Site icon Vistara News

ದೇಶದಲ್ಲಿ ವರ್ಷಕ್ಕೆ ಎರಡು ಲಕ್ಷ ನೇತ್ರದಾನ ಸಂಗ್ರಹ ಗುರಿ: ನಾರಾಯಣ ನೇತ್ರಾಲಯದ ಅಧ್ಯಕ್ಷ ಡಾ. ಭುಜಂಗ ಶೆಟ್ಟಿ

ಡಾ.ಭುಜಂಗ ಶೆಟ್ಟಿ

ಬೆಂಗಳೂರು: ದೇಶದಾದ್ಯಂತ ವರ್ಷಕ್ಕೆ 2 ಲಕ್ಷ ಕಣ್ಣುಗಳನ್ನು ಸಂಗ್ರಹಿಸುವ ಗುರಿ ಹೊಂದಿದ್ದೇವೆ. ಈ ಸದ್ಯ ದೇಶದಲ್ಲಿ ನೇತ್ರದಾನದ ಮೂಲಕ ಕೇವಲ 60 ಸಾವಿರ ಕಣ್ಣುಗಳು ಸಂಗ್ರಹವಾಗುತ್ತಿವೆ ಎಂದು ನಾರಾಯಣ ನೇತ್ರಾಲಯದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ.ಭುಜಂಗ ಶೆಟ್ಟಿ ತಿಳಿಸಿದ್ದಾರೆ.

ನಗರದಲ್ಲಿ ನಾರಾಯಣ ನೇತ್ರಾಲಯದಲ್ಲಿ 37ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೊರೊನಾದಿಂದ ಶೇ.90 ನೇತ್ರದಾನ ಕ್ಷೀಣಿಸಿತ್ತು. ಈಗ ಅದು ಸ್ವಲ್ಪ ಹೆಚ್ಚುತ್ತಿದೆ. ನೇತ್ರ ದಾನ ಬರಿ ಕಣ್ಣು‌ ಕಳೆದುಕೊಂಡವರಿಗೆ ದೃಷ್ಟಿ ಮರಳಿಸುವುದು ಮಾತ್ರವಲ್ಲ, ಸಣ್ಣ ಪುಟ್ಟ ಗ್ರಾಫ್ಟ್ ವರ್ಕ್‌ಗಳಿಗೂ ಉಪಯೋಗಿಸಲಾಗುತ್ತಿದೆ ಎಂದು ಹೇಳಿದರು.

ಬೆಂಗಳೂರಿನಲ್ಲಿಯೇ ದಿನಕ್ಕೆ ಸುಮಾರು 200ರಿಂದ 400 ಸಾವುಗಳು ಸಂಭವಿಸುತ್ತಿದೆ. ಆದರೆ ಇವುಗಳಲ್ಲಿ ಕೇವಲ 8ಕ್ಕಿಂತ ಕಡಿಮೆ ಕಣ್ಣುಗಳನ್ನು ಸಂಗ್ರಹಿಸಲಾಗುತ್ತಿದೆ. ಈ ದೊಡ್ಡ ಅಂತರವನ್ನು ನೋಡಿದರೆ ತುಂಬಾ ದುಃಖವಾಗುತ್ತಿದೆ ಎಂದರು.

ಇದನ್ನೂ ಓದಿ | ಸರ್ಕಾರಿ ನೌಕರರಿಗೆ ದಸರಾ ಗಿಫ್ಟ್‌: ಅಕ್ಟೋಬರ್‌ನಲ್ಲಿ 7ನೇ ವೇತನ ಆಯೋಗ ರಚನೆ ಎಂದ ಸಿಎಂ

ಕಾರ್ನಿಯಾದ ಕುರುಡುತನವನ್ನು ನೇತ್ರದಾನದಿಂದ ಕಸಿ ಮಾಡುವ ಮೂಲಕ ಮಾತ್ರ ಚಿಕಿತ್ಸೆ ನೀಡಬಹುದು. ಏಕೆಂದರೆ ಈ ಮಾನವ ಅಂಗಾಂಶಕ್ಕೆ ಪರ್ಯಾಯವಿರುವುದಿಲ್ಲ. ಪ್ರತಿಯೊಬ್ಬರೂ ಮರಣಾನಂತರ ನೇತ್ರದಾನ ಮಾಡಲು ಮುಂದೆ ಬರುವುದು ಮಾತ್ರವಲ್ಲದೆ ಈ ಉದಾತ್ತ ಉದ್ದೇಶಕ್ಕಾಗಿ ಸ್ನೇಹಿತರು, ಕುಟುಂಬಗಳು ಮತ್ತು ವಿಸ್ತ್ರತ ವಲಯಗಳಿಗೆ ಇದರ ಬಗ್ಗೆ ಶಿಕ್ಷಣ ನೀಡುವುದು ಮತ್ತು ಈ ಕಾರ್ಯಕ್ಕೆ ಸೇರಿಸುವುದು ಬಹು ಮುಖ್ಯವಾಗಿದೆ ಎಂದರು.

ನಾರಾಯಣ ನೇತ್ರಾಲಯ ನೇತ್ರದಾನ ಕೇಂದ್ರವು 24/7 ತೆರೆದಿರುತ್ತದೆ. ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ 15 ಲಕ್ಷ ಜನರು ಕಾರ್ನಿಯಾದ ಅಂಧತ್ವದಿಂದಾಗಿ ಕಾರ್ನಿಯಾದ ಕಸಿಗೋಸ್ಕರ ಕಾಯುತ್ತಿದ್ದಾರೆ. ಈ ರೀತಿಯ ಕುರುಡುತನವನ್ನು ನೇತ್ರದಾನದ ಮೂಲಕ ಗುಣಪಡಿಸಬಹುದು. ಏಕೆಂದರೆ ಕಾರ್ನಿಯಾದ ಸಂಗ್ರಹ ಮೂಲವು ಮತ್ತೊಬ್ಬ ಮನುಷ್ಯರಿಂದ ಮಾತ್ರ ಸಾಧ್ಯ, ಮರಣದ ನಂತರ ತಕ್ಷಣವೇ ನಮಗೆ ತಿಳಿಸಲು ನಾವು ವಿನಂತಿಸುತ್ತೇವೆ. ಏಕೆಂದರೆ ಸಾವಿನ 6 ಗಂಟೆಗಳ ಒಳಗೆ ಕಣಗಳನ್ನು ಸಂಗ್ರಹಿಸಬೇಕಾಗುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ | ಇನ್ಫೋಸಿಸ್‌ ಸ್ಪ್ರಿಂಗ್‌ಬೋರ್ಡ್: ವಿದ್ಯಾರ್ಥಿಗಳಿಗೆ 12,300 ಕೋರ್ಸ್ ಉಚಿತವಾಗಿ ಕಲಿಸುವ ಒಪ್ಪಂದಕ್ಕೆ ಅಂಕಿತ

Exit mobile version