Site icon Vistara News

Inspector Death: ಮತ್ತೊಬ್ಬ ಪೊಲೀಸ್‌ ಇನ್‌ಸ್ಪೆಕ್ಟರ್‌ ಆತ್ಮಹತ್ಯೆ, ಎರಡು ತಿಂಗಳ ಹಿಂದೆ ಟ್ರಾನ್ಸ್‌ಫರ್‌ ಆಗಿದ್ದ ಸಿಸಿಬಿ ಎಸ್‌ಐ

police inspector death thimmegowda

ಬೆಂಗಳೂರು: ರಾಜ್ಯದಲ್ಲಿ ಮತ್ತೊಬ್ಬ ಪೊಲೀಸ್‌ ಇನ್‌ಸ್ಪೆಕ್ಟರ್‌ ಆತ್ಮಹತ್ಯೆ (police inspector death) ಮಾಡಿಕೊಂಡಿದ್ದಾರೆ. ಎರಡು ತಿಂಗಳ ಹಿಂದೆ ಸಿಸಿಬಿಗೆ (CCB) ಟ್ರಾನ್ಸ್‌ಫರ್‌ (Tarnsfer) ಆಗಿದ್ದ ಪೊಲೀಸ್ ಇನ್‌ಸ್ಪೆಕ್ಟರ್ ತಿಮ್ಮೇಗೌಡ (Thimmegowda) ಆತ್ಮಹತ್ಯೆ ಮಾಡಿಕೊಂಡವರು. ಬೆಂಗಳೂರು ಸಿಸಿಬಿಯ ಆರ್ಥಿಕ ಅಪರಾಧ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಇವರು ಬಿಡದಿಯಲ್ಲಿ ಆತ್ಮಹತ್ಯೆಗೆ (Self harming) ಶರಣಾಗಿದ್ದಾರೆ.

ಬಿಡದಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ನಿರ್ಜನ ಪ್ರದೇಶದಲ್ಲಿ ಮರಕ್ಕೆ ನೇಣು ಹಾಕಿಕೊಂಡು ತಿಮ್ಮೇಗೌಡ ಸಾವಿಗೆ ಶರಣಾಗಿದ್ದಾರೆ. ಈ ಹಿಂದೆ ಕುಂಬಳಗೋಡಿನ ಇನ್‌ಸ್ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಅವರು ಎರಡು ತಿಂಗಳ ಹಿಂದೆ ಸಿಸಿಬಿಗೆ ವರ್ಗಾವಣೆಗೊಂಡಿದ್ದರು. ತಮ್ಮ ತೋಟದ ಜಾಗದಲ್ಲಿ ಮರಕ್ಕೆ ನೇಣು ಬಿಗಿದುಕೊಂಡಿದ್ದಾರೆ.

1998ರ ರೂರಲ್ ಬ್ಯಾಚ್ ಇನ್ಸ್‌ಪೆಕ್ಟರ್ ತಿಮ್ಮೇಗೌಡ, ಚನ್ನಪಟ್ಟಣದ ಹಳ್ಳಿಯೊಂದರ ನಿವಾಸಿ. ಗ್ರಾಮೀಣ ಕೃಪಾಂಕದಲ್ಲಿ ಆಯ್ಕೆಯಾಗಿದ್ದ ತಿಮ್ಮೇಗೌಡ ವಿಧಾನಸಭೆ ಚುನಾವಣೆ ವೇಳೆಗೆ ಬಿಡದಿಯಿಂದ ಅತ್ತಿಬೆಲೆಗೆ ವರ್ಗಾವಣೆಯಾಗಿದ್ದರು. 2023ರ ಸೆಪ್ಟೆಂಬರ್‌ನಲ್ಲಿ ಅತ್ತಿಬೆಲೆಯಲ್ಲಿ ಪಟಾಕಿ ದುರಂತ ನಡೆದ ಬಳಿಕ ಆ ಹಿನ್ನೆಲೆಯಲ್ಲಿ ಅಮಾನತುಗೊಂಡಿದ್ದರು. ನಂತರ ಕುಂಬಳಗೋಡು ಠಾಣೆಗೆ ವರ್ಗಾವಣೆಯಾಗಿದ್ದು, ಇತ್ತೀಚೆಗೆ ಸಿಸಿಬಿಗೆ ವರ್ಗಾವಣೆಯಾಗಿತ್ತು.

ಯಾದಗಿರಿಯಲ್ಲಿ ಪಿಎಸ್‌ಐ ಪರಶುರಾಮ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ರಾಜ್ಯ ಸರ್ಕಾರಕ್ಕೆ ಮುಜುಗರ ಸೃಷ್ಟಿಸುವ ಬೆನ್ನಲ್ಲೇ ಇನ್ನೊಬ್ಬ ಎಸ್‌ಐ ಆತ್ಮಹತ್ಯೆ ಪ್ರಕರಣ ನಡೆದಿದೆ. ಪಿಎಸ್‌ಐ ಪರಶುರಾಮ್ ಅವರ ಟ್ರಾನ್ಸ್‌ಫರ್‌ಗಾಗಿ ಲಂಚ ಕೇಳಿದ ಸ್ಥಳೀಯ ಶಾಸಕ ಹಾಗೂ ಆತನ ಪುತ್ರನ ಮೇಲೆ ದೂರು ದಾಖಲಾಗಿದೆ.

ಉಸಿರಾಟದ ತೊಂದರೆಯಿಂದ ಯೋಧ ಸಾವು

ಬಾಗಲಕೋಟೆ: ಉಸಿರಾಟದ ತೊಂದರೆಯಿಂದ‌ ಚಿಕಿತ್ಸೆ ಫಲಿಸದೇ ಬಾಗಲಕೋಟೆಯ (Bagalakote news) ಯೋಧರೊಬ್ಬರು ರಾಜಸ್ಥಾನದಲ್ಲಿ (Soldier Death) ಸಾವಿಗೀಡಾಗಿದ್ದಾರೆ. ಬಾಗಲಕೋಟೆ ತಾಲ್ಲೂಕಿನ ಖಜ್ಜಿಡೋಣಿ ಗ್ರಾಮದ ನಿವಾಸಿ ಹನುಮಂತ ಬಸಪ್ಪ ತಳವಾರ (32) ಮೃತ ಯೋಧ.

12 ವರ್ಷದಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ ಹನುಮಂತ, ಉಸಿರಾಟದ ತೊಂದರೆಯಿಂದ ರಾಜಸ್ಥಾನದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲೇ ಹನುಮಂತ ತಳವಾರ ಮೃತಪಟ್ಟಿದ್ದಾರೆ. ಅವರು ರಾಜಸ್ಥಾನದ ಜೋಧಪುರದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಮೃತ ಯೋಧ ತಂದೆ, ಪತ್ನಿ ವಿಜಯಲಕ್ಷ್ಮಿ, ಪುಟ್ಟ ಮಗಳು, ಮಗ, ಸಹೋದರರನ್ನು ಅಗಲಿದ್ದಾರೆ. ಹುತಾತ್ಮ ಯೋಧನ ಗ್ರಾಮ ಹಾಗೂ ಮನೆಯಲ್ಲಿ ಶೋಕದ ವಾತಾವರಣ ನೆಲೆಸಿದ್ದು, ಇವತ್ತು ಮಧ್ಯಾಹ್ನ ನಂತರ ಯೋಧನ ಪಾರ್ಥಿವ ಶರೀರ ಸ್ವಗ್ರಾಮಕ್ಕೆ ಆಗಮಿಸಲಿದೆ.

ಬೆಂಗಳೂರಿನಲ್ಲಿ ವಿದೇಶಿ ಪ್ರಜೆ ಆತ್ಮಹತ್ಯೆ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ (Bangalore crime) ವಿದೇಶಿ ಪ್ರಜೆಯ (Foreigner) ಶವ (Body) ಕೊಳೆತ ಸ್ಥಿತಿಯಲ್ಲಿ (UDR Case) ಪತ್ತೆಯಾಗಿದೆ. ಯುಕೆ ಮೂಲದ ಪ್ರಜೆ ಗೇವಿನ್ ಜೇಮ್ಸ್ ಯಂಗ್ (59) ಮೃತದೇಹ ಪತ್ತೆಯಾಗಿದ್ದು, ಆತ್ಮಹತ್ಯೆ (Self Harming) ಮಾಡಿಕೊಂಡಿರುವ ಶಂಕೆ ಇದೆ.

ಕೋರಮಂಗಲ 7ನೇ ಬ್ಲಾಕ್‌ಲ್ಲಿ ಘಟನೆ ನಡೆದಿದೆ. ಮೃತ ಜೇಮ್ಸ್‌ ಡೆತ್ ನೋಟ್ ಬರೆದಿಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಜುಲೈ 1ರಂದು ಬೆಂಗಳೂರಿಗೆ ಬಂದಿದ್ದ ಜೇಮ್ಸ್ ಯಂಗ್, ಆಪ್ ಮೂಲಕ ಕೋರಮಂಗಲದಲ್ಲಿ ಮನೆ ಬಾಡಿಗೆಗೆ ಪಡೆದಿದ್ದ. ಜನಾರ್ದನ್ ಎಂಬವರ ಮನೆಯಲ್ಲಿ ಬಾಡಿಗೆಗೆ ಇದ್ದ. ಶೆಫ್ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದ.

ಜೇಮ್ಸ್‌ ಹೆಂಡತಿಯಿಂದ ಡೈವೋರ್ಸ್‌ ಕೂಡ ಪಡೆದಿದ್ದು, ಖಿನ್ನತೆಗೊಳಗಾಗಿದ್ದ ಎನ್ನಲಾಗಿದೆ. ಅನಾರೋಗ್ಯದಿಂದ ಕೂಡ ಬಳಲುತ್ತಿದ್ದ ಜೇಮ್ಸ್‌ಗೆ ಬಿಪಿ, ಶುಗರ್ ಕೂಡ ಇತ್ತು. ಶುಗರ್ ಹಿನ್ನೆಲೆಯಲ್ಲಿ ಮಾತ್ರೆ ಹಾಗೂ ಇನ್ಸುಲಿನ್ ತೆಗೆದುಕೊಳ್ಳುತ್ತಿದ್ದ. ಓವರ್ ಡೋಸ್ ಟ್ಯಾಬ್ಲೆಟ್ ಹಾಗೂ ಇನ್ಸುಲಿನ್ ತಗೆದುಕೊಂಡು ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಅನುಮಾನಿಸಲಾಗಿದೆ.

ಕಳೆದ ತಿಂಗಳ 27ರಂದು ಮನೆ ಓನರ್‌ಗೆ ಕರೆ ಮಾಡಿದ್ದ ಜೇಮ್ಸ್, ಆಗಸ್ಟ್ 1ರವರೆಗೂ ನನ್ನನ್ನು ಡಿಸ್ಟರ್ಬ್‌ ಮಾಡಬೇಡಿ ಎಂದು ಹೇಳಿದ್ದ. ಶನಿವಾರ ಮನೆ ಮಾಲೀಕ ಎಷ್ಟೇ ಕರೆ ಮಾಡಿದರೂ ಜೇಮ್ಸ್ ಸ್ವೀಕರಿಸಿರಲಿಲ್ಲ. ಹೀಗಾಗಿ ಅನುಮಾನಗೊಂಡು ಮನೆ ಬಳಿ ಹೋಗಿ ನೋಡಿದಾಗ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

ಕೂಡಲೇ ಕೋರಮಂಗಲ ಪೊಲೀಸರಿಗೆ ಮನೆ ಮಾಲೀಕ ಜನಾರ್ದನ್ ಮಾಹಿತಿ ನೀಡಿದ್ದಾರೆ. ಕೋರಮಂಗಲ ಪೊಲೀಸರು ಹಾಗೂ ಎಫ್ಎಸ್ಎಲ್ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸಾವಿನ ಬಗ್ಗೆ ತನಿಖೆ ಕೈಗೊಂಡಿರುವ ಪೊಲೀಸರು, ಈ ಬಗ್ಗೆ ಎಫ್ಆರ್‌ಆರ್‌ಓಗೆ ಮಾಹಿತಿ ನೀಡಿದ್ದಾರೆ. ಕೋರಮಂಗಲ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Road Accident : ಅಮಾವಾಸ್ಯೆಗೆಂದು ದೇವಸ್ಥಾನಕ್ಕೆ ತೆರಳುತ್ತಿದ್ದ ಬೈಕ್‌ ಸವಾರ ಅಪಘಾತಕ್ಕೆ ಬಲಿ

Exit mobile version