Site icon Vistara News

ಬಿಜೆಪಿಯಲ್ಲಿ ಬಿ.ಎಸ್‌. ಯಡಿಯೂರಪ್ಪ ಹವಾ ಶಕ್ತಿ ಸಂಗಮದಲ್ಲಿ ಮತ್ತೆ ಸಾಬೀತು: ಸಿ.ಟಿ. ರವಿ ಪರ ಬಿ.ಎಲ್‌. ಸಂತೋಷ್‌ ದನಿ

pro bs yediyurappa wave in bjp seen in bjp cells convention

ಬೆಂಗಳೂರು: ವಯಸ್ಸಿನ ಕಾರಣಕ್ಕೆ ಸಿಎಂ ಸ್ಥಾನದಿಂದ ಕೆಳಗೆ ಇಳಿಸಿದರೂ ಮಾಜಿ ಸಿಎಂ ಹಾಗೂ ರಾಷ್ಟ್ರೀಯ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ಹವಾ ಬಿಜೆಪಿಯಲ್ಲಿ ಕಡಿಮೆಯಾಗಿಲ್ಲ ಎನ್ನುವುದು ಮತ್ತೆ ಸಾಬೀತಾಗಿದೆ. ಇದೇ ವೇಳೆ ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರಿಗೂ ಕಾರ್ಯಕರ್ತರ ಮೆಚ್ಚುಗೆ ದೊರಕಿದ್ದು, ಇದಕ್ಕೆ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಅವರ ಒಪ್ಪಿಗೆಯ ಮುದ್ರೆಯೂ ಸಿಕ್ಕಿದೆ.

ಎಲ್ಲಕ್ಕಿಂತಲೂ ಮುಖ್ಯವಾಗಿ ರಾಜ್ಯದ ಬಿಜೆಪಿ ಸಂಘಟನಾತ್ಮಕ 24 ಪ್ರಕೋಷ್ಠಗಳ ರಾಜ್ಯ ಸಮಾವೇಶ ʼಶಕ್ತಿ ಸಂಗಮʼದಲ್ಲಿ ಮಾಜಿ ಸಿಎಂ ಪರವಾಗಿ ಧ್ವನಿ ಕೇಳಿಬಂದಿದೆ. ಕೇಂದ್ರ ಸಚಿವರ ಎದುರು ಯಡಿಯೂರಪ್ಪ ಶಕ್ತಿ ಪ್ರದರ್ಶನವಾಗಿದೆ.

ಅರಮನೆ ಮೈದಾನದಲ್ಲಿ ಆಯೋಜನೆ ಮಾಡಿರುವ ಬಿಜೆಪಿ ಪ್ರಕೋಷ್ಠಗಳ ಸಮಾವೇಶದಲ್ಲಿ ಯಡಿಯೂರಪ್ಪ ಅವರ ಹೆಸರನ್ನು ಹೇಳುತ್ತಿದ್ದಂತೆಯೇ ಇಡೀ ಕಾರ್ಯಕ್ರಮದಲ್ಲಿ ಸಂಚಲನ ಮೂಡಿತು. ಯಡಿಯೂರಪ್ಪ ಪೋಡಿಯಂ ಬಳಿ ಬಂದ ನಂತರವೂ ಯಡಿಯೂರಪ್ಪ ಅವರಿಗೆ ಜೈ, ರಾಜಾಹುಲಿಗೆ ಜೈ ಎನ್ನುವಂತಹ ಘೋಷಣೆಗಳು ಇಡೀ ಸಭಾಂಗಣದಲ್ಲಿ ಕೇಳಿಬಂದವು.

ಅಲ್ಲಿವರೆಗೆ ಅತ್ಯಂತ ಶಿಸ್ತು, ಮೌನವಾಗಿದ್ದ ಇಡೀ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಹೆಸರು ಹೇಳಿದ ನಂತರ ಉಂಟಾದ ಸಂಚಲನಕ್ಕೆ ವೇದಿಕೆಯಲ್ಲಿದ್ದ ನಾಯಕರನ್ನೂ ಅಚ್ಚರಿಗೆ ದೂಡಿತು. ಎಲ್ಲೆಡೆ ಮೊಳಗುತ್ತಿದ್ದ ಘೋಷಣೆಗಳನ್ನು ಆಲಿಸುತ್ತ ಮೂಕವಿಸ್ಮಿತರಾದರು. ಯಡಿಯೂರಪ್ಪ ಶಕ್ತಿ ಪ್ರದರ್ಶನ ಇಷ್ಟಕ್ಕೇ ನಿಲ್ಲಲಿಲ್ಲ.

ನಂತರ ಮಾತನಾಡಿದ ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರ ಭಾಷಣದ ಸಮಯದಲ್ಲೂ ಇದು ವ್ಯಕ್ತವಾಯಿತು. ಭಾಷಣ ಆರಂಭಕ್ಕೂ ಮುನ್ನ ಸಿ.ಟಿ. ರವಿ ಅವರು, ಎಲ್ಲರೂ ಎರಡೂ ಕೈ ಮೇಲೆತ್ತಿ ಮುಷ್ಠಿ ಕಟ್ಟಿ ಘೋಷಣೆ ಕೂಗಲು ಹೇಳಿದರು. ಭಾರತ್‌ ಮಾತಾ ಕಿ ಜೈ ಎಂದು ಎರಡು ಬಾರಿ, ಜೈ ಶ್ರೀರಾಮ್‌ ಎಂದು ಒಂದು ಬಾರಿ ಘೋಷಣೆ ನಂತರ ಪ್ರಧಾನಿ ನರೇಂದ್ರ ಮೋದಿಯವರಿಗೆ ಜೈಕಾರ ಹಾಕಿಸಿ ಮಾತು ಮುಂದುವರಿಸಿದರು. ಆದರೆ ಅದಕ್ಕೂ ಮುನ್ನವೇ ಕಾರ್ಯಕರ್ತರು ಅನೇಕರು ʼಯಡಿಯೂರಪ್ಪ ಅವರಿಗೆ ಜೈʼ ಎನ್ನುತ್ತ ಮತ್ತೆ ಸಂಚಲನ ಮೂಡಿಸಿದರು.

ಈ ಬೆಳವಣಿಗೆ, ಸ್ವತಃ ಸಿ.ಟಿ. ರವಿ ಅವರನ್ನೂ ಅಚ್ಚರಿಗೆ ತಳ್ಳಿತು. ಯಡಿಯೂರಪ್ಪ ಅವರಿಗಿರುವ ಜನಪ್ರಿಯತೆಯನ್ನು ಅರಿತು ಮುಗುಳ್ನಗುತ್ತ ಭಾಷಣ ಮುಂದುವರಿಸಿದರು. ಯಡಿಯೂರಪ್ಪ ಅವರ ಜನಪ್ರಿಯತೆಯನ್ನು ರಾಷ್ಟ್ರೀಯ ಬಿಜೆಪಿ ಸಂಘಟನಾ ಕಾರ್ಯದರ್ಶೀ ಬಿ.ಎಲ್‌. ಸಂತೋಷ್‌ ಅವರೂ ತಮ್ಮ ಮಾತಿನಲ್ಲಿ ಉಲ್ಲೇಖಿಸಿದರು.

ಭಾಷಣ ಆರಂಭಕ್ಕೂ ಮುನ್ನ, ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯರು, ಮಾಜಿ ಸಿಎಂ, ಜನಪರ, ರೈತರ ಪರ, ಶೋಷಿತರ, ರೈತಪರ ಯೋಜನೆಗಳು, ಅವುಗಳ ಕ್ರಿಯಾನ್ವಯದ ಕಾರಣಕ್ಕೆ ನಾಡಿನ ಜನರ ಮನಸ್ಸಿನಲ್ಲಿ ಚಿರಸ್ಥಾಯಿಯಾಯಿ ಉಳಿದುಕೊಂಡಿರುವ, ನಮ್ಮೆಲ್ಲರ ನಾಯಕರಾದ ಬಿ.ಎಸ್.‌ ಯಡಿಯೂರಪ್ಪ ಅವರೇ ಎಂದು ಸಂಬೋಧಿಸಿದರು. ಆಗಲೂ ನೆರೆದ ಕಾರ್ಯಕರ್ತರು ಘೋಷಣೆ ಕೂಗಿ ಸಂತಸ ವ್ಯಕ್ತಪಡಿಸಿದರು.

ಸಿ.ಟಿ. ರವಿ ಕುರಿತು ಸಂತೋಷ್‌ ಮೆಚ್ಚುಗೆ

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌, ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ, ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ, ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶೀ ಸಿ.ಟಿ. ರವಿ ನಂತರ ಸಮಾರೋಪ ಭಾಷಣವನ್ನು ಬಿ.ಎಲ್‌. ಸಂತೋಷ್‌ ನಡೆಸಿದರು.

ಪ್ರಾರಂಭದಲ್ಲಿ ಯಡಿಯೂರಪ್ಪ ಅವರ ಕುರಿತು ಅಪಾರ ಮೆಚ್ಚುಗೆ ವ್ಯಕ್ತಪಡಿಸಿ ಭಾಷಣ ಆರಂಭಿಸಿದರು. ನಂತರ, ಈಗಷ್ಟೇ ನಮ್ಮನ್ನು ಉದ್ದೇಶಿಸಿ ಮಾತನಾಡಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಚುನಾವಣೆ ದೃಷ್ಟಿಯಿಂದ ಹೋರಾಟದ ಕಿಚ್ಚನ್ನು ಎಬ್ಬಿಸಿದ್ದಾರೆ. ಶಾಲನ್ನೂ ಬೀಸಿ ಚುನಾವಣೆ ಸಂಕಲ್ಪ ಹಬ್ಬಿಸಿದ್ದಾರೆ. ಅನೇಕರು ಮಾತನಾಡಿದ ನಂತರ ಮಾತಾಡುವುದು ಕಷ್ಟ. ನಾನು ಮಾತನಾಡಿದ ನಂತರವೂ, ಹಿಂದೆ ಮಾತನಾಡಿದವರ ಗುಂಗಿನಲ್ಲೇ ಇಲ್ಲಿಂದ ಹೊರಗೆ ಹೋಗಬೇಕು ಎಂದು ಹೇಳಿದರು. ನಂತರವೂ ಭಾಷಣದಲ್ಲಿ, ಸಿ.ಟಿ. ರವಿ ಅವರನ್ನು ಬಿ.ಎಲ್‌. ಸಂತೋಷ್‌ ಉಲ್ಲೇಖಿಸಿದರು.

ಇದನ್ನೂ ಓದಿ | ಬಿ.ಎಸ್‌. ಯಡಿಯೂರಪ್ಪ ಮುನಿಸನ್ನು ತಣ್ಣಗಾಗಿಸಿದ ಸಿಎಂ ಬೊಮ್ಮಾಯಿ; ಎರಡು ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಘೋಷಿಸಿದ BSY

Exit mobile version