ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚಿಗೆ ತಾವು ಕೈಗೊಂಡ ನಿರ್ಧಾರ ಸರಿಯಾಗಿದೆ ಎಂಬುದನ್ನು ಬೆಂಗಳೂರು ಜನರು ತಿಳಿಸಿಕೊಟ್ಟರು.
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಇಂದಿಗೂ, 75 ವರ್ಷ ದಾಟಿದ ನಂತರವೂ ಕರ್ನಾಟಕದ ಮಾಸ್ ಲೀಡರ್ ಎನ್ನುವುದನ್ನು ಮೋದಿ ತಮ್ಮ ಕಣ್ಣಾರೆ ಕಂಡರು.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್ ಹಾಗೂ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಲೋಕಾರ್ಪಣೆ ಮಾಡಿದ ನಂತರ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ಲಕ್ಷಾಂತರ ಜನರು ಸೇರಿದ್ದ ಕಾರ್ಯಕ್ರಮದಲ್ಲಿ ಪ್ರಾರಂಭದಲ್ಲಿ ಆದಿ ಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿದರು.
ನಂತರ ಆಗಮಿಸಿದ ಪ್ರಧಾನಿ ಮೋದಿ, ಕರ್ನಾಟಕದ ಸಮಸ್ತ ಜನತೆಗೆ ನನ್ನ ನಮಸ್ಕಾರಗಳು ಎಂದು ಕನ್ನಡದಲ್ಲಿ ಹೇಳಿದಾಗ ಜನಸಮೂಹ ಸಂಭ್ರಮಿಸಿತು. ಆನಂತರ ವೇದಿಕೆ ಮೇಲಿದ್ದವರ ಹೆಸರುಗಳನ್ನು ಹೇಳಲು ಆರಂಭಿಸಿದರು. ರಾಜ್ಯಪಾಲ ಥಾವರ್‌ಚಂದ್ ಗೆಹ್ಲೊಟ್, ಸಿಎಂ ಬಸವರಾಜ ಬೊಮ್ಮಾಯಿ ಹೆಸರು ಹೇಳಿದರು, ಜನರು ಸುಮ್ಮನಿದ್ದರು. ನಂತರ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೆಸರು ಹೇಳುತ್ತಿದ್ದಂತೆಯೇ ಇಡೀ ಜನಸಮೂಹ ಶಿಳ್ಳೆ, ಚಪ್ಪಾಳೆ ಮೂಲಕ ಮುಗಿಲು ಮುಟ್ಟುವಂತೆ ಗರ್ಜಿಸಿತು.
ಒಂದರ್ಧ ಸೆಕೆಂಡ್ ಸ್ವತಃ ನರೇಂದ್ರ ಮೋದಿ, ವೇದಿಕೆ ಮೇಲಿದ್ದವರೆಲ್ಲ ಈ ಸಂಭ್ರಮವನ್ನು ಕಂಡರು. 2019ರಲ್ಲಿ ಮುಖ್ಯಮಂತ್ರಿ ಆಗಿದ್ದ ಯಡಿಯೂರಪ್ಪ ಅವರು ವಯಸ್ಸಿನ ಕಾರಣಕ್ಕೆ 2021ರಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಯಡಿಯೂರಪ್ಪ ಅವರ ಮಾಸ್ ಅಪೀಲ್ ಮುಕ್ತಾಯವಾಗಿರುವ ಕಾರಣ ಹೊಸ ನಾಯಕತ್ವ ರೂಪಿಸಲು ಈ ನಡೆಯನ್ನು ಬಿಜೆಪಿ ವರಿಷ್ಠರು ಇರಿಸಿದ್ದರು.
ಆದರೆ ಚುನಾವಣೆ ಸಮೀಪಿಸುತ್ತಿರುವಂತೆ ಯಡಿಯೂರಪ್ಪ ಅವರ ನಾಯಕತ್ವದ ಅರಿವು ಬಿಜೆಪಿ ವರಿಷ್ಠರಿಗೆ ಮನವಿಕೆ ಆಗಿತ್ತು. ಒಂದು ಕಡೆ ಪ್ರಬಲ ವೀರಶೈವ ಲಿಂಗಾಯ ಸಮುದಾಯದ ಬೆಂಬಲ ಹಾಗೂ ಒಟ್ಟಾರೆಯಾಗಿ ಸಾರ್ವಜನಿಕ ಬೆಂಬಲಕ್ಕಾಗಿ ಯಡಿಯೂರಪ್ಪ ಅನಿವಾರ್ಯ ಎಂಬ ನಿರ್ಧಾರಕ್ಕೆ ಬಂದಿದ್ದರು. ಆಗಸ್ಟ್ 2022ರಲ್ಲಿ ಯಡಿಯೂರಪ್ಪ ಅವರನ್ನು ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಹಾಗೂ ಚುನಾವಣಾ ಸಮಿತಿ ಸದಸ್ಯರಾಗಿ ನೇಮಕ ಮಅಡಲಾಗಿತ್ತು.
ಯಡಿಯೂರಪ್ಪ ಅವರನ್ನು ಮತ್ತೆ ಮುಖ್ಯವಾಹಿನಿಗೆ ತಂದ ತಮ್ಮ ನಿರ್ಧಾರ ಸರಿಯಾಗಿತ್ತು ಎಂಬ ಸಂದೇಶವನ್ನು ಬಿಜೆಪಿ ವರಿಷ್ಠರಿಗೆ ಬೆಂಗಳೂರಿಗರು ಶುಕ್ರವಾರದ ಕಾರ್ಯಕ್ರಮದ ಮೂಲಕ ನೀಡಿದ್ದಾರೆ.
ಇದನ್ನೂ ಓದಿ | ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರೋದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಬಿ.ಎಸ್.ಯಡಿಯೂರಪ್ಪ