Site icon Vistara News

Bangalore Bandh : ಬೆಂಗಳೂರು ಬಂದ್‌ ಕರೆ; ಮುನ್ನೆಚ್ಚರಿಕೆ ವಹಿಸಲು ಕೋರಿ ಹೈಕೋರ್ಟ್‌ಗೆ ಅರ್ಜಿ; ಸರ್ಕಾರಕ್ಕೆ ನೋಟಿಸ್‌ ಜಾರಿ

Bangalore Bandh High court

ಬೆಂಗಳೂರು: ಕರ್ನಾಟಕ ನೆಲಜಲ ರಕ್ಷಣಾ ಸಮಿತಿ ಕರೆ ನೀಡಿರುವ ಸೆಪ್ಟೆಂಬರ್‌ 26ರ ಬೆಂಗಳೂರು ಬಂದ್‌ಗೆ (Bangalore Bandh on Sep 26) ಸಂಬಂಧಿಸಿ ರಾಜ್ಯ ಹೈಕೋರ್ಟ್‌ನಲ್ಲಿ (Karnataka High court) ದಾವೆ ಸಲ್ಲಿಸಲಾಗಿದೆ. ದಾವೆಯನ್ನು (Petition asking clarity on bandh) ತಕ್ಷಣವೇ ವಿಚಾರಣೆಗೆ ಸ್ವೀಕರಿಸಿರುವ ಕೋರ್ಟ್‌ ಮಧ್ಯಾಹ್ನ 2.3೦ಕ್ಕೆ ನಡೆಯುವ ವಿಚಾರಣೆಯ ವೇಳೆ ಅಡ್ವೊಕೇಟ್‌ ಜನರಲ್‌ (Advocate General) ಅವರು ಹಾಜರಿರಬೇಕು ಎಂದು ಸೂಚನೆ ನೀಡಿದೆ.

ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆಯನ್ನು ವಿರೋಧಿಸಿ ಬೆಂಗಳೂರು ಬಂದ್‌ ಕರೆಯ ಹಿನ್ನೆಲೆಯಲ್ಲಿ ಸಾರ್ವಜನಿಕ ವಲಯದಲ್ಲಿ ಗೊಂದಲವಿದೆ. ಹೊರಗಡೆ ಹೋಗಬಹುದಾ? ಹೋಗಬಾರದಾ ಎನ್ನುವ ಆತಂಕತವಿದೆ. ಹೀಗಾಗಿ ಬಂದ್ ವೇಳೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೆಶಿಸಲು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

ಸಾರ್ವಜನಿಕರಿಗೆ ತೊಂದರೆಯಾಗದಂತೆ ಮತ್ತು ಯಾವುದೇ ಅಹಿತಕರ ಘಟನೆ ನಡೆದು ಸಾರ್ವಜನಿಕ ಹಾಗೂ ಖಾಸಗಿ ಅಸ್ತಿಪಾಸ್ತಿಗೆ ಹಾನಿಯಾಗಂದಂತೆ ಕ್ರಮಕ್ಕೆ ಸೂಚನೆ ಕೊಡಬೇಕು ಎನ್ನುವುದು ವಕೀಲ ಜಿ.ಆರ್‌. ಮೋಹನ್‌ ಅವರು ಸಲ್ಲಿಸಿರುವ ಅರ್ಜಿಯ ಸಾರಾಂಶ.

ನ್ಯಾಯಮೂರ್ತಿ ಜಿ. ನರೇಂದರ್ ಅವರ ನೇತೃತ್ವದ ವಿಭಾಗೀಯ ಪೀಠಕ್ಕೆ ಅರ್ಜಿ ಸಲ್ಲಿಕೆಯಾಗಿದೆ. ಈ ಕುರಿತು ಮಧ್ಯಾಹ್ನ 2.30ಕ್ಕೆ ವಿಚಾರಣೆ ನಡೆಯಲಿದ್ದು, ಈ ವೇಳೆ ಖುದ್ದು‌ ಹಾಜರಿರಬೇಕು ಎಂದು ರಾಜ್ಯ ಅಡ್ವೋಕೇಟ್ ಜನರಲ್ ಕೆ.ಶಶಿ ಕಿರಣ್ ಶೆಟ್ಟಿ ಅವರಿಗೆ ನಿರ್ದೇಶನ ನೀಡಲಾಗಿದೆ.

ಇದನ್ನೂ ಓದಿ: Cauvery water dispute : ಬೆಂಗಳೂರು, ಕರ್ನಾಟಕ ಬಂದ್‌ಗೆ ಸರ್ಕಾರದ ಸಹಕಾರ: ಡಿ.ಕೆ. ಶಿವಕುಮಾರ್

ಬಂದ್‌ ಕರೆ ಗೊಂದಲ, ಸಿಗುತ್ತದಾ ರಕ್ಷಣೆ?

ಬೆಂಗಳೂರಿನ ಐವತ್ತಕ್ಕೂ ಹೆಚ್ಚು ಸಂಘಟನೆಗಳು ಸೇರಿ ಬಂದ್‌ ಕರೆ ನೀಡಿವೆ. ಆದರೆ, ಜನರು ಹೇಗೆ ಸ್ಪಂದಿಸಬೇಕು ಎನ್ನುವ ವಿಚಾರದಲ್ಲಿ ಗೊಂದಲವಿದೆ. ಬಸ್‌ಗಳು ಇರುತ್ತವಾ? ಖಾಸಗಿ ವಾಹನದಲ್ಲಿ ಓಡಾಟ ಮಾಡಬಹುದಾ? ಯಾರಾದರೂ ತಡೆದರೆ ಏನು ಮಾಡಬೇಕು? ಯಾವ ರೀತಿಯ ರಕ್ಷಣೆ ಇದೆ ಎಂಬ ಬಗ್ಗೆ ಸ್ಪಷ್ಟತೆಗಳಿಲ್ಲ.

ಈ ರೀತಿಯ ಗೊಂದಲದ ಸನ್ನಿವೇಶದಲ್ಲಿ ಸಮಾಜ ವಿರೋಧಿ ಶಕ್ತಿಗಳು ಕಾನೂನನ್ನು ತಮ್ಮ ಕೈಗೆ ಎತ್ತಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಸರ್ಕಾರ ಈ ಬಗ್ಗೆ ಸ್ಪಷ್ಟನೆ ನೀಡಬೇಕು, ಜನರಲ್ಲಿ ಭರವಸೆ ಮೂಡಿಸುವ ಕೆಲಸ ಮಾಡಬೇಕು ಎಂದು ಅರ್ಜಿಯಲ್ಲಿ ವಿನಂತಿಸಲಾಗಿದೆ.

ರಾಜ್ಯ ಸರ್ಕಾರ ಬಂದ್‌ ವಿಚಾರದಲ್ಲಿ ಇದುವರೆಗೂ ಸ್ಪಷ್ಟವಾಗಿ ಏನನ್ನೂ ಹೇಳಿಲ್ಲ. ಪ್ರತಿಭಟನೆ ಮಾಡುವುದು ಅವರ ಹಕ್ಕು, ಮಾಡಲಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ, ಜನರಿಗೆ ಯಾವ ರೀತಿಯ ರಕ್ಷಣೆ ಸಿಗುತ್ತದೆ. ಬಂದ್‌ ಮಾಡದಿದ್ದರೆ ಏನಾಗುತ್ತದೆ, ಬಲವಂತವಾಗಿ ಬಂದ್‌ ಮಾಡಿಸಲು ಬಂದರೆ ಯಾರು ಹೊಣೆ ಎಂಬ ಪ್ರಶ್ನೆಗಳಿಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ.

Exit mobile version