ಬೆಂಗಳೂರು: ಬೆಂಗಳೂರಿನಲ್ಲಿ ಸೋಮವಾರ ಸುರಿದ ಭಾರಿ ಮಳೆ, ಬೆಸ್ಕಾಂ, ಬಿಬಿಎಂಪಿ ನಿರ್ಲಕ್ಷ್ಯ ಎಲ್ಲವೂ ಸೇರಿ ಯುವತಿಯೊಬ್ಬಳ ಸಾವಿಗೆ ಕಾರಣವಾಗಿವೆ.
ವೈಟ್‌ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯ, ಮಾರತ್ತಹಳ್ಳಿಯಿಂದ ವರ್ತೂರು ಕೋಡಿ ಮಾರ್ಗ ಮಧ್ಯೆ ಇರುವ ಸಿದ್ದಾಪುರದಲ್ಲಿ ಘಟನೆ ನಡೆದಿದೆ. ಅಖಿಲ (23) ಯಾರದ್ದೋ ತಪ್ಪಿಗೆ ಪ್ರಾಣ ಕಳೆದುಕೊಂಡ ಅಮಾಯಕಿಯಾಗಿದ್ದಾಳೆ.
ಸೋಮವಾರ ರಾತ್ರಿ 9.30ರ ಸುಮಾರಿಗೆ ದುರ್ಘಟನೆ ಸಂಭವಿಸಿದೆ. ರಸ್ತೆಯಲ್ಲಿ ಮಂಡಿಯುದ್ದಕ್ಕೆ ನಿಂತ ನೀರು ಹಾಗೂ ಬೆಸ್ಕಾಂನ ತೆರೆದ ವಿದ್ಯುತ್ ಕಂಬಗಳು ಅಖಿಲ ಸಾವಿಗೆ ಕಾರಣವಾಗಿವೆ.
ಬಿಕಾಂ ಪದವೀಧರೆಯಾಗಿದ್ದ ಅಖಿಲ ಖಾಸಗಿ ಕಾಲೇಜಿನಲ್ಲಿ ಅಡ್ಮಿನಿಸ್ಟ್ರೇಷನ್ ಡಿಪಾರ್ಟ್ಮೆಂಟ್‌ನಲ್ಲಿ ಎರಡು ವರ್ಷದಿಂದ ಕೆಲಸ ಮಾಡುತ್ತಿದ್ದವರು. ತಂದೆ ತಾಯಿ ಜೊತೆಗೆ ಸಿದ್ದಾಪುರದಲ್ಲಿರುವ ಮನೆಯಲ್ಲಿ ವಾಸವಿದ್ದ ಅಖಿಲ, ನಿನ್ನೆ ರಾತ್ರಿ 8 ಗಂಟೆಗೆ ಶಾಲೆಯಲ್ಲಿ ಕೆಲಸ ಮುಗಿಸಿ ತಮ್ಮ ಹೋಂಡಾ ಆ್ಯಕ್ಟಿವಾ ಬೈಕ್‌ನಲ್ಲಿ ಮನೆಗೆ ಮರಳುತ್ತಿದ್ದರು. ರಾತ್ರಿ 9.30ಕ್ಕೆ ಸಿದ್ದಾಪುರದ ಮಯೂರ ಬೇಕರಿ ಸಮೀಪ ಬಂದಿದ್ದರು. ಭಾರಿ ಮಳೆಯಿಂದ ರಸ್ತೆಯಲ್ಲಿ ಮಂಡಿಯುದ್ದಕ್ಕೆ ನೀರು ತುಂಬಿತ್ತು. ನೀರಿನ ಮಧ್ಯೆಯೇ ಸ್ಕೂಟರ್ ಚಲಾಯಿಸಿಕೊಂಡು ಬಂದಿದ್ದರು. ನೀರು ಹೆಚ್ಚಾಗಿದ್ದರಿಂದ ಸ್ಕೂಟರ್ ಆಫ್ ಆಗಿ ಬೀಳುವ ಹಂತಕ್ಕೆ ಬಂದಾಗ, ಆಧರಿಸಿ ಹಿಡಿಯಲು ಬಲ ಭಾಗದಲ್ಲಿ ಇದ್ದ ಎಲೆಕ್ಟ್ರಿಕ್ ಪೋಲ್ ಮುಟ್ಟಿದ್ದರು. ಈ ವೇಳೆ ವಿದ್ಯುತ್ ಸ್ಪರ್ಶವಾಗಿ ಕೊನೆಯುಸಿರು ಎಳೆದಿದ್ದಾರೆ.
ಇದನ್ನೂ ಓದಿ | ಮುಂದಿನ 4 ದಿನ ಭಾರಿ ಮಳೆ: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮತ್ತೊಮ್ಮೆ ಪ್ರವಾಹ ಭೀತಿ
ವಿದ್ಯುತ್ ಶಾಕ್‌ನಿಂದ ಕೆಳಗೆ ಬಿದ್ದ ಯುವತಿಯನ್ನು ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದಾರೆ. ವೈದೇಹಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಗಿದ್ದು, ಪರೀಕ್ಷೆ ಬಳಿಕ ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ. ಮಗಳ ಸಾವಿನಿಂದ ಆಘಾತಗೊಂಡ ತಂದೆ- ತಾಯಿಯ ರೋದನ ಮುಗಿಲು ಮುಟ್ಟಿದೆ.
ಯುವತಿಯನ್ನು ಬಲಿ ಪಡೆದ ವಿದ್ಯುತ್ ಕಂಬದ ನಿರ್ವಹಣೆ ಅಸಮರ್ಪಕವಾಗಿದ್ದು, ಹೊರಗಡೆ ವೈರ್‌ಗಳು ನೇತಾಡುತ್ತಿದ್ದವು. ನೀರಿನ ಒಳಗಡೆಯೂ ಬಿದ್ದಿದ್ದವು. ಘಟನಾ ಸ್ಥಳಕ್ಕೆ ವೈಟ್‌ಫೀಲ್ಡ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸ್ಥಳದಲ್ಲಿ ತುಂಬಿದ ನೀರು ಹೊರಹೋಗುವುದಕ್ಕೂ ಸರಿಯಾದ ವ್ಯವಸ್ಥೆಯಿಲ್ಲ. ಒಳಚರಂಡಿ ವ್ಯವಸ್ಥೆ, ಬೆಸ್ಕಾಂ ವಿದ್ಯುತ್ ಕಂಬಗಳ ಅಸಮರ್ಪಕ ನಿರ್ವಹಣೆಯೇ ಸಾವಿಗೆ ನೇರ ಕಾರಣ. ಇಷ್ಟಾದರೂ ಘಟನಾ ಸ್ಥಳಕ್ಕೆ ಬಿಬಿಎಂಪಿ, ಬೆಸ್ಕಾಂ ಅಧಿಕಾರಿಗಳು ಭೇಟಿ ನೀಡಿಲ್ಲ ಎಂದು ಸ್ಥಳೀಯರು ಆಕ್ರೋಶಿಸಿದ್ದಾರೆ.
ಇದನ್ನೂ ಓದಿ | Rain news | ದಾಖಲೆಯ ಮಳೆಗೆ ತತ್ತರಿಸಿದ ಬೆಂಗಳೂರು, ಜನಜೀವನ ಅಸ್ತವ್ಯಸ್ತ