Site icon Vistara News

Modi In Bengaluru | CM ಫೋನ್‌ ಮಾಡಿ 3 ಗಂಟೆಯ ನಂತರ ಎಚ್‌.ಡಿ. ದೇವೇಗೌಡರಿಗೆ ಬಂತಾ ಇನ್ವಿಟೇಷನ್‌?

devegegowda letter

ಬೆಂಗಳೂರು: ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಅನಾವರಣಕ್ಕೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರನ್ನು ಆಹ್ವಾನಿಸದೇ ಇರುವುದನ್ನು ಜೆಡಿಎಸ್‌ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಶನಿವಾರವೂ ಎಂಟು ಸರಣಿ ಟ್ವೀಟ್‌ ಮೂಲಕ ಬಿಜೆಪಿ ವಿರುದ್ಧ ಹರಿಹಾಯ್ದಿದೆ.

ಪ್ರಧಾನಿ ಸ್ಥಾನಕ್ಕೇರಿದ ಮೊದಲ ಹಾಗೂ ಇಲ್ಲಿವರೆಗಿನ ಏಕೈಕ ಕನ್ನಡಿಗ ಎಂಬ ಹೆಗ್ಗಳಿಕೆ ಹೊಂದಿರುವ ದೇವೇಗೌಡರನ್ನು ಆಹ್ವಾನಿಸದೇ ಇರುವುದಕ್ಕೆ ಶುಕ್ರವಾರ ಸರಣಿ ಟ್ವೀಟ್‌ ಮೂಲಕ ಹರಿಹಾಯ್ದಿದ್ದ ಜೆಡಿಎಸ್‌, ಶನಿವಾರವೂ ಮುಂದುವರಿಸಿದೆ.

ದೇವೇಗೌಡರಿಗೆ ಆಹ್ವಾನ ಪತ್ರವನ್ನು ತಲುಪಿಸಲಾಗಿದೆ ಎಂದು ಬಿಜೆಪಿ ಹೇಳುತ್ತಿರುವುದರ ಕುರಿತು ಪ್ರತಿಕ್ರಿಯಿಸಿರುವ ಜೆಡಿಎಸ್‌, “ಮಾಡಿದ ತಪ್ಪನ್ನೇ ಲಜ್ಜೆಗೆಟ್ಟು ಸಮರ್ಥಿಸಿಕೊಳ್ಳುವುದು ಕಮಲಪಕ್ಷಕ್ಕೆ ಸಿದ್ಧಿಸಿರುವ ಕಲೆ. ಅಧಿಕೃತ ಆಹ್ವಾನ ಪತ್ರಿಕೆಯಲ್ಲಿ ಹೆಸರಿಲ್ಲ! ಆದರೆ; ಮುಖ್ಯಮಂತ್ರಿಗಳೇ ಪತ್ರ ಬರೆದು ಶ್ರೀ ಎಚ್‌.ಡಿ. ದೇವೇಗೌಡ ಅವರನ್ನು ಆಹ್ವಾನಿಸಿದ್ದಾರೆಂದು ಜನರ ದಿಕ್ಕು ತಪ್ಪಿಸುತ್ತಿರುವ ರಾಜ್ಯ ಬಿಜೆಪಿ ಸರ್ಕಾರ , ಅಸಲಿ ಕಥೆಯನ್ನೇ ಮುಚ್ಚಿಡುತ್ತಿದೆ. ಮುಖ್ಯಮಂತ್ರಿಗಳು, ಮಾಜಿ ಪ್ರಧಾನಿಗಳಿಗೆ ಕರೆ ಮಾಡಿ ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಆಹ್ವಾನಿಸಿ ಪತ್ರ ಬರೆದಿದ್ದಾರೆ ಎಂದು ಬಿಜೆಪಿ ಟ್ವೀಟಿಸಿದೆ. ಸರಿ; ನವೆಂಬರ್‌ 11ರ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು, ಪತ್ರ ಬರೆದಿದ್ದು ಯಾವಾಗ? ಆ ಪತ್ರವನ್ನು ಮಾಜಿ ಪ್ರಧಾನಿಗಳ ನಿವಾಸಕ್ಕೆ ತಲುಪಿಸಿದ್ದು ಯಾವಾಗ?”.

“ಕಮಲದವರ ಕಣ್ಣಿಗೆ ಕಾಮಾಲೆ ಬಡಿದಿದೆಯಾ, ಹೇಗೆ? ಘನವೇತ್ತ ಮಾನ್ಯ ಮುಖ್ಯಮಂತ್ರಿಗಳು ಬರೆದ ʼಘನವೇತ್ತʼ ಪತ್ರವನ್ನೊಮ್ಮೆ ʼಸಂಘಸಂಸ್ಕಾರʼದ ಬಿಜೆಪಿಗರು ಗಮನಿಸಬೇಕು. ಪತ್ರದಲ್ಲಿ ಮಾಜಿ ಪ್ರಧಾನಿಗಳ ಹೆಸರೆಲ್ಲಿ ಬರೆಯಲ್ಪಟ್ಟಿದೆ? (ಕೊನೆಯಲ್ಲಿ) ಕನ್ನಡ ನೆಲದ ಏಕೈಕ ಪ್ರಧಾನಿಯಾಗಿದ್ದ ಮೇರು ನಾಯಕರಿಗೆ ಪತ್ರ ಬರೆಯುವ ಸಂಸ್ಕಾರ, ಶಿಷ್ಟಾಚಾರ ಇದೇನಾ?”

“ಮರುದಿನ 12.50ರ ಸಮಾರಂಭಕ್ಕೆ ರಾತ್ರಿ 9 ಗಂಟೆಗೆ ಮಾಜಿ ಪ್ರಧಾನಿಗಳಿಗೆ ಕಾಟಾಚಾರದ ಕರೆ ಮಾಡಿದ ಮುಖ್ಯಮಂತ್ರಿಗಳು, ತಾವು ಬರೆದ ಪತ್ರವನ್ನು ತಲುಪಿಸಿದ್ದು ಮಧ್ಯರಾತ್ರಿ 12.30 ಗಂಟೆಗೆ!! ಹಾಗಾದರೆ, ಅವರ ಮೊದಲ ಪತ್ರ ಹೋಗಿದ್ದು ಯಾರಿಗೆ? ಇಂಥ ಹಿರಿಯರ ವಿಷಯದಲ್ಲಿ ಜಬಾಬ್ದಾರಿ ಸ್ಥಾನದಲ್ಲಿರುವ ಮುಖ್ಯಮಂತ್ರಿಗಳು ವರ್ತಿಸುವ ರೀತಿ ಹೀಗೇನಾ?” ಎಂದಿರುವ ಜೆಡಿಎಸ್‌, ಪತ್ರದ ಕೊನೆಯಲ್ಲಿ ದೇವೇಗೌಡರ ಹೆಸರು ಬರೆದಿರುವುದನ್ನು ಆಕ್ಷೇಪಿಸಿದೆ.

ಕನ್ನಡ ಅಸ್ಮಿತೆಯಿಂದ ಕುಟುಂಬ ರಾಜಕಾರಣದವರೆಗೆ ಬಿಜೆಪಿಯನ್ನು ಜೆಡಿಎಸ್‌ ಎಳೆದು ತಂದಿದೆ. “ಇನ್ನು ಕನ್ನಡದ ಆಸ್ಮಿತೆ ಪ್ರಶ್ನೆ. ಬಿಜೆಪಿಗೆ ನಾಚಿಕೆಯಾಗಬೇಕು, ಹಿಂದಿ ಹೇರಿಕೆ ವಾಕರಿಕೆ ಬರುವಷ್ಟಿದೆ. ಉದ್ಯೋಗದಲ್ಲಿ ಕನ್ನಡಿಗರಿಗೆ ಪಂಗನಾಮ, ಈ ನೆಲದ ಸಂಸ್ಕೃತಿ, ಭಾಷೆ, ಆಚಾರ-ವಿಚಾರಗಳನ್ನು ಹತ್ತಿಕ್ಕಿ,ಇಡೀ ದಕ್ಷಿಣ ಭಾರತೀಯರನ್ನು ದೆಹಲಿ ಗುಲಾಮರನ್ನಾಗಿ ಮಾಡಲು ಹೊರಟಿರುವ ಬಿಜೆಪಿಗರಾ ಕನ್ನಡದ ಮಣ್ಣಿನ ಮಕ್ಕಳನ್ನು ಗುರುತಿಸಿದ್ದು?
‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’; ಇದು ಭಾರತ ಕಂಡ ಪರಮ ಢೋಂಗೀ ಘೋಷಣೆ. ಇದಕ್ಕೆ ʼಸಬ್ ಕಾ ಸರ್ವನಾಶ್ʼ ಎಂದು ಸೇರಿದರೆ ಪರಿಪೂರ್ಣ. ಕರ್ನಾಟಕದಲ್ಲಿ ಶಿಕ್ಷಣ, ಧರ್ಮ, ಜಾತಿ, ಆಚಾರ, ವಿಚಾರ, ಆಹಾರ, ಉಡುಪುಗಳ ವಿಷಯದಲ್ಲೂ ಬಿಜೆಪಿ ಮಾಡಿದ್ದು ಸಾಕ್ಷಾತ್ ಸರ್ವನಾಶವೇ.
ಕುಟುಂಬ ರಾಜಕಾರಣ ಅಂತೀರಾ? ಗುಜರಾತಿನಿಂದ ಶುರುವಾಗಿ ದೆಹಲಿವರೆಗೂ ಹಬ್ಬಿ, ಬಿಸಿಸಿಐ ಒಳಹೊಕ್ಕಿ ಕೂತಿದ್ದು ಯಾರ ಕುಟುಂಬ? ಕರ್ನಾಟಕದಲ್ಲಿ ಬೆಳೆದು ನಿಂತ ಬಿಜೆಪಿ ವಂಶವೃಕ್ಷಗಳೆಷ್ಟು? ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ, ಗುಜರಾತ್ ನಿಂದ ಒಡಿಶಾವರೆಗೆ ವ್ಯಾಪಿಸಿರುವ ಬಿಜೆಪಿ ವಂಶವೃಕ್ಷಗಳ ಕೊಂಬೆಗಳ ಲೆಕ್ಕ ಬಿಚ್ಚಿಡಬೇಕೆ?” ಎಂದು ಆಕ್ರೋಶ ಹೊರಹಾಕಿದೆ.

ಇದನ್ನೂ ಓದಿ | Modi In Bengaluru | ರಾಜ್ಯ ಸರ್ಕಾರ ಎಚ್‌.ಡಿ. ದೇವೇಗೌಡರಿಗೆ ಅವಮಾನ ಮಾಡಿದೆ ಎಂದ ಜೆಡಿಎಸ್‌, ಸಾಮಾಜಿಕ ಜಾಲತಾಣದಲ್ಲಿ ಬಿರುಸಿನ ಚರ್ಚೆ

Exit mobile version