ಬೆಂಗಳೂರು : ಗಣೇಶ ಹಬ್ಬಕ್ಕೆ ತಯಾರಿ ಜೋರಾಗಿದ್ದು ನಗರದಲ್ಲಿ ಪಾಲಿಕೆಯಿಂದ (BBMP) ಗಣೇಶ ವಿಸರ್ಜನೆಗೆ 458 ಸ್ಥಳಗಳು ಸಿದ್ಧವಾಗಿವೆ. ನಗರದಲ್ಲಿ 421 ಸಂಚಾರಿ ಟ್ಯಾಂಕರ್ಗಳು ಮತ್ತು ದೊಡ್ಡ ಗಣೇಶ ವಿಸರ್ಜನೆಗೆ 37 ಕಲ್ಯಾಣಿಗಳು ಸಿದ್ಧವಾಗಿವೆ.
ಮನೆ, ಕಚೇರಿ ಹಾಗೂ ಸಾರ್ವಜನಿಕವಾಗಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿ ವಿಸರ್ಜನೆಗೆ 458 ಸ್ಥಳಗಳನ್ನು ಪಾಲಿಕೆ ವ್ಯವಸ್ಥೆ ಮಾಡಿದೆ. ಗಣೇಶ ಮೂರ್ತಿ ವಿಸರ್ಜನೆಗೆ ಮನೆಗಳಿಗೆ ಹತ್ತಿರದಲ್ಲಿಯೇ ಪ್ರತ್ಯೇಕ ವ್ಯವಸ್ಥೆಯನ್ನು ಬಿಬಿಎಂಪಿ ಮಾಡಿದೆ. ಪಾಲಿಕೆಯ 8 ವಲಯಗಳ 27 ವಿಧಾನಸಭಾ ಕ್ಷೇತ್ರಗಳಲ್ಲಿ 421 ತಾತ್ಕಾಲಿಕ ಸಂಚಾರಿ ಟ್ಯಾಂಕರ್ಗಳನ್ನು ವ್ಯವಸ್ಥೆ ಮಾಡಿದೆ. 5 ಇಂಚಿನಿಂದ 3 ಅಡಿ ಎತ್ತರದ ಎಲ್ಲ ಮಣ್ಣಿನ ಗಣೇಶ ಮೂರ್ತಿಗಳನ್ನು ಮೊಬೈಲ್ ಟ್ಯಾಂಕರ್ಗಳಲ್ಲಿ ವಿಸರ್ಜಿಸಲು ತಯಾರಿ ಮಾಡುತ್ತಿದೆ. ದೊಡ್ಡ ಮೂರ್ತಿಗಳ ವಿಸರ್ಜನೆ ಮಾಡಲು ಒಟ್ಟು 37 ತಾತ್ಕಾಲಿಕ ಕಲ್ಯಾಣಿಗಳನ್ನು ವ್ಯವಸ್ಥೆ ಮಾಡಿದೆ.
ಇದನ್ನೂ ಓದಿ | BBMP ವಾರ್ಡ್ ಮರುವಿಂಗಡಣೆ, ಮೀಸಲಾತಿ ಬಗ್ಗೆ ಮೊದಲು ಹೈಕೋರ್ಟ್ ತೀರ್ಮಾನಿಸಲಿ ಎಂದ ಸುಪ್ರೀಂ
ಪಾಲಿಕೆ ವ್ಯಾಪ್ತಿಯ ಕಲ್ಯಾಣಿಗಳು, ಮೊಬೈಲ್ ಟ್ಯಾಂಕರ್ ವಿವರ ಇಂತಿದೆ:
- ಪೂರ್ವ ವಲಯದಲ್ಲಿ ಹಲಸೂರು ಕೆರೆಯಲ್ಲಿ ಕಲ್ಯಾಣಿ ನಿರ್ಮಾಣ ಮಾಡಲಾಗಿದ್ದು, 107 ಮೊಬೈಲ್ ಟ್ಯಾಂಕರ್ಗಳ ವ್ಯವಸ್ಥೆ ಮಾಡಲಾಗಿದೆ.
- ಪಶ್ಚಿಮ ವಲಯದಲ್ಲಿ ಸ್ಯಾಂಕಿ ಕೆರೆ ಕಲ್ಯಾಣಿ ಹಾಗೂ 48 ಮೊಬೈಲ್ ಟ್ಯಾಂಕರ್ಗಳ ವ್ಯವಸ್ಥೆ ಮಾಡಲಾಗಿದೆ.
- ದಕ್ಷಿಣ ವಲಯದ ಯಡಿಯೂರು ಕೆರೆ ಹಾಗೂ ಎಸಿಐ ಲೇಔಟ್ನಲ್ಲಿ ಕಲ್ಯಾಣಿ ಜತೆ 51 ಟ್ಯಾಂಕರ್ಗಳನ್ನು ಪಾಲಿಕೆ ಸಿದ್ಧ ಮಾಡಿದೆ.
- ದಾಸರಹಳ್ಳಿ ವಲಯದ ಚೊಕ್ಕಸಂದ್ರ ಕೆರೆಯಲ್ಲಿ ಕಲ್ಯಾಣಿ ಹಾಗೂ 18 ಮೊಬೈಲ್ ಟ್ಯಾಂಕರ್ಗಳು ಸಿದ್ಧವಾಗಿವೆ.
- ಬೊಮ್ಮನಹಳ್ಳಿ ವಲಯದಲ್ಲಿ ಕೂಡ್ಲು ದೊಡ್ಡಕೆರೆ, ಸಿಂಗಸಂದ್ರ ಕೆರೆ, ಅರಕೆರೆ ಕೆರೆಯಲ್ಲಿ ಕಲ್ಯಾಣಿ ಹಾಗೂ 59 ಮೊಬೈಲ್ ಟ್ಯಾಂಕರ್ಗಳು ಸಿದ್ಧವಾಗಿವೆ.
- ಮಹದೇವಪುರ ವಲಯದಲ್ಲಿ ಬಿ.ನಾರಾಯಣಪುರ ಕೆರೆ, ವಿಭೂತಿಪುರ, ಚೆಲ್ಕೆರೆ, ಕಲ್ಕೆರೆ, ಮೇಡಹಳ್ಳಿ, ಕಾಡುಗೋಡಿ ಕಾಶಿ ವಿಶ್ವನಾಥ ದೇವಸ್ಥಾನ, ವಾಗ್ದವಿ ವಿಲಾಸ್ ರಸ್ತೆ, ಕೈಕೊಂಡ್ರಹಳ್ಳಿ ಕೆರೆ ಮತ್ತು ದೇವರಬೀಸನಹಳ್ಳಿ ಕಲ್ಯಾಣಿ ಹಾಗೂ 21 ಮೊಬೈಲ್ ಟ್ಯಾಂಕರ್ಗಳು ಸಿದ್ಧವಾಗಿವೆ.
- ರಾಜರಾಜೇಶ್ವರಿ ನಗರ ವಲಯದ ಮಾದವಾರ, ಹೇರೋಹಳ್ಳಿ, ಉಲ್ಲಾಳ, ದುಬಾಸಿಪಾಳ್ಯ, ಗಾಂಧಿ ನಗರ, ಕೋಣಸಂದ್ರಕೆರೆ, ಜೆ.ಪಿ. ಪಾರ್ಕ್ ಆಟದ ಮೈದಾನದಲ್ಲಿ ಕಲ್ಯಾಣಿ, 113 ಮೊಬೈಲ್ ಟ್ಯಾಂಕರ್ಗಳು ಸಿದ್ಧವಾಗಿವೆ..
- ಯಲಹಂಕ ವಲಯದ ಹೆಬ್ಬಾಳ, ಯಲಹಂಕ, ಅಟ್ಟೂರು, ಅಲ್ಲಾಳಸಂದ್ರ, ಕೋಗಿಲು, ಜಕ್ಕೂರು, ರಾಚೇನಹಳ್ಳಿ ಕೆರೆ, ಸಹಕಾರನಗರ ಗಣಪತಿ ದೇವ ಸ್ಥಾನ, ದೊಡ್ಡಬೊಮ್ಮಸಂದ್ರ ಕೆರೆ, ಬಿಇಎಲ್ ಲೇಔಟ್ ನ ರಾಘವೇಂದ್ರ ಸ್ವಾಮಿ ಮಠ, ಸಿಂಗಾಪುರ ಕೆರೆಯ ಕಲ್ಯಾಣಿ ಸೇರಿದಂತೆ, 4 ಮೊಬೈಲ್ ಟ್ಯಾಂಕರ್ ವ್ಯವಸ್ಥೆಯನ್ನು ಪಾಲಿಕೆ ಮಾಡಿದೆ.
ಇದನ್ನೂ ಓದಿ | BBMP Election | ಕರಡು ಮತದಾರರ ಪಟ್ಟಿ ಪ್ರಕಟ; ಆಕ್ಷೇಪಣೆ ಸಲ್ಲಿಸಲು ಅವಕಾಶ