ಬೆಂಗಳೂರು: ರಾಜ್ಯದ ವಿವಿಧೆಡೆ ಗಲಭೆಗಳನ್ನು ಸೃಷ್ಟಿಸಿ ಅಧಿಕಾರಕ್ಕೇರಲು ಪ್ರತಿಪಕ್ಷ ಕಾಂಗ್ರೆಸ್ ಪ್ರಯತ್ನ ನಡೆಸುತ್ತಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.
ಸಂಘಟನಾತ್ಮಕ ಪ್ರವಾಸದ ಭಾಗವಾಗಿ ಬೆಂಗಳೂರು ದಕ್ಷಿಣ ಬಿಜೆಪಿ ಪದಾಧಿಕಾರಿಗಳೊಂದಿಗೆ ಜಯನಗರದ ಪ್ರೆಸಿಡೆನ್ಸಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕೇಂದ್ರ ಮತ್ತು ರಾಜ್ಯ ಸರಕಾರಗಳ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಿಳಿಸಿ 150 ಪ್ಲಸ್ ಶಾಸಕ ಸ್ಥಾನ ಪಡೆಯಲು ಇತ್ತೀಚೆಗೆ ಹೊಸಪೇಟೆಯಲ್ಲಿ ನಡೆದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಕಾರ್ಯತಂತ್ರ ರೂಪಿಸಲಾಗಿದೆ. ಮೂರು ತಂಡಗಳಲ್ಲಿ ಪಕ್ಷದ ಸಂಘಟನೆಗಾಗಿ ಪ್ರವಾಸವೂ ನಡೆಯುತ್ತಿದೆ.
ಸರಕಾರಗಳ ಸಾಧನೆಯ ಕುರಿತು ಜನರಿಗೆ ತಲುಪಿಸುವ ದೃಷ್ಟಿಯಿಂದ ರಾಜ್ಯದಿಂದ ಬೂತ್ ವರೆಗೆ ಸಭೆಗಳನ್ನು ನಡೆಸಲಾಗಿದೆ. ನಮ್ಮ ಸಂಘಟನೆಯನ್ನು ಸರ್ವಸ್ಪರ್ಶಿ- ಸರ್ವವ್ಯಾಪಿ ಮಾಡಲು ಶ್ರಮಿಸುತ್ತಿದ್ದೇವೆ. ಬೂತ್ ಕಮಿಟಿ, ಪೇಜ್ ಕಮಿಟಿ ಹೆಚ್ಚು ಸದೃಢಗೊಳಿಸಲಾಗುತ್ತಿದೆ ಎಂದು ವಿವರಿಸಿದರು. ಪ್ರತಿ ಪೇಜ್‍ಗೆ ಆರು ಜನರ ಸಮಿತಿ ರಚಿಸಲಾಗಿದೆ. ಮಂಡಲಕ್ಕೆ ತೆರಳಿ ಪೇಜ್ ಕಮಿಟಿ ಕಾರ್ಯದ ಪರಿಶೀಲನೆ ನಡೆದಿದೆ. ಬೂತ್ ಅಧ್ಯಕ್ಷರ ನಾಮಫಲಕ ಜೋಡಣೆ ದೇಶದಲ್ಲೇ ಮೊದಲ ಬಾರಿಗೆ ನಡೆದಿದ್ದು, 90% ಕಾರ್ಯ ಮುಕ್ತಾಯವಾಗಿದೆ.
ಸರಕಾರದ ಹತ್ತಾರು ಸಾಧನೆಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಅಭಿನಂದಿಸಲಾಗಿದೆ. ಕಾಂಗ್ರೆಸ್ ವಿರುದ್ಧ ಇನ್ನೊಂದು ನಿರ್ಣಯ ಅಂಗೀಕರಿಸಲಾಗಿದೆ. ಹಾಸನ, ಹಳೆ ಮೈಸೂರು ಭಾಗದಲ್ಲಿ ಪಕ್ಷವನ್ನು ಇನ್ನಷ್ಟು ಸದೃಢಗೊಳಿಸುವ ಕುರಿತು ಚರ್ಚಿಸಲಾಗಿದೆ. ಆದರೆ ಕಾಂಗ್ರೆಸ್ ಮಾತ್ರ ಇತರರ ಕಾಲೆಳೆಯುವ, ರಾಜ್ಯದ ಜನತೆಯ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಗಲಭೆ ಮೂಲಕ ಅಧಿಕಾರ ಪಡೆಯಲು ಯತ್ನಿಸುತ್ತಿದೆ. ಮತೀಯವಾದದ ಹೆಸರಿನಲ್ಲಿ ಬೆಂಕಿ ಹಾಕುವ ಕೆಲಸವನ್ನು ಮಾಡುತ್ತಿದೆ. ಅಧಿಕಾರ ಪಡೆಯಲು ಅರಾಜಕತೆ ಸೃಷ್ಟಿಸುವ ಪ್ರವೃತ್ತಿ ಕಾಂಗ್ರೆಸ್ ಪಕ್ಷದ್ದು. ಡಿಜೆ.ಹಳ್ಳಿ, ಕೆ.ಜಿ.ಹಳ್ಳಿ ಪ್ರಕರಣ, ಹರ್ಷ ಕೊಲೆ ಪ್ರಕರಣ, ಹುಬ್ಬಳ್ಳಿ ಹಿಂಸಾಚಾರದ ಘಟನೆ ಇದಕ್ಕೆ ಉದಾಹರಣೆ. ವಿರೋಧ ಪಕ್ಷವಾಗಿ ಕಾಂಗ್ರೆಸ್ ಪಕ್ಷ ವಿಫಲವಾಗಿದೆ ಎಂದು ವಿವರಿಸಿದರು.
ಇದನ್ನೂ ಓದಿ: ಕಾಣದ ಕೈಗಳ ಹಿಡಿತದಲ್ಲಿ ಬಿಜೆಪಿ ಸರ್ಕಾರ: ಇನ್ನೂ ಒಂದು ವರ್ಷ ಇದೇ ಸ್ಥಿತಿ ಎಂದ HDK
ಗಲಭೆಯಲ್ಲಿ ಭಾಗಿಯಾದವರ ಆಸ್ತಿಗಳ ಮೇಲೆ ಬುಲ್ಡೋಜರ್ ಪ್ರಯೋಗದ ಕುರಿತು ಪ್ರತಿಕ್ರಿಯಿಸಿ, ಗುಜರಾತ್, ಉತ್ತರ ಪ್ರದೇಶ, ಮಧ್ಯಪ್ರದೇಶಗಳಲ್ಲಿ ಗಲಭೆ ನಿಯಂತ್ರಣಕ್ಕೆ ಜಾತಿ ಮತ ಪಂಥ ಇಲ್ಲದೆ ಕ್ರಮ ಕೈಗೊಳ್ಳಲಾಗುತ್ತಿದೆ. ಇಂಥ ಗಲಭೆ ಸೃಷ್ಟಿಸುವುದು ಸರ್ಕಾರಿ ಕಚೇರಿಗಳಿಗೆ ಬೆಂಕಿ ಹಾಕುವುದು ಮತ್ತು ಪೊಲೀಸರ ಸ್ಥೈರ್ಯ ಕುಸಿತಕ್ಕೆ ಕಾರಣರಾಗುವುದು ಭಯೋತ್ಪಾದನೆಗೆ ಸಮ. ಅಂಥ ಗಲಭೆಕೋರರ ವಿರುದ್ಧ ಸರ್ಕಾರ ದಿಟ್ಟ ಮತ್ತು ದೃಢವಾದ ಕ್ರಮ ತೆಗೆದುಕೊಳ್ಳಬೇಕು. ಇದು ಪಕ್ಷದ ನಿಲುವು ಎಂದರು.
ಹೆಚ್ಚಿನ ಓದಿಗಾಗಿ: Explainer: ಬುಲ್‌ಡೋಜರ್‌ಗೆ ಮತ್ತಷ್ಟು ಸದ್ದು
ಸುದ್ದಿಗೋಷ್ಠಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಚಿವರಾದ ವಿ. ಸೋಮಣ್ಣ, ಆರ್. ಅಶೋಕ್, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ಉದಯ್ ಗರುಡಾಚಾರ್, ಎಲ್. ರವಿಸುಬ್ರಹ್ಮಣ್ಯ, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಎನ್.ಆರ್. ರಮೇಶ್ ಉಪಸ್ಥಿತರಿದ್ದರು.