ಬೆಂಗಳೂರು: ಬಿಬಿಎಂಪಿ ಚುನಾವಣೆ ನಡೆಸಲೇಬೇಕು ಎಂಬ ಸುಪ್ರೀಂಕೋರ್ಟ್ ಆದೇಶದ ನಂತರ ಪೂರ್ವ ತಯಾರಿ ನಡೆಯುತ್ತಿರುವ ಹೊತ್ತಿನಲ್ಲೇ ಚುನಾವಣೆ ನಡೆಯುವುದೇ ಅನುಮಾನವೆಂದೂ ಹೇಳಲಾಗುತ್ತಿದೆ. ಸುಪ್ರೀಂಕೋರ್ಟ್ ಆದೇಶವನ್ನು ಮೀರಿ ಚುನಾವಣೆಯನ್ನು ಮುಂದೂಡಿಕೆ ಮಾಡಲು ತಂತ್ರ ಹೆಣಿಯಲಾಗುತ್ತಿದೆ. ಮುಂದೂಡುವ ಚಿಂತನೆ ಯಾವುದೋ ಒಂದು ಪಕ್ಷದ್ದೋ ಅಥವಾ ಒಬ್ಬರಿಬ್ಬರ ಚಿಂತನೆಯಲ್ಲ. ಇದು ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ 28 ಕ್ಷೇತ್ರಗಳ ಶಾಸಕರ ಒಕ್ಕೊರಲ ಪ್ರಯತ್ನ ಎಂಬ ಮಾತುಗಳು ಕೇಳಿಬರುತ್ತಿವೆ.
ಇದನ್ನೂ ಓದಿ | ಬಿಬಿಎಂಪಿ ಚುನಾವಣೆ | ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಕ್ಕೆ ಶೇ.50 ಮೀಸಲಾತಿ
ಶಾಸಕರ ಹಿಂದೇಟಿಗೆ ಮೂರು ಕಾರಣಗಳು
1. ಜನರ ಹಾಗೂ ತಮ್ಮ ನಡುವೆ ಅಂತರ
ಸದ್ಯ ಬಿಬಿಎಂಪಿಯಲ್ಲಿ ಸದಸ್ಯರ ಅವಧಿ ಮುಗಿದಿರುವುದರಿಂದಾಗಿ ಜನರ ದಿನನಿತ್ಯದ ಸಮಸ್ಯೆಗಳಿಗೆಲ್ಲ ಶಾಸಕರನ್ನೇ ಅವಲಂಬಿಸಬೇಕಿದೆ. ರಸ್ತೆ, ವಿದ್ಯುತ್ ಸೇರಿ ಎಲ್ಲ ಸಮಸ್ಯೆಗಳಿಗೂ ಶಾಸಕರ ಕಚೇರಿಗೆ ತೆರಳುತ್ತಾರೆ. ವಿಧಾನಸಭೆ ಚುನಾವಣೆ ಹತ್ತಿರವಾದಂತೆ ಈ ಜನಸಂಪರ್ಕ ಇದ್ದರೆ ಒಳ್ಳೆಯದು ಎನ್ನುವುದು ಶಾಸಕರ ಅನಿಸಿಕೆ. ರಾಜ್ಯ ಸರ್ಕಾರದಿಂದ ಸಾವಿರಾರು ಕೋಟಿ ರೂಪಾಯಿ ಮೊತ್ತದ ಕಾಮಗಾರಿಗಳನ್ನು ಬೆಂಗಳೂರಿನಲ್ಲಿ ನಡೆಸಲಾಗುತ್ತಿದೆ. ಈ ಕಾಮಗಾರಿಗಳು ಆರಂಭವಾದ ಕೂಡಲೆ ಶಾಸಕರು ತಮ್ಮ ಫೋಟೊಗಳನ್ನು ರಸ್ತೆಯಲ್ಲಿ ಹಾಕಿಕೊಳ್ಳುತ್ತಾರೆ. ಕಾಮಗಾರಿ ಮುಕ್ತಾಯವಾಗುವವರೆಗೂ ಈ ಫ್ಲೆಕ್ಸ್‌ಗಳು ಜನರ ಕಣ್ಣಿಗೆ ಬೀಳುತ್ತಲೇ ಇರುತ್ತವೆ. ವಿಧಾನಸಭೆ ಚುನಾವಣೆಗೂ ಮುನ್ನ ಜನರ ಮನಸ್ಸಿನಲ್ಲಿ ಉಳಿಯಲು ಇದು ಸುಲಭ ಮಾರ್ಗ ಎನ್ನುವ ಕಾರಣಕ್ಕೆ ಬಿಬಿಎಂಪಿ ಚುನಾವಣೆ ನಡೆಯುವುದು ಬೇಡ ಎನ್ನುವುದು ಶಾಸಕರ ಅನಿಸಿಕೆ.
2. ಕಾಮಗಾರಿಯಲ್ಲಿನ ಲಾಭ
ವಿಧಾನಸಭೆ ಚುನಾವಣೆ ಹತ್ತಿರವಾದಂತೆ ಬೆಂಗಳೂರಿನ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ ಸಾವಿರಾರು ಕೋಟಿ ರೂಪಾಯಿ ಮೊತ್ತದ ಕಾಮಗಾರಿ ನಡೆಸಲಾಗುತ್ತಿದೆ. ಬೆಂಗಳೂರು ಐಟಿಸಿ ಎಂಬ ಹೆಗ್ಗಳಿಕೆಯಿಂದಾಗಿ ಕೇಂದ್ರ ಸರ್ಕಾರ ನೇರವಾಗಿ ಇಲ್ಲಿಯ ಅಭಿವೃದ್ಧಿಯ ಮೇಲೆ ಗಮನ ನೀಡುತ್ತದೆ. 28 ಶಾಸಕರಿರುವ ರಾಜಧಾನಿಯಲ್ಲಿ ಉತ್ತಮ ಫಲಿತಾಂಶ ಬಂದರೆ ಅಧಿಕಾರ ಹಿಡಿಯಲು ಸರಾಗವಾಗುತ್ತದೆ. ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರು ಅಭಿವೃದ್ಧಿ ಖಾತೆಯನ್ನು ನಿರ್ವಹಣೆ ಮಾಡುತ್ತಿದ್ದಾರೆ. ಇಷ್ಟೆಲ್ಲ ದೊಡ್ಡ ಮೊತ್ತದ ಕಾಮಗಾರಿಗಳ ʼಲಾಭʼ, ಬಿಬಿಎಂಪಿ ಸದಸ್ಯರೊಂದಿಗೆ ಹಂಚಿಕೆ ಆಗುವುದು ಯಾವುದೆ ಶಾಸಕರಿಗೆ ಬೇಕಾಗಿಲ್ಲ. ಆದ್ಧರಿಂದ ಬಿಬಿಎಂಪಿ ಚುನಾವಣೆಗೆ ಶಾಸಕರು ಹಿಂದೇಟು ಹಾಕುತ್ತಿದ್ದಾರೆ ಎನ್ನುವುದು ಮೂಲಗಳ ಮಾಹಿತಿ.
3. ಬಂಡಾಯದ ಆತಂಕ
ಬಿಬಿಎಂಪಿ ಚುನಾವಣೆಗೆ ಸ್ವತಃ ಶಾಸಕರೇ ಹಿಂದೇಟು ಹಾಕುತ್ತಿರುವುದಕ್ಕೇ ಮೂರನೇ ಕಾರಣವೂ ವಿಧಾನಸಭೆ ಚುನಾವಣೆಯೇ. ಪ್ರತಿ ವಾರ್ಡ್‌ನಲ್ಲಿ ನಾಲ್ಕರಿಂದ ಐದು ಅಭ್ಯರ್ಥಿಗಳ ನಡುವೆ ಪೈಪೋಟಿ ಜೋರಾಗಿದೆ. ವಲಸಿಗ ಶಾಸಕರ ಕ್ಷೇತ್ರಗಳಲ್ಲಿಯೇ ಮೂಲ ಮತ್ತು ವಲಸಿಗ ಕಾರ್ಯಕರ್ತರ ನಡುವೆ ಬಾರಿ ಪೈಪೋಟಿ ಶುರುವಾಗಿದೆ. ಯಾರಿಗೆ ಚುನಾವಣಾ ಟಿಕೆಟ್ ನೀಡಿದರೂ, ಉಳಿದವರು ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ವಿರುದ್ಧ ಕೆಲಸ ಮಾಡುವ ಭೀತಿಯನ್ನು ಶಾಸಕರು ಎದುರಿಸುತ್ತಾರೆ. ಇದರಿಂದ ತಪ್ಪಿಸಿಕೊಳ್ಳಲು ಚುನಾವಣೆ ಮುಂದೂಡಿಕೆಯೇ ಮಾರ್ಗ ಕಂಡುಕೊಂಡಿದ್ದಾರೆ. ಪಕ್ಷಾತೀತವಾಗಿ ಒಗ್ಗೂಡಿರುವ ಬೆಂಗಳೂರು ಶಾಸಕರು ಚುನಾವಣೆ ಮುಂದೂಡಿಕೆಯ ಜಪಮಂತ್ರವನ್ನು ಪಠಣೆ ಮಾಡುತ್ತಿದ್ದಾರೆ.
ಇದನ್ನೂ ಓದಿ | BBMP ELECTION | ರಾಜ್ಯ ಸರ್ಕಾರಕ್ಕೆ ವಾರ್ಡ್ ಮರುವಿಂಗಡಣೆ ಪಟ್ಟಿ ಸಲ್ಲಿಸಿದ ಬಿಬಿಎಂಪಿ