ಬೆಂಗಳೂರು: ಪತ್ನಿ ತನ್ನನ್ನು ದೂರ ಮಾಡಿದ್ದರಿಂದ ಡಿಪ್ರೆಷನ್‌ಗೆ ಒಳಗಾದ ವ್ಯಕ್ತಿಯೊಬ್ಬ ಆಕೆಯ ಸಂಬಂಧಿ ಮಹಿಳೆಯನ್ನು ಕೊಲೆ (Murder Case) ಮಾಡಿದ್ದಾನೆ. ಬೆಂಗಳೂರಿನ ಜೆಜೆ ನಗರದ ನಾಲ್ಕನೆ ಕ್ರಾಸ್‌ನಲ್ಲಿ ಈ ಘಟನೆ ನಡೆದಿದೆ.
ಪರ್ವಿನ್ ತಾಜ್ ಹಲ್ಲೆಗೀಡಾಗಿ ಮೃತಪಟ್ಟ ಮಹಿಳೆ. ಮಹಮ್ಮದ್ ಜುನೈದ್ ಎಂಬಾತನಿಂದ ಕೊಲೆ ನಡೆದಿದೆ. ಆರೋಪಿ ಮತ್ತು ಮೃತ ಮಹಿಳೆ ಸಂಬಂಧಿಗಳಾಗಿದ್ದಾರೆ. ಜುನೈದ್ ಹಾಗೂ ಆತನ ಪತ್ನಿ ಜಗಳವಾಡಿಕೊಂಡಿದ್ದರು. ಈ ವಿಚಾರ ಪೊಲೀಸ್ ಠಾಣೆ ಮೆಟ್ಟಿಲೇರಿ ಇಬ್ಬರಿಗೂ ಬುದ್ಧಿವಾದ ಹೇಳಿ ಕಳಿಸಲಾಗಿತ್ತು.
ಇದಾದ ಮೇಲೆ ಜುನೈದ್ ಪತ್ನಿಯಿಂದ ದೂರಾಗಿದ್ದ. ಪತ್ನಿಯಿಂದ ದೂರವಾಗಿ ಡಿಪ್ರೆಶನ್‌ಗೆ ಒಳಗಾಗಿದ್ದ. ಪತ್ನಿ ದೂರವಾದುದರಿಂದ ಮಾನಸಿಕವಾಗಿ ನೊಂದಿದ್ದ. ಈ ವೇಳೆ ಆತ ಪರ್ವಿನ್ ತಾಜ್‌ಗೆ ಹತ್ತಿರವಾಗಿದ್ದ. ಪರ್ವಿನ್ ತಾಜ್ ಆರೋಪಿಯ ಪತ್ನಿಯ ಸಂಬಂಧಿಯಾಗಿದ್ದಳು. ಆದರೆ ಇತ್ತೀಚೆಗೆ ಪರ್ವಿನ್ ಸಹ ಜುನೈದ್‌ನನ್ನು ದೂರವಿಟ್ಟಿದ್ದಳು.
ಈ ವಿಚಾರಕ್ಕೆ ಕೋಪಗೊಂಡಿದ್ದ ಆರೋಪಿ ಜುನೈದ್, ಚಾಕು ಸಹಿತ ನೇರವಾಗಿ ಪರ್ವಿನ್ ಮನೆಗೆ ಹೋಗಿದ್ದ. ಪರ್ವಿನ್ ಮನೆಯಲ್ಲಿ ಯಾರೂ ಇಲ್ಲದ ವೇಳೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಪರ್ವಿನ್ ಮೃತ ದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಸಂಬಂಧ ಜೆಜೆ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ. ಪರಾರಿಯಾಗಿರುವ ಆರೋಪಿ ಜುನೈದ್‌ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಮಗನಿಂದ ವೃದ್ಧ ದಂಪತಿಯ ಕೊಲೆ
ದೇವನಹಳ್ಳಿ: ಮನೆಯಲ್ಲಿದ್ದ ವೃದ್ಧ ದಂಪತಿಯನ್ನು ರಾಡ್‌ನಿಂದ ಹೊಡೆದು ಕೊಲೆ (Murder Case) ಮಾಡಿರುವ ಘಟನೆ ಬೆಂ. ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸೂಲಿಬೆಲೆಯಲ್ಲಿ ನಡೆದಿದೆ. ಆಸ್ತಿ ವಿಚಾರಕ್ಕೆ ಮಗನೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಸೂಲಿಬೆಲೆಯ ರಾಮಕೃಷ್ಣಪ್ಪ (70) ಮತ್ತು ಮುನಿರಾಮಕ್ಕ (65) ಕೊಲೆಯಾದ ದಂಪತಿ. ರಾಡ್‌ನಿಂದ ಹೊಡೆದು ತಂದೆ-ತಾಯಿಯನ್ನು ಕೊಲೆ ಮಾಡಿದ ಆರೋಪ ಕೇಳಿಬಂದಿದ್ದರಿಂದ ಮಗ ನರಸಿಂಹನನ್ನು ಸೂಲಿಬೆಲೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಮದುವೆಯಾದ ಬಳಿಕ ತಂದೆ-ತಾಯಿ ಬಿಟ್ಟು ಪ್ರತ್ಯೇಕವಾಗಿ ಮಗ ವಾಸವಾಗಿದ್ದ. ಒಬ್ಬನೇ ಮಗನಾಗಿದ್ದರೂ ತಂದೆ ತಾಯಿಯನ್ನು ಹೊರಗಿಟ್ಟಿದ್ದ. ವೃದ್ಧ ದಂಪತಿ ಹೆಣ್ಣು ಮಕ್ಕಳಿಗೆ ಆಸ್ತಿ ಕೊಡಲು ಮುಂದಾಗಿದ್ದಕ್ಕೆ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳಕ್ಕೆ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಜೋಡಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಅಮಾಯಕ, ಲಾ ಓದಿ ತನ್ನ ಕೇಸನ್ನು ತಾನೇ ಗೆದ್ದ!