Site icon Vistara News

MLA Gopalaiah : ಹಣ ಕೊಡದಿದ್ರೆ ಕೊಲ್ತೀನಿ; ಬಿಜೆಪಿ ಶಾಸಕ ಗೋಪಾಲಯ್ಯಗೆ ಮಧ್ಯರಾತ್ರಿ ಬೆದರಿಕೆ

MLA Gopalaiah threatening Call

ಬೆಂಗಳೂರು: ಮಾಜಿ ಸಚಿವ ಹಾಗೂ ರಾಜಧಾನಿಯ ಮಹಾಲಕ್ಷ್ಮಿ ಲೇಔಟ್‌ ಕ್ಷೇತ್ರದ ಬಿಜೆಪಿ ಶಾಸಕ ಕೆ. ಗೋಪಾಲಯ್ಯ (MLA Gopalaiah) ಅವರಿಗೆ ಕೊಲೆ ಬೆದರಿಕೆ (Threatening Call) ಎದುರಾಗಿದೆ. ಮಂಗಳವಾರ ಮಧ್ಯರಾತ್ರಿ ಹೊತ್ತಿಗೆ ಅವರಿಗೆ ಕರೆ ಮಾಡಿದ ಮಾಜಿ ಕಾರ್ಪೊರೇಟರ್‌ ಪದ್ಮರಾಜ್‌ (Ex Coroprator Padmaraj) ಎಂಬಾತ ʻನನಗೆ ಹಣ ಕೊಡಬೇಕು, ಕೊಡದಿದ್ದರೆ ನಿಮ್ಮನ್ನೂ ನಿಮ್ಮ ಕುಟುಂಬವನ್ನು ಕೊಲ್ಲದೆ ಬಿಡುವುದಿಲ್ಲʼ ಎಂದು ಬೆದರಿಕೆ ಹಾಕಿದ್ದಾನೆ. ಈ ಕರೆ ಬಂದ ತಕ್ಷಣವೇ ಗೋಪಾಲಯ್ಯ ಅವರು ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ, ವಿಧಾನಸಭೆಯ ಸ್ಪೀಕರ್‌ ಅವರಿಗೂ ಜೀವ ಬೆದರಿಕೆ ಇರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಇದೀಗ ಪೊಲೀಸರು ಗೋಪಾಲಯ್ಯ ಅವರ ಮನೆಗೆ ಬಿಗಿ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ಮತ್ತು ಆರೋಪಿ ಪದ್ಮರಾಜ್‌ಗಾಗಿ ಪೊಲೀಸರು ಹುಡುಕಾಟ ಶುರು ಮಾಡಿದ್ದಾರೆ.

ರಾತ್ರಿ 11.01ಕ್ಕೆ ಶಾಸಕರ ಮೊಬೈಲ್‌ಗೇ ನೇರ ಕಾಲ್‌‌

ʻʻನಿನ್ನೆ ರಾತ್ರಿ 11.೦1ಕ್ಕೆ ಬಸವೇಶ್ವರ ನಗರದ ಮಾಜಿ ಕಾರ್ಪೊರೇಟರ್‌ ಪದ್ಮರಾಜ್ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಹಣ ಕೊಡದೆ ಹೋದರೆ ಮನೆಯವರೂ ಸೇರಿ ಎಲ್ಲರನ್ನೂ ಕೊಲ್ಲುವುದಾಗಿ ಬೆದರಿಸಿದ್ದಾನೆ. ಅತ್ಯಂತ ಕೆಟ್ಟ ಪದಗಳಿಂದ ನನಗೆ ನನ್ನ ಕುಟುಂಬದವರಿಗೆ ನಿಂದನೆ ಮಾಡಿದ್ದಾನೆ. ಗೂಂಡಾ ವರ್ತನೆ ತೋರಿದ್ದಾನೆʼʼ ಎಂದು ಘಟನೆಯ ಬಗ್ಗೆ ಗೋಪಾಲಯ್ಯ ವಿವರಣೆ ನೀಡಿದ್ದಾರೆ.

ʻʻಪದ್ಮರಾಜ್‌ಗೂ ನನಗೂ ಯಾವುದೇ ಹಣಕಾಸಿನ ವ್ಯವಹಾರಗಳಿಲ್ಲ. ನಾನೇ ಅವನಿಗೆ ಹಿಂದೆ ಸಾಕಷ್ಟು ಸಹಾಯ ಮಾಡಿದ್ದೇನೆ. ಅವನ ಮಗಳಿಗೆ ಕಾಲೇಜು ಸೀಟು, ಉದ್ಯೋಗಕ್ಕೆ ಸಹಾಯ ಮಾಡಿದ್ದೇನೆ. ಆದರೆ, ಈಗ ಅವನೇ ನನ್ನ ಕುಟುಂಬಕ್ಕೆ ಬೆದರಿಕೆ ಹಾಕಿದ್ದಾನೆ. ಅವನನ್ನು ಬಿಡಬಾರದು. ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರ ಬಳಿ ಮಾತನಾಡಿದ್ದೇನೆ.ʼʼ ಎಂದು ಗೋಪಾಲಯ್ಯ ಹೇಳಿದರು.

ʻʻಪದ್ಮರಾಜ್ ನನಗೆ ಹಳೇ ಪರಿಚಯ. ಅವರ ಮಗಳಿಗೆ ಕೆಲಸ ಕೊಡಿಸಿದ್ದೇನೆ. ಹಲವು ಬಾರಿ ನನ್ನಿಂದ ಅನುಕೂಲ ಪಡೆದುಕೊಂಡಿದ್ದಾರೆʼʼ ಎಂದು ಹೇಳಿರುವ ಗೋಪಾಲಯ್ಯ, ಈ ಬಗ್ಗೆ ಪೊಲೀಸರಿಗೆ ಮಾತ್ರವಲ್ಲ ಸ್ಪೀಕರ್‌ ಅವರಿಗೂ ದೂರು ನೀಡಿದ್ದೇನೆ. ವಿಧಾನಸಭೆ ಕಲಾಪದ ಶೂನ್ಯ ವೇಳೆಯಲ್ಲಿ ಚರ್ಚೆಗೆ ಅವಕಾಶ ಕೋರಿದ್ದೇನೆ. ನನಗೆ ಮಾತ್ರವಲ್ಲ, ಹಲವರಿಗೆ ಇದೇ ರೀತಿ ಬೆದರಿಕೆ ಹಾಕಿದ್ದಾನೆ. ಉಳಿದವರು ಇದುವರೆಗೂ ದೂರು ನೀಡಿಲ್ಲ. ನಾನು ದೂರು ಕೊಟ್ಟಿದ್ದೇನೆ. ವಿಧಾನಸಭೆಯಲ್ಲಿ ಚರ್ಚೆ ನಡೆಯುವಾಗ ಅವರೆಲ್ಲ ನನ್ನ ಬೆಂಬಲಕ್ಕೆ ಬರಬಹುದು ಎಂದು ಹೇಳಿದರು ಗೋಪಾಲಯ್ಯ.ಪಿ, ಎಸಿಪಿಗೆ ಮಾಹಿತಿ ಗೊತ್ತಿದೆ.

ಅವನು ಅಹಂಕಾರದಿಂದ ಹೀಗೆ ಮಾಡಿದ್ದಾನೆ. ತಿಂದಿದ್ದು ಜಾಸ್ತಿಯಾಗಿದೆ ಎಂದು ಆಕ್ರೋಶದಿಂದ ಹೇಳಿದ ಗೋಪಾಲಯ್ಯ ಅವರು, ನಮ್ಮ ಪಕ್ಷದ ಅಧ್ಯಕ್ಷರು ಹಾಗೂ ವಿಪಕ್ಷ ನಾಯಕರಿಗೂ ಮಾಹಿತಿ ನೀಡಿದ್ದೇನೆ ಎಂದರು.

ಇದನ್ನೂ ಓದಿ : Dry day order : ಚುನಾವಣೆ ಹೆಸರಲ್ಲಿ 48 ಗಂಟೆ ಮದ್ಯ ಮಾರಾಟ ನಿಷೇಧ‌ ಬೇಕಾ?; ಆಕ್ಷೇಪ ಸರಿ ಎಂದ ಕೋರ್ಟ್

ಬಾಗಿಲು ತೆರೆಯದ ಪದ್ಮರಾಜ್‌

ಮಂಗಳವಾರ ರಾತ್ರಿ ಶಾಸಕ ಕೆ ಗೋಪಾಲಯ್ಯ ಅವರಿಗೆ ಬೆದರಿಕೆ ಹಾಕಿದ ಪದ್ಮರಾಜ್‌ ವಿರುದ್ಧ ಕಾಮಾಕ್ಷಿ ಪಾಳ್ಯ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಪೊಲೀಸರು ಆತನನ್ನು ಕರೆತಂದು ಬಂಧಿಸಲು ಮನೆಗೆ ಹೋದರೆ ಆತ ಬಾಗಿಲು ತೆಗೆಯದೆ ಅಡಗಿಕೊಂಡಿದ್ದಾನೆ. ಸದ್ಯ ಪೊಲೀಸರು ನೋಟಿಸ್‌ ನೀಡಿ ಬಂದಿದ್ದಾರೆ. ಠಾಣೆಗೆ ಕರೆತಂದು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆಯೂ ಇದೆ.

MLA Gopalaiah : ತಪ್ಪಾಯಿತು ಕ್ಷಮಿಸಿ ಎಂದ ಪದ್ಮರಾಜ್‌ ಪತ್ನಿ ಮತ್ತು ಮಗಳು

ಈ ನಡುವೆ, ಪದ್ಮರಾಜ್‌ನ ಪತ್ನಿ ಮತ್ತು ಮಗಳು ಶಾಸಕ ಗೋಪಾಲಯ್ಯ ಅವರಿಗೆ ಕರೆ ಮಾಡಿ ಕ್ಷಮೆ ಯಾಚಿಸಿದ್ದಾರೆ. ನೀವು ನಮಗೆ ತುಂಬ ಉಪಕಾರ ಮಾಡಿದ್ದೀರಿ. ನಮಗೆ ಬದುಕು ಕೊಟ್ಟಿದ್ದೀರಿ. ‌ ಅವರು ಮಾಡಿದ ತಪ್ಪಿಗೆ ಕ್ಷಮೆ ಕೊಡಿ. ನಿನ್ನೆ ರಾತ್ರಿ ಅವರು ಮಾತನಾಡುತ್ತಿದ್ದುದನ್ನು ನಾವೂ ಕೇಳಿಸಿಕೊಂಡಿದ್ದೇವೆ. ಯಾರ ಜತೆ ಇಷ್ಟು ಕೆಟ್ಟದಾಗಿ ಮಾತನಾಡುತ್ತಿದ್ದಾರೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದೆವು. ಯಾಕೆ ಹೀಗೆ ಮಾಡ್ತಾರೆ ಅಂತ ಬೇಸರವೂ ಆಗಿತ್ತು. ಆದರೆ, ಅವರು ನಿಮ್ಮ ಜತೆ ಮಾತನಾಡುತ್ತಿದ್ದುದು ಎಂದು ಗೊತ್ತಿರಲಿಲ್ಲ. ದಯವಿಟ್ಟು ಕ್ಷಮಿಸಿʼ ಎಂದು ಕೇಳಿಕೊಂಡಿದ್ದಾರೆ ಎಂದು ಗೋಪಾಲಯ್ಯ ತಿಳಿಸಿದರು. ಆದರೆ, ನನಗೆ ಈ ವಿಚಾರದಲ್ಲಿ ತುಂಬ ನೋವಾಗಿದೆ. ಹೀಗಾಗಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾಗಿ ಅವರಿಗೂ ಹೇಳಿದ್ದೇನೆ ಎಂದರು.

Exit mobile version