Site icon Vistara News

ಬೆಂಗಳೂರಿನಲ್ಲಿ ನಡೆಯಬಹುದಾಗಿದ್ದ ದಂಗೆಯನ್ನು ತಪ್ಪಿಸಿದ ಪೊಲೀಸರು

ಬೆಂಗಳೂರು: ಈಗಾಗಲೆ ರಾಜ್ಯದಲ್ಲಿ ಹಿಜಾಬ್‌, ಹಲಾಲ್‌, ಆಜಾನ್‌ ಎನ್ನುತ್ತ ಈಗಾಗಲೆ ಸಮಾಜದಲ್ಲಿ ಸೂಕ್ಷ್ಮ ವಾತಾವರಣ ಸೃಷ್ಟಿಯಾಗಿದ್ದು, ಎದುರಾಳಿ ಗುಂಪಿನ ಮೇಲೆ ದಾಳಿ ಮಾಡಿ ಶಾಂತಿ ಕದಡಲು ಸಿದ್ಧತೆ ನಡೆಸಿದ್ದ ಗುಂಪನ್ನು ಪೊಲೀಸರು ಬಂಧಿಸಿದ್ದಾರೆ.

ಅನೇಕ ಮಾರಕಾಸ್ತ್ರಗಳನ್ನು ಇಟ್ಟುಕೊಂಡು ದಾಳಿಗೆ ಸಿದ್ಧವಾಗಿದ್ದ ಆರೋಪಿಗಳು ಇದೀಗ ಪೂರ್ವ ವಿಭಾಗದ ಪೊಲೀಸರ ಕಾರ್ಯಾಚರಣೆಯಲ್ಲಿ ಬಲೆಗೆ ಬಿದ್ದಿದ್ದಾರೆ.
ಬಂಧಿತರನ್ನು ಮುನಾವರ್ ಪಾಶಾ, ಸಾಧಿಕ್ ಪಾಶಾ, ಅಸ್ಲಾಂ ಪಾಶಾ, ಸೈಯದ್ ಹುಸೇನ್, ಕೈಫ್ ಖಾನ್ ಸಿದ್ದಿಕಿ ಎಂದು ಗುರುತಿಸಲಾಗಿದೆ. ಪ್ರಮುಖ ಆರೋಪಿ ಮೊಹಮ್ಮದ್ ಅಜುಮುದ್ದೀನ್ ಆರೋಪಿಗಳ ಜತೆ ಸೇರಿ ಎದುರಾಳಿ ಗುಂಪಿನ ಮೇಲೆ ಹಲ್ಲೆ ಮಾಡುವ ಜತೆಗೆ ಸಮಾಜದಲ್ಲಿ ಶಾಂತಿ ಹದಗೆಡಿಸಲು ಯತ್ನಿಸಿದ್ದ. ಪೆಟ್ರೋಲ್ ಬಾಂಬ್, ಮಾರಾಕಾಸ್ತ್ರ ಸೇರಿ ಇತರೆ ಆಯುಧಗಳನ್ನ ಸಂಗ್ರಹಿಸಿ ಇಟ್ಟಿರುವುದು ಕೂಡ ಬೆಳಕಿಗೆ ಬಂದಿದೆ. ಆರೋಪಿಗಳ ಕೃತ್ಯಕ್ಕೆ ಜೈಲಿನಲ್ಲಿದ್ದ ಕೈಫ್ ಖಾನ್ ಸಹಕಾರ ನೀಡಿರುವುದು ತಿಳಿದು ಬಂದಿದೆ.

ಇದನ್ನೂ ಓದಿ | ಎಣ್ಣೆ ಏಟಲ್ಲಿ ಹದ್ದುಮೀರಿದ ಸ್ಕೋಡಾ, ಸಿಗ್ನಲ್‌ನಲ್ಲಿ ಐದು ಕಾರುಗಳಿಗೆ ಡಿಕ್ಕಿ

ಎರಡು ಗ್ಯಾಂಗ್ ಗಳ ನಡುವೆ ಭೂವ್ಯಾಜ್ಯ ಇದೆ. ಒಬ್ಬರಿಗೊಬ್ಬರು ಬುದ್ದಿ ಕಲಿಸಲು ಈ ಪ್ಲಾನ್ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ದೊಡ್ಡ ಮಟ್ಟದ ದಾಳಿ ನಡೆಯುತ್ತದೆ ಎಂಬ ಸುದ್ದಿ ಹರಿದಾಡಿತ್ತು. ಸದ್ಯ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿರುವುದಾಗಿ ಹಿರಿಯ ಅಧಿಕಾರಿಗಳಿಂದ ಮಾಹಿತಿ ದೊರೆತಿದೆ. ಬಂಧಿತದಲ್ಲಿ ಕೆಲವರು ಎಸ್‌ಡಿಪಿಐ ಸಂಘಟನೆಗೆ ಸೇರಿದವರು ಎನ್ನಲಾಗಿದ್ದು, ಇನ್ನೂ ಖಚಿತಪಡಬೇಕಿದೆ. ಎರಡು ಗುಂಪಿನ ನಡುವಿನ ಘರ್ಷಣೆಯನ್ನು ಕೋಮುಧ್ವೇಷಕ್ಕೆ ತಿರುಗಿಸುವ ಸಂಚು ರೂಪಿಸಿದ್ದರು ಎಂಬ ಅನುಮಾನವೂ ಮೂಡಿದೆ.

ಆರೋಪಿಗಳಿಂದ 1 ನಾಡ ಪಿಸ್ತೂಲ್, 1 ಜೀವಂತ ಗುಂಡು, ಪೆಟ್ರೋಲ್ ತುಂಬಿಸಿದ್ದ 10 ಬಿಯರ್ ಬಾಟಲ್‌ಗಳು ಸೇರಿ ಮಾರಾಕಾಸ್ತ್ರವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳ ಬಂಧನದಿಂದಾಗಿ ಬಾಗಲೂರು, ಮಾರ್ಕೇಟ್, ಬಾಣಸವಾಡಿ, ಕಾಟನ್ ಪೇಟೆ ಸೇರಿದಂತೆ 8 ಕೇಸ್‌ಗಳು ಪತ್ತೆಯಾಗಿದೆ. ಸಮಾಜದಲ್ಲಿ ಶಾಂತಿಯನ್ನು ಕದಡಲು ಇವರು ಸಿದ್ಧತೆ ಮಾಡಿಕೊಂಡಿದ್ದರು ಎಂದು ಪೂರ್ವ ವಿಭಾಗದ ಡಿಸಿಪಿ ಡಾ.ಭೀಮಶಂಕರ ಗುಳೇದ್‌ ಮಾಹಿತಿ ನೀಡಿದ್ದಾರೆ.

https://vistaranews.com/2022/04/13/1774-ydxxok/
Exit mobile version