ಬೆಂಗಳೂರು: ಈವೆಂಟ್ ಮ್ಯಾನೇಜ್ಮೆಂಟ್ ಹೆಸರಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ (Prostitution Case) ನಡೆಸುತ್ತಿದ್ದ ಪತಿ-ಪತ್ನಿಯನ್ನು ಬಂಧಿಸಲಾಗಿದೆ. ಬೆಂಗಳೂರಿನ ಪಟ್ಟೆಗಾರಪಾಳ್ಯದ ನಿವಾಸಿ ಪ್ರಕಾಶ್ ಹಾಗೂ ಪಾರಿಜಾತ ದಂಪತಿ ಬಂಧಿತರು. ಈ ಆರೋಪಿಗಳು ಪ್ರಕಾಶ್-ರಾಕೇಶ್, ಪಾರಿಜಾತ-ಪೂಜಾ ಎಂದು ಹೆಸರು ಬದಲಿಸಿಕೊಂಡಿದ್ದರು.
ಉದ್ಯೋಗ ಕೊಡಿಸುವ ನೆಪದಲ್ಲಿ ಬಡ ಹೆಣ್ಣುಮಕ್ಕಳನ್ನು ವೇಶ್ಯಾವಾಟಿಕೆ ಅಡ್ಡೆಗೆ ತಳ್ಳುತ್ತಿದ್ದರು. ಉತ್ತರ ಕರ್ನಾಟಕ ಮೂಲದ ಬಡ ಹೆಣ್ಣುಮಕ್ಕಳನ್ನು ಬೆಂಗಳೂರಿಗೆ ಕರೆತಂದು ಕೆಲಸ ಕೊಡಿಸದೇ ಹಣದ ಆಮಿಷ ತೋರಿಸುತ್ತಿದ್ದರು. ಕರ್ನಾಟಕದ ಹೆಣ್ಣು ಮಕ್ಕಳನ್ನು ಕರೆದೊಯ್ದು ತಮಿಳುನಾಡು ಪಾಂಡಿಚೇರಿ ರೆಸಾರ್ಟ್‌ಗಳಲ್ಲೂ ದಂಧೆ ನಡೆಸುತ್ತಿದ್ದರು.
ಹೊರ ರಾಜ್ಯದ ಶ್ರೀಮಂತರು, ಉದ್ಯಮಿಗಳಿಗೆ ಕರ್ನಾಟಕ ಹೆಣ್ಣುಮಕ್ಕಳನ್ನು ಸಪ್ಲೈ ಮಾಡುತ್ತಿದ್ದರು. ಪ್ರತಿ ವಾರಕ್ಕೊಮ್ಮೆ ಬೆಂಗಳೂರಿನಿಂದ ತಮಿಳುನಾಡು ಪಾಂಡಿಚೇರಿಗೆ ಕರೆದೊಯ್ದು ದಂಧೆ ನಡೆಸುತ್ತಿದ್ದರು. ಮದುವೆ ಈವೆಂಟ್ ಮ್ಯಾನೇಜ್ಮೆಂಟ್ ಹೆಸರಲ್ಲಿ ಕರೆದೊಯ್ದು ಐಷಾರಾಮಿ ರೆಸಾರ್ಟ್‌ಗಳಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆಯನ್ನು ನಡೆಸುತ್ತಿದ್ದರು. ಪಾರ್ಟಿಗೆ ಬರುವ ಒಬ್ಬರಿಗೆ ತಲಾ 25-50 ಸಾವಿರದ ವರೆಗೂ ರೇಟ್ ಫಿಕ್ಸ್ ಮಾಡುತ್ತಿದ್ದರು.
ಬೆಂಗಳೂರಿನಿಂದ ಯುವತಿಯರನ್ನು ಕರೆದೊಯ್ಯುತ್ತಿದ್ದ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ದಾಳಿ ವೇಳೆ ನಾಲ್ವರು ಯುವತಿಯರನ್ನು ರಕ್ಷಿಸಿ, ದಂಪತಿಯನ್ನು ಬಂಧಿಸಿದ್ದಾರೆ. ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.