ಅವರ ತಿಪಟೂರಿನ ನಿವಾಸದ ಮೇಲೆ ದಾಳಿ ನಡೆಸಿರುವುದು ಹೇಡಿತನ ಮತ್ತು ಅವಿವೇಕದ ಪರಮಾವಧಿ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಖಂಡಿಸಿದ್ದಾರೆ. ಪಠ್ಯಪುಸ್ತಕ ಮರುಪರಿಷ್ಕರಣೆಯನ್ನು ಬೌದ್ಧಿಕವಾಗಿ ಎದುರಿಸಲಾಗದ ಕಾಂಗ್ರೆಸ್ ಪಕ್ಷದ ಭಟ್ಟಂಗಿಗಳು ಮಾತ್ರ ಹೀಗೆ ಮಾಡಲು ಸಾಧ್ಯ ಎಂದು ಕಿಡಿಕಾರಿದ್ದಾರೆ.

ಕಾಂಗ್ರೆಸ್ ಮತ್ತು ಎನ್.ಎಸ್.ಯು.ಐ ಕಾರ್ಯಕರ್ತರು ತಮ್ಮನ್ನು ತಾವು ಕುವೆಂಪು ಆರಾಧಕರು ಎಂದು ಹೇಳಿದ್ದಾರೆ. ಆದರೆ, ಸಚಿವರ ಮನೆ ಮೇಲೆ ದಾಳಿ ಮಾಡುವ ಮೂಲಕ ಮಹಾಕವಿಯ ತತ್ವಗಳಿಗೆ ಮಸಿ ಬಳಿದಿದ್ದಾರೆ. ಇಂತಹ ಗೂಂಡಾಗಿರಿಯನ್ನು ಸರಕಾರ ಸಹಿಸುವುದಿಲ್ಲ. ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ನಿಶ್ಚಿತ ಎಂದು ಸಚಿವ ಅಶ್ವತ್ಥನಾರಾಯಣ್‌ ನೇರವಾಗಿ ನುಡಿದಿದ್ದಾರೆ.

ನಳಿನ್‌ಕುಮಾರ್‌ ಕಟೀಲ್: ಕಾಂಗ್ರೆಸ್ ಮುಖಂಡರು ಹಿಂದಿನಿಂದಲೂ ಗಲಾಟೆ ಮಾಡುವ ಪ್ರವೃತ್ತಿಯನ್ನೇ ತಮ್ಮದಾಗಿಸಿಕೊಂಡಿದ್ದಾರೆ. ಕೋಮುಗಲಭೆ, ಹಿಂಸೆ ಹಾಗೂ ಪೊಲೀಸ್ ಠಾಣೆಗೆ ಬೆಂಕಿ ಹಾಕುವುದು ಇವರ ಸಹಜ ಗುಣವಾಗಿದೆ.‌ ರಾಜ್ಯದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ಮನೆಗೆ ಕಾಂಗ್ರೆಸ್ ಮತ್ತು NSUI ಕಾರ್ಯಕರ್ತರು ದಾಳಿ ಮಾಡಲು ಮುಂದಾಗಿದ್ದಾರೆ. ಈ ಮೂಲಕ ಕಾಂಗ್ರೆಸ್‍ನವರ ಹತಾಶ ಮನೋಭಾವನೆ ಅನಾವರಣಗೊಂಡಿದೆ ಎಂದು ನಳಿನ್‌ಕುಮಾರ್‌ ಕಟೀಲ್‌ ಕಾಂಗ್ರೆಸ್‌ ವಿರುದ್ಧ ಮಾತನಾಡಿದ್ದಾರೆ.
ಈ ದುಷ್ಕೃತ್ಯದಲ್ಲಿ ಭಾಗಿಯಾದ ಎಲ್ಲರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಮತ್ತು ರಾಜ್ಯದ ಗೃಹ ಸಚಿವರನ್ನು ವಿನಂತಿಸಿರುವುದಾಗಿ ನಳಿನ್ ಕುಮಾರ್ ಕಟೀಲ್ ಅವರು ತಿಳಿಸಿದ್ದಾರೆ.

ಸಿಟಿ ರವಿ: ದೌರ್ಜನ್ಯ ನಡೆಸುವುದು ಮತ್ತು ಕೊಲೆ ಬೆದರಿಕೆ ಹಾಕಿ ಮನೆಗೆ ಬೆಂಕಿ ಹಾಕುವ ಹೀನ ಕೃತ್ಯಕ್ಕೆ ಕೈ ಹಾಕುವ ಮನೋಭಾವವು ಪ್ರಜಾಪ್ರಭುತ್ವ ವಿರೋಧಿ. ಇದು ತಾಲಿಬಾನ್‍ಗಳು ನಡೆಸುವ ಕೃತ್ಯ ಎಂದು ಕಾಂಗ್ರೆಸ್‌ ವಿರುದ್ಧ ಆಕ್ಷೇಪಿಸಿದರು. ಸಚಿವರಿಗೆ ಸೂಕ್ತ ರಕ್ಷಣೆ ನೀಡಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳಿಗೆ ಮತ್ತು ಗೃಹ ಸಚಿವರಿಗೆ ಮನವಿ ಮಾಡುವುದಾಗಿ ಸಿಟಿ ರವಿ ತಿಳಿಸಿದರು.

ಇದನ್ನೂ ಓದಿ: ಬಿ.ಸಿ ನಾಗೇಶ್ ಮನೆಗೆ ಮುತ್ತಿಗೆ ಪ್ರಯತ್ನ; NSUI  ಕಾರ್ಯಕರ್ತರ ಬಂಧನ: ಗೃಹ ಸಚಿವರಿಂದ ಖಂಡನೆ

Exit mobile version