ಬೆಂಗಳೂರು: ಜೂಜು (Online gambling) ಎಷ್ಟರ ಮಟ್ಟಿಗೆ ಎಫೆಕ್ಟ್ ಕೊಡುತ್ತೆ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. ಒಂದೊಳ್ಳೆ ಹುದ್ದೆಯಲ್ಲಿದ್ದವನು ಮಾಡುವ ಕೆಲಸ ಬಿಟ್ಟು ಜೂಜಿನ ಹಿಂದೆ ಬಿದ್ದವನು ಸಾಲಗಾರರ ಕಾಟಕ್ಕೆ ಬೇಸತ್ತು ಕಾಣೆಯಾಗಿದ್ದಾನೆ. ಭರತ್ ಎಂಬ ಬ್ಯಾಂಕ್ ಉದ್ಯೋಗಿ ಕಾಣೆಯಾಗಿದ್ದಾನೆ. ಸೆಲ್ಫಿ ವಿಡಿಯೋ ಮಾಡಿ, ತನ್ನ ಮೊಬೈಲ್‌ಗಳನ್ನು ಮನೆಯಲ್ಲಿಟ್ಟು ಮನೆ ಬಿಟ್ಟು ಹೋಗಿದ್ದಾನೆ. ಇತ್ತ ಭರತ್‌ಗಾಗಿ ಆತನ ಪತ್ನಿ ದುಃಖಿತಳಾಗಿದ್ದು ಪತಿಗಾಗಿ ಎಲ್ಲ ಕಡೆ ಹುಡುಕಾಡಿ ಸಿಗದೆ ಇದ್ದಾಗ ಕೊನೆಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
ಭರತ್ ಪ್ರತಿಷ್ಠಿತ ಬ್ಯಾಂಕ್‌ವೊಂದರಲ್ಲಿ ಉದ್ಯೋಗಿಯಾದರೆ, ಪತ್ನಿ ಚೈತ್ರಾ ಕೂಡ ಸಾಫ್ಟ್ ಇಂಜಿನೀಯರ್. ಇಬ್ಬರು ಸೇರಿ ಒಂದೊಳ್ಳೆ ಜೀವನ ನಡೆಸುತ್ತಿದ್ದರು. ಆದರೆ ರಮ್ಮಿ ಆಡಿ ಬಹುಮಾನ ಗೆಲ್ಲಿ ಎಂಬ ಆ್ಯಡ್‌ಗಳಿಂದ ಆಕರ್ಷಿತನಾದ ಭರತ್ ಕೊನೆಗೆ ರಮ್ಮಿ ಚಟಕ್ಕೆ ಬಿದ್ದಿದ್ದ. ಕೊನೆಗೆ ಬ್ಯಾಂಕ್ ಉದ್ಯೋಗಿಯಾಗಿ ದೊಡ್ಡ ಮಟ್ಟದ ಸಾಲಗಾರನಾಗಿದ್ದ.
ಮಧ್ಯಮ ವರ್ಗದ ಜನರಿಗೆ 20 ಲಕ್ಷ ರೂ. ಎಂಬುದು ಬಹು ದೊಡ್ಡ ಮೊತ್ತವೇ. ಕೆಲವರು ಇಷ್ಟು ಹಣ ಸಿಕ್ಕರೆ ಸಾಕು ಒಂದು ಉದ್ದಿಮೆಗೆ ಹೂಡಿಕೆ ಮಾಡಿ ದುಡಿಮೆ ಮಾಡುತ್ತಾರೆ. ಆದರೆ ಈ ಬ್ಯಾಂಕ್ ಉದ್ಯೋಗಿ ಭರತ್ ಹೂಡಿಕೆ ಮಾಡಿದ್ದು ರಮ್ಮಿ ಜೂಜಿನಲ್ಲಿ. ರಮ್ಮಿ ಚಟಕ್ಕೆ ಬಿದ್ದವನಿಗೆ ತನಗೆ ಬರುತ್ತಿದ್ದ ಸಂಬಳ ಕೂಡ ಸಾಕಾಗುತ್ತಿರಲಿಲ್ಲ. ಪಡೆದುಕೊಂಡಿರುವ ಸಾಲದ ಇಎಂಐ ಕೂಡ ಕಟ್ಟಬೇಕಿತ್ತು. ಜತೆಗೆ ಫ್ಯಾಮಿಲಿ ಕಮಿಟ್ಮೆಂಟ್ ಬೇರೆ ಇತ್ತು . ಒಂದಲ್ಲ ಒಂದು ದಿನ ಕೋಟಿ ಗಳಿಸುತ್ತೀನಿ ಎಂದು ರಮ್ಮಿ ಆ್ಯಪ್‌ನಲ್ಲಿ ಜೂಜಾಟ ನಡೆಸಿದ್ದ.
ಸಂಬಳದ ಹಣ ಅಲ್ಲದೆ ಸಾಲ ಮಾಡಿ ಜೂಜಿಗೆ ಬಳಸಿದ. ಕೊನೆಗೆ ಆ ಸಾಲದ ಮೊತ್ತ ದಾಟಿದ್ದು 20 ಲಕ್ಷಕ್ಕೆ. ಆ ಸಾಲಕ್ಕೆ ಮತ್ತೆ ಬಡ್ಡಿ ಕಟ್ಟಬೇಕು. ಕೊಡದೆ ಇದ್ದಾಗ ಸಾಲಗಾರರು ಕಾಟ ಕೊಡಲು ಶುರು ಮಾಡಿದ್ದರು. ಇದರಿಂದ ಬೇಸತ್ತ ಬ್ಯಾಂಕ್ ಉದ್ಯೋಗಿ ಎರಡು ದಿನ ಮನೆ ಬಿಟ್ಟಿದ್ದ. ಪತ್ನಿ ಚೈತ್ರಾ ಜತೆ ಫೋನ್ ಸಂಪರ್ಕದಲ್ಲಿದ್ದ.
ಆದರೆ ನಾಪತ್ತೆ ಆಗಿದ್ದ. ಎರಡು ದಿನ ಬಳಿಕ ಮನೆಯಲ್ಲಿ ಪುಸ್ತಕವೊಂದರಲ್ಲಿ ಸಾಲಗಾರರ ಕಾಟ ಜಾಸ್ತಿ ಆಗಿದೆ ನಾನು ಮನೆ ಬಿಟ್ಟು ಹೋಗುತ್ತಿದ್ದೀನಿ. ನನ್ನ ಹುಡುಕುವುದು ಬೇಡ ಎಂದು ಬರೆದಿದ್ದ. ಜತೆಗೆ ಆತನ ಮೊಬೈಲ್ ಕೂಡ ಇತ್ತು. ಅದನ್ನು ಪರಿಶೀಲನೆ ನಡೆಸಿದಾಗ ವಿಡಿಯೋ ಸಿಕ್ಕಿದೆ. ತನ್ನ ಬೈಕ್‌ನಲ್ಲಿ ಮನೆ ಬಿಟ್ಟಿರುವ ಭರತ್‌ಗಾಗಿ ಆತನ ಪತ್ನಿ ತೀವ್ರ ಹುಡುಕಾಟ ನಡೆಸಿ ಕೊನೆಗೆ ಪೊಲೀಸರಿಗೆ ದೂರು ನೀಡಿದ್ದಾಳೆ . ಈ ಸಂಬಂಧ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ