ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರ 75ನೇ ವರ್ಷದ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಉಪಸ್ಥಿತಿಯನ್ನು ಸಿದ್ದರಾಮಯ್ಯ ಖಾತ್ರಿಪಡಿಸಿಕೊಂಡಿದ್ದರು. ಇದೀಗ ಪಕ್ಷದಲ್ಲಿ ವ್ಯಕ್ತಿ ಪೂಜೆ ಇಲ್ಲ ಎನ್ನುತ್ತ ಸಂಘಟನಾತ್ಮಕವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಯೋಜಿಸಿರುವ ಫ್ರೀಡಂ ವಾಕ್ ಸಮಾರೋಪಕ್ಕೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಆಹ್ವಾನ ನೀಡಲಾಗಿದೆ.
ಆಗಸ್ಟ್ 3ರಂದು ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ನಡೆದಿತ್ತು ಆರೇಳು ಲಕ್ಷ ಜನರು ಸೇರಿದ್ದ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಅವರು ಭಾಗವಹಿಸಿದ್ದರು. ಸ್ವತಃ ಸಿದ್ದರಾಮಯ್ಯ ನೀಡಿದ್ದ ಆಹ್ವಾನವನ್ನು ಮನ್ನಿಸಿ ರಾಹುಲ್ ಆಗಮಿಸಿದ್ದರು. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರನ್ನು ಹೊಗಳಿದ್ದಷ್ಟೇ ಅಲ್ಲದೆ ವೇದಿಕೆ ಮೇಲೆ ಕೈಸನ್ನೆ ಮಾಡಿ ಇಬ್ಬರೂ ಆಲಿಂಗನ ಮಾಡಿಕೊಳ್ಳುವಂತೆ ʻಪ್ರೇರೇಪಣೆʼಯನ್ನೂ ನೀಡಿದ್ದರು. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಒಗ್ಗಟ್ಟಾಗಿದೆ ಎಂಬ ಸಂದೇಶ ನೀಡಲು ಪ್ರಯತ್ನಿಸಿದ್ದರು.
ಸಿದ್ದರಾಮೋತ್ಸವ ಮುಗಿದ ಕೂಡಲೆ ಕೆಪಿಸಿಸಿ ವತಿಯಿಂದ ಫ್ರೀಡಂ ಮಾರ್ಚ್ ಆರಂಭಿಸಲಾಗಿದೆ. ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ತಲಾ 75 ಕಿ,ಮೀ. ಪಾದಯಾತ್ರೆ ನಡೆಸುವುದು ಮುಖ್ಯ ಕಾರ್ಯಕ್ರಮ. ಅದರಲ್ಲೂ ಬೆಂಗಳೂರಿನ ಇಪ್ಪತ್ತೆಂಟು ಕ್ಷೇತ್ರಗಳಲ್ಲಿ ಸ್ವತಃ ಶಿವಕುಮಾರ್ ಭಾಗವಹಿಸುತ್ತಿದ್ದಾರೆ. ಪ್ರತಿದಿನ ಮೂರ್ನಾಲ್ಕು ಕ್ಷೇತ್ರಗಳಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದಾರೆ.
ಬಿಬಿಎಂಪಿ ಚುನಾವಣೆಯನ್ನು ಕಣ್ಮುಂದೆ ಇರಿಸಿಕೊಂಡು ನಡೆಯುತ್ತಿರುವ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಆಗಸ್ಟ್ 15ರಂದು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಪ್ರಿಯಾಂಕಾ ಗಾಂಧಿ ಆಗಮಿಸಬೇಕು ಎನ್ನುವುದು ಶಿವಕುಮಾರ್ ಆಶಯ.
ರಾಹುಲ್ ಗಾಂಧಿಯವರು ಆಗಮಿಸಿದ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಪರ ವಾತಾವರಣ ಹೆಚ್ಚಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ಕಾಂಗ್ರೆಸ್ ಪರ ಅಲೆ ಇದ್ದು, ಇತ್ತೀಚಿನ ದಿನಗಳಲ್ಲಿ ಮಳೆ ಹೆಚ್ಚಾದ ಕಾರಣ ಬಿಜೆಪಿ ಸರ್ಕಾರದ ಮೇಲಿನ ಆಕ್ರೋಶ ಹೆಚ್ಚಳವಾಗಿದೆ. ವಿಶೇಷವಾಗಿ ಮಹಿಳೆಯರು ಕಾಂಗ್ರೆಸ್ ಪರ ಒಲವು ತೋರುತ್ತಿದ್ದಾರೆ. ಪ್ರಿಯಾಂಕಾ ಗಾಂಧಿಯವರು ಆಗಮಿಸಿದರೆ ಮತ್ತಷ್ಟು ಅನುಕೂಲವಾಗುತ್ತದೆ ಎಂದು ಡಿ.ಕೆ. ಶಿವಕುಮಾರ್ ಚಿಂತನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೆ ಪ್ರಿಯಾಂಕಾ ಅವರ ಜತೆಗೆ ಡಿ.ಕೆ. ಶಿವಕುಮಾರ್ ಮಾತನಾಡಿದ್ದಾರೆ. ತಾವು ಆಗಮಿಸಿದರೆ ಪಕ್ಷಕ್ಕೆ ಹಾಗೂ ರಾಜ್ಯಕ್ಕೆ ಉತ್ತಮ ಸಂದೇಶ ರವಾನೆ ಆಗುತ್ತದೆ ಎಂದು ತಿಳಿಸಿದ್ದಾರೆ. ಪ್ರಿಯಾಂಕಾ ಸಹ ಇದಕ್ಕೆ ಧನಾತ್ಮಕವಾಗಿ ಸ್ಪಂದನೆ ಮಾಡಿದ್ದಾರೆ ಎನ್ನಲಾಗಿದೆ. ಸದ್ಯದಲ್ಲೆ ಈ ಕುರಿತು ಖಚಿತಪಡಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.
ಇದನ್ನೂ ಓದಿ | ಸಿದ್ದರಾಮೋತ್ಸವ, ಅಮೃತ ಮಹೋತ್ಸವ ಸಮಾವೇಶದಿಂದ ಬಿಜೆಪಿಗೆ ನಡುಕ ಎಂದ ಸಲೀಂ ಅಹಮದ್