ಬೆಂಗಳೂರು: ಮಹಾಲಕ್ಷ್ಮಿ ಲೇಔಟ್‌ನಲ್ಲಿ ಗೃಹಿಣಿಯೊಬ್ಬಳು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಳು. ಇದೀಗ ಪ್ರಕರಣವನ್ನು ಭೇದಿಸಿರುವ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಮಹಿಳೆಯ ಶವ ನೋಡಿದ ಪೊಲೀಸರಿಗೆ ಸಣ್ಣದೊಂದು ಅನುಮಾನ ಬಂದಿತ್ತು. ಮೊದಮೊದಲು ಆತ್ಮಹತ್ಯೆ ಎಂದುಕೊಂಡಿದ್ದ ಪ್ರಕರಣವು ಹತ್ಯೆಯಾಗಿ (Murder Case) ಬದಲಾಗಿದೆ.
ಕಳೆದ ಫೆ.4ರ ಭಾನುವಾರದಂದು ಪ್ರೇಮಲತಾ ಎಂಬಾಕೆ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು. ಐದು ಅಡಿ ಎತ್ತರದ ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಮೊದಲಿಗೆ ಆತ್ಮಹತ್ಯೆ ಎಂದು ಬಿಂಬಿಸಲಾಗಿತ್ತು. ನಂತರ ತನಿಖೆಗಿಳಿದ ಪೊಲೀಸರಿಗೆ ಇದು ಆತ್ಮಹತ್ಯೆ ಅಲ್ಲ ಬದಲಿಗೆ ಕೊಲೆ ಎಂದು ತಿಳಿದಿತ್ತು. ಪ್ರೇಮಲತಾ ಹತ್ಯೆಗೆ ಆಕೆಯ ಪತಿ ಶಿವಶಂಕರ್ ಸ್ನೇಹಿತ ವಿನಯ್‌ಗೆ ಸುಪಾರಿ ನೀಡಿದ್ದ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: Country made bomb: ಬಹಿರ್ದೆಸೆಗೆ ಹೋದವ ಹೊಳೆಯುವ ವಸ್ತು ಕಂಡು ಒತ್ತಿದ; ಸ್ಫೋಟಕ್ಕೆ ಕೈ ಬೆರಳು ಛಿದ್ರ!
ಪತ್ನಿ ಶೀಲ ಶಂಕಿಸಿದ್ದ ಶಿವಶಂಕರ
ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ಪ್ರೇಮಲತಾಳ ಮೇಲೆ ಪತಿ ಶಿವಶಂಕರ್‌ಗೆ ವಿಪರೀತ ಅನುಮಾನವಿತ್ತು. ಆಕೆ ಬೇರೆಯವರ ಜತೆ ದೈಹಿಕ ಸಂಪರ್ಕ ಹೊಂದಿದ್ದಾಳೆ, ತನಗೆ ವಂಚನೆ ಮಾಡುತ್ತಿದ್ದಾಳೆ ಎಂದುಕೊಂಡಿದ್ದ. ಈ ವಿಚಾರವಾಗಿ ಅನೇಕ ಬಾರಿ ಪತ್ನಿ ಪ್ರೇಮಲತಾ ಜತೆ ಜಗಳವಾಡಿದ್ದ. ಒಂದು ಹೆಜ್ಜೆ ಮುಂದೆ ಹೋಗಿ ಪತ್ನಿಗೆ ತಿಳಿಯದಂತೆ ಮನೆಗೆ ಸಿಸಿಟಿವಿ ಅಳವಡಿಕೆ ಮಾಡಿದ್ದ. ಆದರೂ ಆತನಿಗೆ ಪತ್ನಿಯ ಮೇಲಿನ ಅನುಮಾನ ಕಡಿಮೆ ಆಗಿರಲಿಲ್ಲ.
ವಾಮಾಚಾರ ಮಾಡಿಸಿ, ಸುಪಾರಿ ಕೊಟ್ಟ
ನನಗೆ ಮೋಸ ಮಾಡುತ್ತಿದ್ದಾಳೆ ಎಂದು ಸಿಟ್ಟಿಗೆದ್ದ ಶಿವಶಂಕರ, ಈ ಹಿಂದೆ ಪತ್ನಿ ಮೇಲೆ ವಾಮಾಚಾರ ಮಾಡಿಸಿದ್ದ. ಆದರೆ ಅದರಿಂದ ಯಾವುದೇ ಎಫೆಕ್ಟ್ ಆಗಲಿಲ್ಲ. ಕಡೆಗೆ ಪತ್ನಿಯನ್ನು ಕೊಂದು ಬಿಡುವ ಎಂದುಕೊಂಡಿದ್ದ. ಹತ್ಯೆಗೆ ಹೊಂಚು ಹಾಕುತ್ತಿದ್ದ ಶಿವಶಂಕರ್‌ಗೆ ಹಂತಕ ವಿನಯ್ ಪರಿಚಯವಾಗಿದ್ದ. ಐಡಿಎಫ್‌ಸಿ ಬ್ಯಾಂಕ್ ಸಂಬಂಧಿತ ಕೆಲಸಗಳಲ್ಲಿ ವಿನಯ್ ಆಪ್ತ ಸ್ನೇಹಿತನಾಗಿದ್ದ. ಈ ಮೊದಲು ವಿನಯ್ ಕೂಡ ಪತ್ನಿಯ ಶೀಲ ಶಂಕಿಸಿ ಕೊಲೆ ಕೇಸ್‌ನಲ್ಲಿ ಜೈಲಿಗೆ ಹೋಗಿ ಬಂದಿದ್ದ, ಈ ಬಗ್ಗೆ ಶಿವಶಂಕರ್ ಬಳಿ ಎಲ್ಲವನ್ನೂ ಹೇಳಿಕೊಂಡಿದ್ದ.
ಹುಣಸಮಾರನಹಳ್ಳಿ ಬಳಿ ಇರುವ ಕೆರೆಯಲ್ಲಿ ವಿನಯ್ ಪತ್ನಿ ಶವ ಪತ್ತೆಯಾಗಿತ್ತು. ಮೊದಲಿಗೆ ಆತ್ಮಹತ್ಯೆ ಎಂದುಕೊಂಡಿದ್ದ ಪೊಲೀಸರಿಗೆ ಫೊರೆನ್ಸಿಕ್ ರಿಪೋರ್ಟ್‌ನಲ್ಲಿ ಯಾರೋ ಹಿಂದಿನಿಂದ ನೀರಿಗೆ ದಬ್ಬಿ ಕೊಂದು ಹಾಕಿರುವುದು ಬೆಳಕಿಗೆ ಬಂದಿತ್ತು. ಹೀಗಾಗಿ ವಿನಯ್‌ನನ್ನು ಬಂಧಿಸಿ ಜೈಲಿಗೆ ಕಳಿಸಿದ್ದರು.
ಇದನ್ನೂ ಓದಿ: Road Accident : ಗೂಡ್ಸ್ ವಾಹನಕ್ಕೆ ಕ್ರೂಜರ್ ಡಿಕ್ಕಿ; ಮಹಿಳೆ ಸಾವು, ಮೂವರು ಗಂಭೀರ
ಈ ವಿಚಾರ ಶಿವಶಂಕರ್‌ಗೆ ಕನೆಕ್ಟ್ ಆಗಿತ್ತು. ಹೀಗಾಗಿ ವಿನಯ್ ಜತೆಗೆ ಶಿವಶಂಕರ್ ತನ್ನ ಸಮಸ್ಯೆ ಹೇಳಿಕೊಂಡಿದ್ದ. ಪತ್ನಿಯನ್ನು ಕೊಲ್ಲಲ್ಲು ಸುಪಾರಿ ಕೊಟ್ಟು ಇಂತಿಷ್ಟು ಹಣ ನೀಡಿದ್ದ. ಅಷ್ಟೆ ಅಲ್ಲದೆ ಸಾಕ್ಷಿ ಸಿಗಬಾರದೆಂದು ಕೊಲೆಯ ದಿನ ಮನೆಗೆ ಅಳವಡಿಸಿದ್ದ ಸಿಸಿಟಿವಿ ತೆಗೆದು ಹಾಕಿದ್ದ.
ತನ್ನ ಮನೆಯ ಫೋಟೊವನ್ನು ವಿನಯ್‌ಗೆ ಕಳಿಸಿದ್ದ. ಕೊಲೆಯಾದ ದಿನ ಶಿವಶಂಕರ್ ತಾನು ಮನೆಯಲ್ಲಿ ಇರಲಿಲ್ಲ ಎಂದು ಬಿಂಬಿಸಿಕೊಳ್ಳಲು ಹೊರಗಡೆ ಹೋಗಿದ್ದ. ನಂತರ ಮನೆಗೆ ಬಂದಿದ್ದ ವಿನಯ್, ಪ್ರೇಮಲತಾಳನ್ನು ಉಸಿರುಗಟ್ಟಿಸಿ ಕೊಂದು ಹಾಕಿದ್ದ. ನಂತರ ಆತ್ಮಹತ್ಯೆ ಎಂದು ಬಿಂಬಿಸಲು ನೇಣು ಬಿಗಿದು ಪರಾರಿಯಾಗಿದ್ದ.
ಇನ್ನು ಈ ಸಂಬಂಧ ಪೊಲೀಸರಿಗೆ ಯಾವುದೇ ಕ್ಲೂ ಇರಲಿಲ್ಲ. ಸಿಡಿಆರ್‌ನಲ್ಲಿ ಕೂಡ ಶಿವಶಂಕರ್ ಲೊಕೇಷನ್ ಬೇರೆ ಕಡೆಯೇ ತೋರಿಸುತಿತ್ತು. ಹೀಗಾಗಿ ಆತ ಕೊಲೆ ಮಾಡಿದ್ದಾನೆ ಎಂಬುದಕ್ಕೆ ಸಾಕ್ಷಿ ಇರಲಿಲ್ಲ. ಸುಮಾರು 200ಕ್ಕೂ ಹೆಚ್ಚು ಸಿಸಿಟಿವಿ ಪರಿಶೀಲನೆ ನಡೆಸಿದಾಗ ಒಂದರಲ್ಲಿ ಕಾಣಿಸಿಕೊಂಡ ಹಂತಕನ ಬ್ಯಾಗ್ ಇಡೀ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟಿತ್ತು. ಆರೋಪಿಗಳನ್ನು ಬಂಧಿಸಿರುವ ಮಹಾಲಕ್ಷ್ಮಿ ಲೇಔಟ್ ಪೊಲೀಸರು ವಿಚಾರಣೆಯನ್ನು ಮುಂದುವರಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ