ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕ್ರೈಂ ರೇಟ್ ಹೆಚ್ಚಾಗುತ್ತಿದ್ದು, ಪೊಲೀಸರ ಭಯವಿಲ್ಲದಂತಾಗಿದೆ. ನಿನ್ನೆಯಷ್ಟೇ ಯುವಕನೊಬ್ಬ ಬರ್ಬರವಾಗಿ ಕೊಲೆಯಾಗಿದ್ದ, ಇದೀಗ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬ (Murder case) ಹತ್ಯೆಯಾಗಿದ್ದಾನೆ. ಬೆಂಗಳೂರಿನ ಶ್ರೀರಾಂಪುರ ಪೊಲೀಸ್ ಠಾಣಾ (Srirampura Police Station) ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕುಮಾರ್ (39) ಕೊಲೆಯಾದವನು. ಸೋಮವಾರ ಮಧ್ಯರಾತ್ರಿ 2 ಗಂಟೆ ಸುಮಾರಿನಲ್ಲಿ ಕೊಲೆ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಕುಮಾರ್ ಆತನ ಸ್ನೇಹಿತನಿಂದಲೇ ಕೊಲೆ ಆಗಿದ್ದಾನೆ. ಘಟನೆ ಸಂಬಂಧ ಶ್ರಿರಾಂಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಕೊಲೆ ಹಿನ್ನೆಲೆಯಲ್ಲಿ ದೂರು ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗೆ ಬಲೆ ಬೀಸಿದ್ದಾರೆ. ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಕೈಕೊಂಡಿದ್ದಾರೆ.
50 ಲಕ್ಷ ಹಣಕ್ಕೆ ಉರುಳಿತು ತಲೆ
ಕುಮಾರ್ ಹಾಗು ದಯಾಳ್ ಇಬ್ಬರು ಶ್ರೀರಾಂಪುರ ನಿವಾಸಿಗಳಾಗಿರುವ ಇವರದ್ದು 15 ವರ್ಷಗಳ ಸ್ನೇಹ. ಕಷ್ಟ ಸುಖಗಳಿಗೆ ಜೊತೆಯಾಗಿದ್ದವರು. ಹೀಗಿದ್ದವರ ಮಧ್ಯೆಯೇ ಹಣಕಾಸಿನ ವಿಚಾರಕ್ಕೆ ದುಶ್ಮನಿ ಶುರುವಾಗಿತ್ತು. ಅದೇ ದುಶ್ಮನಿ ಕೊಲೆ ಹಂತಕ್ಕೆ ತಲುಪಿತು. ಕುಮಾರ್ ಹೋಟೆಲ್ ಬ್ಯುಸಿನೆಸ್ ಮಾಡಿಕೊಂಡಿದ್ದರೆ, ದಯಾಳ್ ಫೈನಾನ್ಸ್ ವ್ಯವಹಾರ ಮಾಡಿಕೊಂಡಿದ್ದ. ಕಳೆದ 10 ವರ್ಷದಿಂದ ಕುಮಾರ್ ಮನೆ ಕಟ್ಟಬೇಕು, ಹೋಟೆಲ್ ಬ್ಯುಸಿನೆಸ್ ಇಂಪ್ರೂವ್ ಮಾಡಬೇಕು ಎಂದು ಹಂತ ಹಂತವಾಗಿ 50 ಲಕ್ಷ ರೂ. ಸಾಲ ಪಡೆದುಕೊಂಡಿದ್ದ.ಇತ್ತೀಚೆಗೆ ದಯಾಳ್ ಕೂಡ ವ್ಯವಹಾರದಲ್ಲಿ ನಷ್ಟ ಅನುಭವಿಸಿದ್ದ. ಹಾಗಾಗಿ ಕುಮಾರ್‌ಗೆ ಹಣ ವಾಪಸ್ಸು ಕೊಡುವಂತೆ ಬೆನ್ನು ಬಿದ್ದಿದ್ದ. ಆದರೆ ಕುಮಾರ್ ಬಳಿಯೂ ವಾಪಸ್ಸು ಕೊಡುವಷ್ಟು ಹಣ ಇರಲಿಲ್ಲ. ಇದೇ ಕಾರಣಕ್ಕೆ ಇಬ್ಬರ ಮಧ್ಯೆ ಸಣ್ಣ ಪುಟ್ಟ ಜಗಳ ಕೂಡ ನಡೆಯುತ್ತಿತ್ತು.
ಜುಲೈ 8 ರಂದು ಕುಮಾರ್ ಮನೆ ಬಳಿ ಬಂದಿದ್ದ ದಯಾಳ್ ಹೊರಗೆ ಹೋಗೊಣಾ ಬಾ ಎಂದು ಕರೆದುಕೊಂಡು ಬಂದಿದ್ದ.ಮಧ್ಯರಾತ್ರಿವರೆಗೂ ಕುಡಿದು ಪಾರ್ಟಿ ಮಾಡಿದ್ದಾರೆ. ಈ ವೇಳೆ ಹಣಕಾಸಿನ ವಿಚಾರಕ್ಕೆ ಮತ್ತೆ ಗಲಾಟೆಯಾಗಿದೆ. ಶ್ರೀರಾಂಪುರ 5 ನೇ ಮುಖ್ಯರಸ್ತೆ ಬಳಿ ಮಾತಿಗೆ ಮಾತು ಬೆಳೆದು ದಯಾಳ್ ಹಾಗೂ ಕುಮಾರ್ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಚಾಕುವಿನಿಂದ ಇರಿದು ಕೊಂದಿದ್ದಾರೆ. 2.30ಕ್ಕೆ ಪೊಲೀಸರಿಗೆ ಈ ಮಾಹಿತಿ ಸಿಕ್ಕಿದ್ದು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಜತೆಗೆ ಆರೋಪಿ ದಯಾಳ್‌ನನ್ನು ವಶಕ್ಕೆ ಪಡೆಯಲಾಗಿದ್ದು, ಉಳಿದವರಿಗಾಗಿ ಶೋಧ ನಡೆಸಲಾಗುತ್ತಿದೆ.
ಇದನ್ನೂ ಓದಿ: Medical Negligence: ಕಣ್ಣು ಬಿಡುವ ಮುನ್ನವೇ ಗರ್ಭದಲ್ಲೇ ಕಣ್ಮುಚ್ಚಿದ ಮಗು; ಕೆಸಿ ಜನರಲ್ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯ!
ಕುಡಿದ ಅಮಲಿನಲ್ಲಿ ಶುರುವಾದ ಜಗಳ ಯುವಕನ ಕೊಲೆಯಲ್ಲಿ ಅಂತ್ಯ
ಬೆಂಗಳೂರು: ಬೆಂಗಳೂರಿನಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಯುವಕನೊಬ್ಬನ ಕೊಲೆ (Murder case) ಮಾಡಲಾಗಿತ್ತು. ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ನೇಪಾಳಿ ಮೂಲದ ಬಾಲಾಜಿ ಮೃತ ದುರ್ದೈವಿ.
ವೃತ್ತಿಯಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಬಾಲಾಜಿ ಸ್ನೇಹಿತರೊಂದಿಗೆ ಸೇರಿ ಎಣ್ಣೆ ಪಾರ್ಟಿ ಮಾಡಿದ್ದ. ಬಳಿಕ ಕುಡಿದ ಅಮಲಿನಲ್ಲಿ ಕ್ಯಾತೆ ತೆಗೆದು ಸ್ನೇಹಿತರೊಟ್ಟಿಗೆ ಜಗಳ ಶುರು ಮಾಡಿದ್ದ. ಜಗಳವು ವಿಕೋಪಕ್ಕೆ ತಿರುಗಿದ್ದು, ಬಾಲಜಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಮಾಡಲಾಗಿತ್ತು.
ಕೋಣನಕುಂಟೆ ಸಮುದಾಯ ಭವನ ಬಳಿ ಘಟನೆ ನಡೆದಿದ್ದು, ಸ್ಥಳಕ್ಕೆ ಕೋಣನಕುಂಟೆ ಪೊಲೀಸರು ಹಾಗೂ ಡಿಸಿಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಈ ಸಂಬಂಧ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹತ್ಯೆಕೋರರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಪೊಲೀಸ್‌ಗೆ ಚಾಕುವಿನಿಂದ ಇರಿದ ರೌಡಿಶೀಟರ್ ಕಾಲಿಗೆ ಗುಂಡು
ಶಿವಮೊಗ್ಗ: ಬೆಳ್ಳಂ ಬೆಳಗ್ಗೆ ಶಿವಮೊಗ್ಗದಲ್ಲಿ (Shivamogga news) ರೌಡಿ ಶೀಟರ್ (rowdy sheeter) ಕಾಲಿಗೆ ಗುಂಡೇಟು ಹಾರಿಸಿ (shoot out) ಗಾಯಗೊಳಿಸಿ ಬಂಧಿಸಲಾಗಿದೆ. ಬಂಧಿಸಲು ಹೋದಾಗ ಈತ ಪೊಲೀಸ್ (Police) ಸಿಬ್ಬಂದಿ ಕಾಲಿಗೆ ಚಾಕುವಿನಿಂದ ಚುಚ್ಚಿ (Stabbing) ಗಾಯಗೊಳಿಸಿದ್ದ.
ಶಿವಮೊಗ್ಗ ಜಿಲ್ಲೆಯ ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತ್ಯಾಜ್ಯವಳ್ಳಿ ಅರಣ್ಯ ಪ್ರದೇಶದಲ್ಲಿ ಇಂದು ಬೆಳಗ್ಗೆ ಈ ಘಟನೆ ನಡೆದಿದೆ. ರಜಾಕ್ ಎಂಬಾತ ಬಂಧಿತ ರೌಡಿ. ರಜಾಕ್ ಮೇಲೆ ಕೊಲೆ ಯತ್ನ ಸೇರಿ ಐದಾರು ಗಂಭೀರ ಅಪರಾಧ ಪ್ರಕರಣಗಳು ದಾಖಲಾಗಿವೆ. ಹೊಳೆಹೊನ್ನೂರು ಠಾಣೆ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ಈತನ ಬಂಧನಕ್ಕೆ ತೆರಳಲಾಗಿತ್ತು.
ಈ ಸಂದರ್ಭದಲ್ಲಿ ಆರೋಪಿ ರಜಾಕ್ ಪೊಲೀಸ್ ಸಿಬ್ಬಂದಿ ಅರ್ಜುನ್ ಎಂಬವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ. ಈ ಸಂದರ್ಭದಲ್ಲಿ ಸಿಬ್ಬಂದಿಯನ್ನು ಪಾರು ಮಾಡಲು ಹಾಗೂ ಆತ್ಮರಕ್ಷಣೆಗಾಗಿ ಇನ್‌ಸ್ಪೆಕ್ಟರ್ ಲಕ್ಷ್ಮಿಪತಿ ರೌಡಿಶೀಟರ್ ಕಾಲಿಗೆ ಗುಂಡು ಹೊಡೆದಿದ್ದಾರೆ. ಗಾಯಗೊಂಡಿರುವ ಆರೋಪಿ ರಜಾಕ್ ಹಾಗೂ ಹಲ್ಲೆಗೊಳಗಾದ ಪೊಲೀಸ್ ಸಿಬ್ಬಂದಿಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ