ಬೆಂಗಳೂರು: ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಪತಿಯೇ ಪತ್ನಿ ಹಾಗೂ ಪ್ರಿಯಕರನನ್ನು ಕೊಲೆ (Murder case) ಮಾಡಿದ್ದಾನೆ. ಪೈತಮ್ಮ (40), ಗಣೇಶ್ ಕುಮಾರ್ ಕೊಲೆಯಾದವರು. ಗೊಲ್ಲಬಾಬು ಕೊಲೆಗೈದು ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಇವರೆಲ್ಲರೂ ಮೂಲತಃ ಆಂಧ್ರ ಪ್ರದೇಶದವರು ಎಂದು ತಿಳಿದು ಬಂದಿದೆ.
ಪೈತಮ್ಮ (40), ಗೊಲ್ಲಬಾಬು (45) ದಂಪತಿ ಕೆಲಸ ಅರಸಿ ಆಂಧ್ರಪ್ರದೇಶದಿಂದ ಬೆಂಗಳೂರಿಗೆ ಬಂದಿದ್ದರು. ಕೆಲ ವರ್ಷಗಳಿಂದ ಬೆಂಗಳೂರಿನಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದರು. ಪತ್ನಿ ಪೈತಮ್ಮ ಮೇಲೆ ಆಗಾಗ ಗೊಲ್ಲಬಾಬು ಅನುಮಾನ ವ್ಯಕ್ತ ಪಡಿಸಿದ್ದ. ನಿನ್ನೆ ತಡರಾತ್ರಿಯಲ್ಲಿ ಗಣೇಶ್ ಕುಮಾರ್ ಜತೆಗಿದ್ದಾಗಲೇ ಪೈತಮ್ಮ ಪತಿಗೆ ಸಿಕ್ಕಿಬಿದ್ದಿದ್ದಳು.
ಮತ್ತೊಬ್ಬನೊಟ್ಟಿಗೆ ಪತ್ನಿಯನ್ನು ಕಂಡೊಡನೆ ಸಿಟ್ಟಾದ ಗೊಲ್ಲಬಾಬು ಅಲ್ಲೇ ಇದ್ದ ಮರದ ರಿಪೀಸ್‌ನಿಂದ ಹಲ್ಲೆ ನಡೆಸಿ, ಇಬ್ಬರನ್ನು ಕೊಲೆ ಮಾಡಿದ್ದಾನೆ. ನಂತರ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆರ್ ಬಿ ಐ ಲೇಔಟ್ ಸಮೀಪದ ಸೋಮೇಶ್ವರ ಬಡಾವಣೆಯ ನಿರ್ಮಾಣ ಹಂತದ ಕಟ್ಟಡದಲ್ಲಿ ಈ ಕೃತ್ಯ ನಡೆದಿದೆ.
ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೂವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.