ಬೆಂಗಳೂರು: ಸಮಂತಾ ರುತ್ ಪ್ರಭು ನಟಿಸಿರುವ ʼಸೂಪರ್ ಡಿಲಕ್ಸ್ʼ ಸಿನಿಮಾದ ಸನ್ನಿವೇಶವನ್ನೇ ಹೋಲುವ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಸಿನಿಮಾದ ನಾಯಕಿ ಜತೆಗೆ ಕದ್ದು ಲೈಂಗಿಕ ಕ್ರಿಯೆ ನಡೆಸುತ್ತಿರುವಾಗಲೇ ಪ್ರಿಯತಮ ಹೃದಯಾಘಾತದಿಂದ ಸಾಯುತ್ತಾನೆ. ಆತನ ಶವವನ್ನು ಎಸೆಯಲು ಆಕೆಯ ಗಂಡನೇ ಸಹಕರಿಸುತ್ತಾನೆ. ಅಂಥದೇ ಘಟನೆ ಇಲ್ಲಿ ನಡೆದಿದೆ. ಇದು ಪುಟ್ಟೇನಹಳ್ಳಿಯಲ್ಲಿ ಪತ್ತೆಯಾದ ವೃದ್ಧರೊಬ್ಬರ ಶವ ಪತ್ತೆಯ ಹಿಂದಿರುವ ಅಸಲಿ ಘಟನೆ.
ಪುಟ್ಟೇನಹಳ್ಳಿಯಲ್ಲಿ ವೃದ್ಧರೊಬ್ಬರ ಶವ ಒಂದು ಚಾಪೆ, ಪ್ಲಾಸ್ಟಿಕ್ ಬ್ಯಾಗ್ ಹಾಗೂ ಬಟ್ಟೆಯಲ್ಲಿ ಸುತ್ತಿಟ್ಟು ಎಸೆದಿದ್ದುದು ಪತ್ತೆಯಾಗಿತ್ತು. ಶವದ ಬೆನ್ನು ಬಿದ್ದ ಪೊಲೀಸರಿಗೆ ಈ ವಿಚಿತ್ರ ಕಥೆ ಎದುರಾಗಿದೆ. 67 ವರ್ಷದ ಈ ವೃದ್ಧರ ಹೆಸರು ಬಾಲಸುಬ್ರಹ್ಮಣ್ಯ. ಹೃದಯ ಸಮಸ್ಯೆ ಹೊಂದಿದ್ದ ಬಾಲಸುಬ್ರಹ್ಮಣ್ಯ ಒಂದು ವರ್ಷದ ಹಿಂದೆಯೇ ಆಂಜಿಯೋಪ್ಲಾಸ್ಟಿ ಮಾಡಿಸಿದ್ದರು. ಇವರಿಗೆ 35 ವರ್ಷದ ತಮ್ಮ ಮನೆ ಕೆಲಸದವಳ ಜೊತೆ ಅಕ್ರಮ ಸಂಬಂಧವಿತ್ತು.
ನ.16ರಂದು ಸಂಜೆ ಮೊಮ್ಮಗನನ್ನು ಬ್ಯಾಡ್ಮಿಂಟನ್ ಕ್ಲಾಸಿಗೆ ಬಿಟ್ಟು, ಬಾಲಸುಬ್ರಹ್ಮಣ್ಯ ಅವರು ಮನೆ ಕೆಲಸದವಳ ಮನೆಗೆ ಹೋಗಿದ್ದಾರೆ. ಅಲ್ಲಿ ಆಕೆಯ ಜತೆಗೆ ಲೈಂಗಿಕ ಕ್ರಿಯೆ ನಡೆಸುವಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇದರಿಂದ ಭಯ ಬಿದ್ದ ಕೆಲಸದಾಕೆ, ಪೊಲೀಸರು ತನ್ನನ್ನು ಕೊಲೆ ಪ್ರಕರಣದಲ್ಲಿ ಬಂಧಿಸಬಹುದು ಎಂದು ಅಂಜಿದ್ದಾಳೆ. ಗಂಡ ಮತ್ತು ಸಹೋದರನನ್ನು ಕರೆಸಿ ಶವ ವಿಲೇವಾರಿ ಮಾಡಲು ತಂತ್ರ ರೂಪಿಸಿದ್ದು, ಪ್ಯಾಸ್ಟಿಕ್ ಬ್ಯಾಗ್‌ನಲ್ಲಿ ಶವವನ್ನು ಸುತ್ತಿ ಪುಟ್ಟೇನಹಳ್ಳಿಯ ನಿರ್ಜನ ಪ್ರದೇಶದಲ್ಲಿ ಎಸೆದು ಬಂದಿದ್ದರು.
ಮನೆ ಕೆಲಸದಾಕೆಯ ಜತೆಗೆ ಇವರಿಗೆ ತುಂಬ ಮೊದಲಿನಿಂದಲೂ ಸಂಬಂಧವಿತ್ತೆನ್ನಲಾಗಿದೆ. ಕೆಲಸದಾಕೆ ಹೇಳುತ್ತಿರುವ ವಿಚಾರದ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಶವವನ್ನು ಪೋಸ್ಟ್ ಮಾರ್ಟಮ್‌ಗಾಗಿ ಕಳಿಸಲಾಗಿದೆ.
ಇದನ್ನೂ ಓದಿ | ಬೆಡ್ ಶೀಟ್‌ನಲ್ಲಿ ಸುತ್ತಿದ ಸ್ಥಿತಿಯಲ್ಲಿ ಶವ ಪತ್ತೆ, ಹಲವು ಶಂಕೆ, ಕೇಸ್ ದಾಖಲು