ಬೆಂಗಳೂರು: ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ೬೨೫ಕ್ಕೆ ೬೧೬ ಅಂಕ ಗಳಿಸಿ ನಾಡಿನ ಜನರಿಂದ ಸೈ ಎನಿಸಿಕೊಂಡಿದ್ದ ಜೋಪಡಿಯ ಹುಡುಗ ಮಹೇಶ್, ದ್ವಿತೀಯ ಪಿಯುಸಿಯಲ್ಲೂ ಶೇ. ೯೫.೫ ಅಂಕ ಗಳಿಸುವ ಮೂಲಕ ತನ್ನ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾನೆ. ಶಿಕ್ಷಣಕ್ಕೆ ಬಡತನದ ಹಂಗಿಲ್ಲವೆಂಬ ಸಂದೇಶವನ್ನು ಮಹೇಶ್ ಸಾರಿದ್ದಾನೆ.
ಇದನ್ನೂ ಓದಿ | 2nd puc Toppers| ಹಪ್ಪಳ ಮಾರುವವರ ಮಗಳು ಈಗ ಪಿಯುಸಿ ಟಾಪರ್! ಸಾಧನೆಗೆ ಯಾವುದೂ ಅಡ್ಡಿ ಅಲ್ಲ
ಕೂಲಿ ಕಾರ್ಮಿಕ ಕುಟುಂಬಕ್ಕೆ ಸೇರಿದ ಮಹೇಶ್ ಅತ್ಯಂತ ಸವಾಲಿನ ದಿನಗಳಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕಗಳನ್ನು ಪಡೆದು ರಾಜ್ಯದ ಗಮನ ಸೆಳೆದಿದ್ದ. ಆಗ ಶಿಕ್ಷಣ ಸಚಿವರಾಗಿದ್ದ ಸುರೇಶ್‌ಕುಮಾರ್ ಅವರು ಈ ವಿದ್ಯಾರ್ಥಿ ವಾಸಿಸುವ ಜೋಪಡಿಗೆ ಭೇಟಿ ನೀಡಿ ಶಹಬ್ಬಾಸ್ ಹೇಳಿದ್ದರು. ಇದೀಗ ಮಹೇಶ್ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 95.5 ಅಂಕ ಗಳಿಸಿದ್ದಾನೆ. ಈ ಕುರಿತು ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಶ್ಲಾಘಿಸಿ ಅಭಿನಂದನೆ ಸಲ್ಲಿಸಿದ್ದಾರೆ.
ಮಹೇಶ್ ಹುಟ್ಟೂರು ಯಾದಗಿರಿ. ಇವರ ಕುಟುಂಬದವರು ಕೂಲಿ ಕೆಲಸಕ್ಕಾಗಿ ಬೆಂಗಳೂರಿಗೆ ವಲಸೆ ಬಂದಿದ್ದರು. ಬೆಂಗಳೂರಿನ ಕಗ್ಗದಾಸಪುರದ ಶೆಡ್‌ವೊಂದರಲ್ಲಿ ಆಸರೆ ಪಡೆದಿದ್ದರು. ಮಹೇಶ್ ತಂದೆಯನ್ನು ಕಳೆದುಕೊಂಡಿದ್ದಾನೆ. ತಾಯಿ ಹಾಗೂ ಅಣ್ಣನೇ ಈತನ ಪ್ರಪಂಚ. ಸುಗಮವಾಗಿ ಓದುವ ಯಾವ ಸೌಲಭ್ಯವೂ ಮಹೇಶ್‌ಗೆ ಇರಲಿಲ್ಲ. ಎರಡು ಹೊತ್ತಿನ ಊಟಕ್ಕೂ ಸಾಹಸ ಪಡಬೇಕಿತ್ತು. ಶೆಡ್‌ನಲ್ಲಿ ವಿದ್ಯುತ್ ದೀಪದ ವ್ಯವಸ್ಥೆಯೂ ಸಮರ್ಪಕವಾಗಿರಲಿಲ್ಲ. ಆದರೆ ಈ ಎಲ್ಲ ಅಡೆತಡೆಗಳನ್ನು ಮೀರಿಸಿ ಮಹೇಶ್ ಎಸ್ಎಸ್‌ಎಲ್‌ಸಿಯಲ್ಲಿ ೬೧೫ ಅಂಕ ಪಡೆದು ಅಸಾಮಾನ್ಯ ಸಾಧನೆ ಮಾಡಿದ್ದ. ಈತನ ಈ ಸಾಧನೆಗೆ ನಾಡಿಗೇ ನಾಡೇ ಮೆಚ್ಚುಗೆ ವ್ಯಕ್ತಪಡಿಸಿತ್ತು. ಈ ಪ್ರತಿಭಾವಂತ ವಿದ್ಯಾರ್ಥಿಗೆ ಅವಕಾಶ ನೀಡಲು ಅನೇಕ ಶಿಕ್ಷಣ ಸಂಸ್ಥೆಗಳು ಮುಂದೆ ಬಂದಿದ್ದವು.
ಉಡುಪಿಯ ಅಮೃತ ಭಾರತಿ ಕಾಲೇಜಿನವರು ತಾವಾಗಿಯೇ ಮಹೇಶನನ್ನು ಸಂಪರ್ಕಿಸಿ ಉಚಿತ ಪಿಯುಸಿ ಶಿಕ್ಷಣವನ್ನು ನೀಡಿದ್ದಾರೆ. ಹಾಸ್ಟೆಲ್‌ನಲ್ಲಿ ಇದ್ದುಕೊಂಡು ಓದು ಮುಗಿಸಿರುವ ಮಹೇಶ್ ಸಿಇಟಿ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿದ್ದಾನೆ. ದ್ವಿತೀಯ ಪಿಯುಸಿಯಲ್ಲಿ ಪಿಸಿಎಂಬಿ ಕಾಂಬಿನೇಷನ್‌ನಲ್ಲಿ ಓದಿದ್ದಾನೆ. ಗಣಿತದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಮಹೇಶ್ ಔಟ್ ಆಫ್ ಔಟ್ ಅಂಕ ಪಡೆದಿದ್ದಾನೆ. ಇತರೆ ಕೆಲವು ವಿಷಯಗಳಲ್ಲಿ ನಿರೀಕ್ಷೆಗಿಂತ ಕಡಿಮೆ ಅಂಕ ಬಂದಿರುವ ಹಿನ್ನೆಲೆಯಲ್ಲಿ ಮರುಮೌಲ್ಯಮಾಪನಕ್ಕೂ ಅರ್ಜಿ ಹಾಕಿದ್ದಾನೆ.
ಮುಂದೆ ಎಂಜಿನಿಯರ್ ಆಗಿ ಸೇವೆ ಸಲ್ಲಿಸುವ ಕನಸನ್ನು ಮಹೇಶ್ ಹೊತ್ತಿದ್ದಾನೆ. ನೀಟ್ ಪರೀಕ್ಷೆಗೂ ತಯಾರಿ ನಡೆಸಿದ್ದಾನೆ. ಈತನ ಮುಂದಿನ ವಿದ್ಯಾಭ್ಯಾಸಕ್ಕೂ ಜತೆಯಾಗಿ ನಿಲ್ಲುವುದಾಗಿ ಅಮೃತ ಭಾರತಿ ಕಾಲೇಜು ಮಂಡಳಿಯವರು ಭರವಸೆ ನೀಡಿದ್ದಾರೆ.
ನೆರವಿನ ಭರವಸೆ ನೀಡಿದ ಸುರೇಶ್ ಕುಮಾರ್
ಮಹೇಶ್ ಸಾಧನೆಗೆ ಸಂತಸ ವ್ಯಕ್ತಪಡಿಸಿರುವ ಮಾಜಿ ಸಚಿವ ಸುರೇಶ್ ಕುಮಾರ್, ಈ ವಿದ್ಯಾರ್ಥಿಯ ಮುಂದಿನ ಶಿಕ್ಷಣಕ್ಕೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. ಮುಂದೆ ಎಂಜಿನಿಯರ್ ಆಗಬೇಕೆಂಬ ಕನಸು ಹೊತ್ತಿರುವ ಮಹೇಶನಿಗೆ ಅವರು ಶುಭ ಕೋರಿದ್ದಾರೆ.
“”ಎಸ್ ಎಸ್ ಎಲ್ ಸಿ ಫಲಿತಾಂಶ ಬಂದಾಗ ಮಹೇಶನ ಮನೆಗೆ ಹೋಗಿದ್ದೆ. ಆ ಶೆಡ್ಡಿನ ಮನೆಯಲ್ಲಿ ಓದಿ ಇಷ್ಟೊಂದು ಅಂಕ ಗಳಿಸಿರುವುದು ಕಂಡು ಬೆರಗಾಗಿದ್ದೆ. ಈಗ ಮಹೇಶ್ ನನಗೆ ಫೋನ್ ಮಾಡಿ, ಪಿಯುಸಿಯಲ್ಲಿ ತನಗೆ ಶೇ.೯೫.೫ ಅಂಕ ಬಂದಿದೆ ಎಂದು ತಿಳಿಸಿದಾಗ ನನ್ನ ಸಂತಸ ಇಮ್ಮಡಿಯಾಯಿತು. ನಾಡಿನ ಹಿರಿಯ ಪತ್ರಕರ್ತರಾದ ಹರಿಪ್ರಕಾಶ್ ಕೋಣೆಮನೆ ಅವರು, ನನ್ನನ್ನು ಮಹೇಶ್ ಸಂಪರ್ಕಿಸಲು ಯತ್ನಿಸುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರು ʼʼ ಎಂದು ಸುರೇಶ್ ಕುಮಾರ್ ಅವರು ಫೇಸ್ ಬುಕ್‌ನಲ್ಲಿ ಬರೆದಿದ್ದಾರೆ.
ಶಿಕ್ಷಕಿ ಸುನೀತಾ ಪ್ರೋತ್ಸಾಹ ಸ್ಮರಿಸಿದ ಮಹೇಶ್
ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಓದುತ್ತಿದ್ದ ಮಹೇಶ್‌ನ ಸಾಧನೆಯನ್ನು ವಿಶೇಷವಾಗಿ ಗುರುತಿಸಿ ಪ್ರೋತ್ಸಾಹಿಸಿದ್ದು ಆ ಶಾಲೆಯ ಗಣಿತ ಶಿಕ್ಷಕಿ ಸುನೀತಾ ಹರಿಪ್ರಕಾಶ್. ಮಹೇಶನ ಕೌಟುಂಬಿಕ ಹಿನ್ನೆಲೆ ಮತ್ತು ಆತ ಎದುರಿಸುತ್ತಿದ್ದ ಸವಾಲುಗಳನ್ನು ಅರಿತಿದ್ದ ಸುನೀತಾ ಅವರು ಈತನಿಗೆ ಧೈರ್ಯ-ಸ್ಥೈರ್ಯ ತುಂಬಿ ಅಭ್ಯಾಸಕ್ಕೆ ಮಾರ್ಗದರ್ಶನ ಮಾಡಿದ್ದರು. ಹಿರಿಯ ಪತ್ರಕರ್ತ ಹರಿಪ್ರಕಾಶ್ ಕೋಣೆಮನೆ ಅವರು ಮಹೇಶ್‌ನ ಎಸ್ ಎಸ್ ಎಲ್ ಸಿ ಸಾಧನೆಯನ್ನು ಅಂದು ಶಿಕ್ಷಣ ಸಚಿವರಾಗಿದ್ದ ಸುರೇಶ್ ಕುಮಾರ್ ಅವರ ಗಮನ ಸೆಳೆದಿದ್ದರು.
ಈ ಬಗ್ಗೆ ನೆನಪು ಮಾಡಿಕೊಂಡಿರುವ ಮಹೇಶ್, ತನ್ನ ಮೆಚ್ಚಿನ ಶಿಕ್ಷಕಿ ಸುನೀತಾ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾನೆ. ತನ್ನ ಸಾಧನೆಯ ಹಿಂದೆ ಅವರ ಪಾತ್ರ ಮುಖ್ಯ ಎಂದು ಸ್ಮರಿಸಿದ್ದಾನೆ. ಜತೆಗೆ ತನ್ನ ಶಿಕ್ಷಣಕ್ಕೆ ನೆರವಾದ ಮತ್ತು ಪ್ರೋತ್ಸಾಹ ನೀಡಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದ್ದಾನೆ. ಬಡತನವೆಂಬ ಬೆಂಕಿಯಲ್ಲಿ ಅರಳಿದ ಹೂವಾಗಿರುವ ಮಹೇಶ್‌ನ ಸಾಧನೆ ಯುವ ಜನಾಂಗಕ್ಕೆ ಮಾದರಿಯಾಗಿದೆ.
ಇದನ್ನೂ ಓದಿ | 2nd puc Toppers| ಕಲೆಯಲ್ಲಿ ಬಳ್ಳಾರಿ; ವಿಜ್ಞಾನ-ವಾಣಿಜ್ಯದಲ್ಲಿ ಕರಾವಳಿ, ಬೆಂಗಳೂರು ವಿದ್ಯಾರ್ಥಿಗಳು ಮುಂದೆ