ಬೆಂಗಳೂರು: ಅದು ಒಂದು ವರ್ಷದ ಹಿಂದಿನ ಮಿಸ್ಸಿಂಗ್ ಕೇಸ್. ಕೆಲಸಕ್ಕೆ ಹೋಗಿ ಬರುತ್ತೇನೆಂದು ಹೋಗಿದ್ದವಳು ದಿಢೀರ್ ನಾಪತ್ತೆಯಾಗಿದ್ದಳು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರಿಗೂ ಸಣ್ಣದೊಂದೇ ಒಂದು ಸುಳಿವು ಸಹ ಸಿಕ್ಕಿರಲಿಲ್ಲ. ಇದೀಗ ಈ ಪ್ರಕರಣವನ್ನು ಭೇದಿಸಲು ಮೊಬೈಲ್ ಸಿಮ್ ಸಹಾಯ ಮಾಡಿದೆ.
ವಿಠಲನಗರದಲ್ಲಿ ವಾಸವಾಗಿದ್ದ ಚಂದ್ರಕಲಾ ಎಂಬ ಮಹಿಳೆಯ ಕೊಲೆಗಾರರು ಬರೋಬ್ಬರಿ ಒಂದು ವರ್ಷದ ಬಳಿಕ ಸಿಕ್ಕಿಬಿದ್ದಿದ್ದಾರೆ. ಈಕೆ ತಂದೆ ತಾಯಿ ಸಾವಿನ ಬಳಿಕ ಒಂಟಿಯಾಗಿ ವಾಸವಾಗಿದ್ದರು. 40 ವರ್ಷವಾದರೂ ಮದ್ವೆಯಾಗಿರಲಿಲ್ಲ. ಮದುವೆಯಾಗಬೇಕೆಂದು ಸ್ನೇಹಿತೆ ಲಕ್ಷ್ಮಿ ಬಳಿ ಹೇಳಿಕೊಂಡಿದ್ದರು. ಆ ವೇಳೆ ತನ್ನ ಗಂಡನ ಸ್ನೇಹಿತ ನಾರಾಯಣ ಅಲಿಯಾಸ್ ನಾಣಿ ಎಂಬಾತನೊಂದಿಗೆ ಮದುವೆ ಮಾಡಿಸಲು ಲಕ್ಷ್ಮಿ ತೀರ್ಮಾನಿಸಿದ್ದಳು. ಪರಿಚಯ ಬೆಳೆದ ಬಳಿಕ ಚಂದ್ರಕಲಾ ಹಾಗೂ ನಾರಾಯಣ ಆಗಾಗ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದರು. ಕೊನೆಗೆ ನೇರವಾಗಿ ಭೇಟಿಯಾಗಲು ನಾರಾಯಣ ಬೇಡಿಕೆ ಇಟ್ಟಿದ್ದ.
ಈ ನಡುವೆ ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದ ಲಕ್ಷ್ಮಿ ಹಾಗೂ ನಾರಾಯಣ, ನೇರವಾಗಿ ಭೇಟಿಯಾಗುವ ನೆಪದಲ್ಲಿ ಚಂದ್ರಕಲಾಳ ಕೊಲೆ ಮಾಡಿ ಚಿನ್ನಾಭರಣ ದೋಚಲು ಸ್ಕೆಚ್ ಹಾಕಿದ್ದರು. ಒಂಟಿಯಾಗಿದ್ದ ಚಂದ್ರಕಲಾ ಬಳಿ ಹಣ, ಆಭರಣಗಳಿರಬಹುದು ಎಂದು ಭಾವಿಸಿದ್ದರು. ಭೇಟಿಯ ನೆಪದಲ್ಲಿ ಚಂದ್ರಕಲಾ ಅವರನ್ನು ಮುತ್ತತ್ತಿ ಕಾಡಿಗೆ ಕರೆದೊಯ್ದು, ಅಲ್ಲಿ ಕೊಲೆ ಮಾಡಿದ್ದರು, ಬಳಿಕ ಯಾವುದೇ ಹಣ, ಕ್ಯಾಶ್ ಸಿಗದೆ ಬೆಂಗಳೂರಿಗೆ ವಾಪಸಾಗಿದ್ದರು.
ಇದನ್ನೂ ಓದಿ | ಮಗನಿಂದಲೇ ತಂದೆಯ ಕೊಲೆ: ಮಲಗಿದ್ದಲ್ಲಿಗೆ ಹೋಗಿ ಕೊಡಲಿಯಿಂದ ಕೊಚ್ಚಿದ!
ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಸತ್ತವಳ ಸ್ನೇಹಿತರು, ಸಂಬಂಧಿಕರು, ಸಹೋದ್ಯೋಗಿಗಳ ಬಳಿ ವಿಚಾರಿಸಿದ್ದರೂ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಮೊಬೈಲ್ ಡಿಟೇಲ್ಸ್ ಚೆಕ್ ಮಾಡಿದಾಗ ಬ್ಯಾಟರಾಯನಪುರ ವ್ಯಾಪ್ತಿಯಲ್ಲೇ ಸ್ವಿಚ್ ಆಫ್ ಆಗಿತ್ತು. ಅತ್ತ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ಹಲಗೂರು ಪೊಲೀಸರೂ ಸತ್ತವಳ ಮಾಹಿತಿ ಪತ್ತೆಯಾಗದ ಹಿನ್ನೆಲೆಯಲ್ಲಿ ಸಿ ರಿಪೋರ್ಟ್‌ಗೆ ಸಿದ್ಧತೆ ಮಾಡಿಕೊಂಡಿದ್ದರು. ಪ್ರಕರಣ ಕ್ಲೋಸ್ ಮಾಡುವ ಮುನ್ನ ಲಾಂಗ್ ಪೆಂಡಿಂಗ್ ಕೇಸ್‌ಗಳ ಮರು ಪರಿಶೀಲನೆ ನಡೆಸುವಾಗ, ಯಾವ ಕಾರಣದಿಂದ ಪತ್ತೆಯಾಗಿಲ್ಲ ಎಂದು ಮತ್ತೊಂದು ಸುತ್ತಿನ ತನಿಖೆ ನಡೆಸಲಾಯಿತು. ತನಿಖೆ ವೇಳೆ, ನಾಪತ್ತೆಯಾದ ಯುವತಿ ಮನೆಗೆ ಬರುತ್ತಿದ್ದ ಮಹಿಳೆ ಬಗ್ಗೆ ಮನೆ ಮಾಲೀಕನಿಂದ ಮಾಹಿತಿ ದೊರೆಯಿತು.
ಆ ಮಹಿಳೆ ಯಾರು ಅನ್ನುವುದನ್ನು ಪತ್ತೆ ಹಚ್ಚಲು ಪೊಲೀಸರು ಮುಂದಾದರು. ಆ ವೇಳೆ ಯುವತಿಯ ಸಿಮ್ ಎರಡು ಮೊಬೈಲ್‌ಗಳಲ್ಲಿ ಬಳಕೆಯಾಗಿರುವುದು ಬೆಳಕಿಗೆ ಬಂತು. ಆ ಎರಡನೇ ಮೊಬೈಲ್ ಯಾವುದು ಎಂದು ಪತ್ತೆ ಹಚ್ಚಿದ ಪೊಲೀಸರಿಗೆ ಹಂತಕಿ ಸಿಕ್ಕಿಬಿದ್ದಳು. ಮದುವೆ ಮಾಡಿಸುವ ನೆಪದಲ್ಲಿ ಯುವತಿಯನ್ನು ಕರೆದೊಯ್ದು ಕೊಲೆ ಮಾಡಿದ್ದ ಆರೋಪಿಗಳು ಒಂದು ವರ್ಷದ ಬಳಿಕ ಸಿಕ್ಕಿಬಿದ್ದು ಕಂಬಿ ಎಣಿಸುತ್ತಿದ್ದಾರೆ.
ಇದನ್ನೂ ಓದಿ | Praveen Nettaru | 8 ಗಂಟೆಯಿಂದಲೇ ಸುಳಿದಾಡುತ್ತಿದ್ದ ಹಂತಕರು, 8.40ಕ್ಕೆ ಮರ್ಡರ್, ಸಿಸಿಟಿವಿಯಲ್ಲಿ ದಾಖಲು