ಬೆಂಗಳೂರು: ಕಳೆದ ವಾರ ಬೆಂಗಳೂರಿನಲ್ಲಿ ಎನ್‌ಐಎ ಅಧಿಕಾರಿಗಳು (NIA Raid) ವಶಕ್ಕೆ ಪಡೆದು ವಿಚಾರಿಸಿ ಬಿಟ್ಟು ಕಳಿಸಿದ್ದ ಶಂಕಿತ ಉಗ್ರ ಅಲಿ ಅಬ್ಬಾಸ್‌ನನ್ನು ಎನ್ಐಎ ಅಧಿಕಾರಿಗಳು ಮತ್ತೆ ಅರೆಸ್ಟ್ ಮಾಡಿದ್ದಾರೆ.
ಕಳೆದ ವಾರ ಬೆಂಗಳೂರು ಸೇರಿದಂತೆ ಮಹಾರಾಷ್ಟ್ರದ 44 ಸ್ಥಳಗಳಲ್ಲಿ ದಾಳಿ ನಡೆಸಿದ್ದ ಎನ್ಐಎ ಅಧಿಕಾರಿಗಳು ಐಸಿಸ್‌ನೊಂದಿಗೆ ಸಂಪರ್ಕದಲ್ಲಿದ್ದ 15 ಶಂಕಿತರನ್ನ ಬಂಧಿಸಿ, ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದರು. ಬೆಂಗಳೂರಿನಲ್ಲಿ ನಡೆದಿದ್ದ ದಾಳಿಯ ವೇಳೆ ಅಲಿ ಅಬ್ಬಾಸ್‌ನನ್ನು ವಶಕ್ಕೆ ಪಡೆದು ಕರೆದೊಯ್ಯಲಾಗಿತ್ತು. ನಂತರ ವಿಚಾರಣೆ ನಡೆಸಿ ಕಳುಹಿಸಲಾಗಿತ್ತು.
ಅಬ್ಬಾಸ್ ಅಲಿ ಮನೆಯಲ್ಲಿ ದೊರೆತ ದಾಖಲೆಗಳ ಪರಿಶೀಲನೆ ನಡೆಸಿದ ಬಳಿಕ ಮತ್ತಷ್ಟು ವಿಚಾರಣೆಗಾಗಿ ಕರೆಸಿದ್ದಲ್ಲದೆ, ಈಗ ಅಬ್ಬಾಸ್ ಅಲಿಯನ್ನ ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಈತ ಐಎಸ್ (ಇಸ್ಲಾಮಿಕ್ ಸ್ಟೇಟ್) ಸಂಘಟನೆ ಜೊತೆ ನಂಟು ಹೊಂದಿ ಯುವಕರನ್ನು ಅದಕ್ಕೆ ಸೇರಲು ಪ್ರಚೋದಿಸುತ್ತಿದ್ದ ಎಂಬ ಆರೋಪವಿದೆ.
ಪುಲಿಕೇಶಿನಗರದ ಮೋರ್ ರಸ್ತೆಯಲ್ಲಿ ವಾಸವಾಗಿದ್ದ ಅಲಿ ಅಬ್ಬಾಸ್ ಪೇಟಿವಾಲ, ಮೂಲತಃ ಮುಂಬೈ ಮೂಲದವನು. ಈತ ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದು, ಈತ ಟ್ಯಾನರಿ ರಸ್ತೆಯಲ್ಲಿ ಉರ್ದು ಶಾಲೆ ನಡೆಸುತ್ತಿದ್ದ. ಹೆಂಡತಿ ಡಯಾಟಿಕ್ ಹಾಸ್ಪಿಟಲ್ ನಡೆಸುತ್ತಿದ್ದಾರೆ. ಇವರು ಶಾಮಾಜ್ ಎಂಬವರಿಂದ 2018ರಲ್ಲಿ 62 ಲಕ್ಷಕ್ಕೆ ಫ್ಲ್ಯಾಟ್ ಖರೀದಿ ಮಾಡಿದ್ದರು. ಹೆಂಡತಿ, ಮೂವರು ಮಕ್ಕಳು ಹಾಗು ತಂದೆ ಜೊತೆ ಅಬ್ಬಾಸ್ ವಾಸವಾಗಿದ್ದಾನೆ. ದಾಳಿ ಸಂದರ್ಭದಲ್ಲಿ ಪೇಟಿವಾಲ ಮನೆಯಿಂದ 16,42,000 ಹಣವನ್ನು ಸೀಜ್ ಮಾಡಲಾಗಿತ್ತು. ಮೊಬೈಲ್, ಲ್ಯಾಪ್ಟಾಪ್ ಪರಿಶೀಲನೆ ನಡೆಸಿದ ಬಳಿಕ ಅಬ್ಬಾಸ್ನನ್ನ ವಶಕ್ಕೆ ಪಡೆದಿದ್ದರು.
ಇದನ್ನೂ ಓದಿ: NIA Raid: ಬೆಂಗಳೂರಿನಲ್ಲಿ 6 ಕಡೆ ಎನ್‌ಐಎ ದಾಳಿ, ಮುಂದುವರಿದ ಉಗ್ರರ ತನಿಖೆ