Site icon Vistara News

PSI Exam: ಪಿಎಸ್‌ಐ ಪರೀಕ್ಷೆ ಮುಂದೂಡಿಕೆ, ಜ. 23ಕ್ಕೆ ಫಿಕ್ಸ್‌: ಗೃಹ ಸಚಿವರ ಘೋಷಣೆ

PSI exam date postponed

ಬೆಂಗಳೂರು: ಪಿಎಸ್‌ಐ ಪರೀಕ್ಷೆ (PSI Exam) ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರ (Congress Government) ಗುಡ್ ನ್ಯೂಸ್ ಕೊಟ್ಟಿದೆ. ಈ ವಿಷಯ ಸದನದಲ್ಲಿ ಪ್ರಸ್ತಾಪವಾಗಿದ್ದು, ಒಂದು ತಿಂಗಳು ಪರೀಕ್ಷೆ ದಿನಾಂಕವನ್ನು ಮುಂದೂಡಿಕೆ ಮಾಡಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್‌ (Home Minister Dr G Parameshwara) ಘೋಷಿಸಿದ್ದಾರೆ. ಇದರನ್ವಯ ಜನವರಿ 23ಕ್ಕೆ ಮುಂದೂಡಿಕೆಯಾದಂತೆ ಆಗಿದೆ.

ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ (ಪಿಎಸ್‌ಐ) ನೇಮಕಾತಿ (PSI Scam) ಮರು ಪರೀಕ್ಷೆಗೆ ಆದೇಶಿಸಿ ಬಿಜೆಪಿ ನೇತೃತ್ವದ ಹಿಂದಿನ ರಾಜ್ಯ ಸರ್ಕಾರ (State Government) ಹೊರಡಿಸಿದ್ದ ಆದೇಶಕ್ಕೆ ರಾಜ್ಯ ಹೈಕೋರ್ಟ್‌ (Karnataka High court) ಗ್ರೀನ್‌ ಸಿಗ್ನಲ್‌ ನೀಡಿದ್ದ ಬೆನ್ನಲ್ಲೇ ಡಿ.23ಕ್ಕೆ ಪಿಎಸ್ಐ ಮರು‌ ಪರೀಕ್ಷೆಯನ್ನು ನಡೆಸಲಾಗುವುದು ಎಂದು ಘೋಷಣೆ ಮಾಡಲಾಗಿತ್ತು. ಆದರೆ ಈಗ ಗೃಹ ಸಚಿವ ಡಾ. ಜಿ. ಪರಮೇಶ್ವರ್‌, ಒಂದು ತಿಂಗಳು ಪರೀಕ್ಷೆಯ ದಿನಾಂಕವನ್ನು ಮುಂದೂಡಿಕೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ:Belagavi Winter Session: ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಇನ್ಮುಂದೆ ವರ್ಷಪೂರ್ತಿ ಲೈಟಿಂಗ್ಸ್

ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಲ ಅಧಿವೇಶನದಲ್ಲಿ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಈ ವಿಷಯವನ್ನು ಪ್ರಸ್ತಾಪಿಸಿದ್ದು, ಎರಡು ತಿಂಗಳ ಬಳಿಕ ಮಾಡಿ, ಸಮಸ್ಯೆ ಏನೂ ಆಗಲ್ಲ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಪರೀಕ್ಷೆ ನಡೆಸುವಾಗ ಜಾಗ್ರತೆ ವಹಿಸಿದ್ದರೆ ಇದೆಲ್ಲ ಆಗುತ್ತಿರಲಿಲ್ಲ. ಆ ಸರ್ಕಾರ, ಈ ಸರ್ಕಾರ ಅಂತಲ್ಲ. ಇದು ಯಾವ ಸರ್ಕಾರಕ್ಕಾದರೂ ಅಪ್ಲೇ ಆಗುತ್ತದೆ. ಕಾನೂನು ಸುವ್ಯವಸ್ಥೆ ಕಷ್ಟ ಆಗಿದೆ. ಒಂದೂವರೆ ಸಾವಿರ ಪಿಎಸ್‌ಐ ನೇಮಕ ಆಗಬೇಕು. ನಮ್ಮ ಶಾಸಕರೇ ಇವರು ಸರಿ ಇಲ್ಲ, ಅವರು ಸರಿ ಇಲ್ಲ ಅಂತಾರೆ. ಈ ಮಧ್ಯದಲ್ಲಿ ಖಾಲಿ ಇದೆ. ಇವರನ್ನು ಕೊಡಿ, ಅವರನ್ನು ಕೊಡಿ ಅಂತಾರೆ. ಆರ್. ಅಶೋಕ್, ಆರಗ ಜ್ಞಾನೇಂದ್ರ ಅವರು ಗೃಹ ಸಚಿವರಾಗಿದ್ದರು. ಅವರಿಗೂ ಈ ಸಮಸ್ಯೆ ಬಗ್ಗೆ ಗೊತ್ತಿದೆ ಎಂದು ಹೇಳಿದರು.

2024ರ ಜನವರಿ 23ಕ್ಕೆ ಪರೀಕ್ಷೆ

ಷಡ್ಯೂಲ್ ಅನ್ನು 23/12/2023ಕ್ಕೆ ಮಾಡಿದ್ದೆವು. 23/1/2024ಕ್ಕೆ ಪರೀಕ್ಷೆ ನಡೆಸುವುದಾಗಿ ಡಾ. ಜಿ. ಪರಮೇಶ್ವರ್‌ ಸದನಕ್ಕೆ ಉತ್ತರಿಸಿದರು.

ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದ ಹೈಕೋರ್ಟ್‌

ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ (ಪಿಎಸ್‌ಐ) ನೇಮಕಾತಿ ಮರು ಪರೀಕ್ಷೆಗೆ ಆದೇಶಿಸಿ ಬಿಜೆಪಿ ನೇತೃತ್ವದ ಹಿಂದಿನ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ರಾಜ್ಯ ಹೈಕೋರ್ಟ್‌ ಅನುಮತಿ ನೀಡಿತ್ತು. ಅಂದರೆ 545 ಪಿಎಸ್‌ಐಗಳ ನೇಮಕಾತಿಗಾಗಿ ನಡೆದ ಪರೀಕ್ಷೆ ಮತ್ತು ಬಳಿಕ ಪ್ರಕಟಿಸಿದ ನೇಮಕಾತಿ ಪಟ್ಟಿಯನ್ನು ರದ್ದುಪಡಿಸಿ ಹೊಸದಾಗಿ ಪರೀಕ್ಷೆ ನಡೆಸಲು ಹೈಕೋರ್ಟ್‌ ಅವಕಾಶ ಮಾಡಿಕೊಟ್ಟಿತ್ತು.

ನ್ಯಾಯಮೂರ್ತಿಗಳಾದ ಪಿ ಎಸ್‌ ದಿನೇಶ್‌ ಕುಮಾರ್‌ ಮತ್ತು ಟಿ ಜಿ ಶಿವಶಂಕರೇಗೌಡ ಅವರ ನೇತೃತ್ವದ ವಿಭಾಗೀಯ ಪೀಠ ಈ ಮಹತ್ವದ ಆದೇಶವನ್ನು ಹೊರಡಿಸಿದೆ. ಇದು ಮರುಪರೀಕ್ಷೆ ಬೇಡ, ಕಳಂಕಿತರನ್ನು ಹೊರತುಪಡಿಸಿ ನೇಮಕಾತಿ ಪಟ್ಟಿಯನ್ನು ಪ್ರಕಟಿಸಲು ಸರ್ಕಾರಕ್ಕೆ ಆದೇಶ ನೀಡಬೇಕು ಎಂದು ಕೋರಿದ್ದ ಅಭ್ಯರ್ಥಿಗಳ ಪರ ದಾವೆಯನ್ನು ತಿರಸ್ಕರಿಸಲಾಗಿದೆ.

ಪರೀಕ್ಷೆಯಲ್ಲಿ ಅಕ್ರಮದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಈ ಮೊದಲು ನಡೆಸಿದ್ದ ಲಿಖಿತ ಪರೀಕ್ಷೆ ರದ್ದುಪಡಿಸಿ, ಮರುಪರೀಕ್ಷೆ ನಡೆಸಲು ಬಿಜೆಪಿ ನೇತೃತ್ವದ ಸರ್ಕಾರ ಆದೇಶ ಹೊರಡಿಸಿತ್ತು. ಈ ಆದೇಶವನ್ನು ರದ್ದುಪಡಿಸಬೇಕು. ಕಳಂಕಿತ ಮತ್ತು ಕಳಂಕರಹಿತ ಅಭ್ಯರ್ಥಿಗಳನ್ನು ಪ್ರತ್ಯೇಕಿಸಿ, ನೇಮಕಾತಿ ಆದೇಶ ನೀಡಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಆಯ್ಕೆಯಾಗಿದ್ದ ನೂರಾರು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಒಂದು ಹಂತದಲ್ಲಿ ಹೈಕೋರ್ಟ್‌ ಆದೇಶಕ್ಕೆ ತಡೆಯಾಜ್ಞೆ ನೀಡಿದ್ದ ಹೈಕೋರ್ಟ್‌ ಎಲ್ಲ ಅರ್ಜಿಗಳ ವಿಚಾರಣೆಯನ್ನು ನಡೆಸಿತ್ತು. ಕೆಲವು ದಿನಗಳ ಹಿಂದೆ ವಿಚಾರಣೆಯನ್ನು ಪೂರ್ಣಗೊಳಿಸಿ, ತೀರ್ಪನ್ನು ನವೆಂಬರ್‌ 10ಕ್ಕೆ ನಿಗದಿ ಮಾಡಿತ್ತು.

ಪಿಎಸ್‌ಐ ನೇಮಕಾತಿಯ ಹಗರಣದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಮರು ಪರೀಕ್ಷೆ ನಡೆಸಲು ಉದ್ದೇಶಿಸಿರುವ ತೀರ್ಮಾನದಲ್ಲಿ ನ್ಯಾಯಾಲಯ ಮಧ್ಯಪ್ರವೇಶ ಮಾಡಲಾಗದು ಎಂದು ಪೀಠವು ಆಗಸ್ಟ್‌ 4ರ ವಿಚಾರಣೆಯಂದು ಮೌಖಿಕವಾಗಿ ಅಭಿಪ್ರಾಯ ವ್ಯಕ್ತಪಡಿಸಿತ್ತು. ಪಿಎಸ್‌ಐ ನೇಮಕಾತಿಗೆ ಸಂಬಂಧಿಸಿದಂತೆ ಅಕ್ರಮದಲ್ಲಿ ಭಾಗಿಯಾಗಿರುವವರನ್ನು ಹೊರತುಪಡಿಸಿ ಉಳಿದವರಿಗೆ ವಿಶೇಷ ಪರೀಕ್ಷೆ ನಡೆಸಲು ಏಕೆ ಸಾಧ್ಯವಿಲ್ಲ ಎಂಬುದಕ್ಕೆ ಸಂಬಂಧಿಸಿದ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ರಾಜ್ಯ ಸರ್ಕಾರವು ಪೀಠಕ್ಕೆ ಸಲ್ಲಿಸಿತ್ತು.

ಪಿಎಸ್‌ಐ ನೇಮಕಾತಿ ಹಗರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಮರು ಪರೀಕ್ಷೆ ನಡೆಸುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಹೊರಡಿಸಿರುವ ಆದೇಶಕ್ಕೆ 2022ರ ಸೆಪ್ಟೆಂಬರ್‌ 28ರಂದು ಹೈಕೋರ್ಟ್‌ ತಡೆ ವಿಧಿಸಿದ್ದು, ಆ ಆದೇಶ ಚಾಲ್ತಿಯಲ್ಲಿದೆ.

ರಾಜ್ಯ ಸರ್ಕಾರವು 2022ರ ಏಪ್ರಿಲ್‌ 29ರಂದು ಪಿಎಸ್‌ಐ ಹುದ್ದೆಗಳಿಗೆ ಮರು ಪರೀಕ್ಷೆ ನಡೆಸುವುದಾಗಿ ಆದೇಶ ಹೊರಡಿಸಿತ್ತು. ಪಿಎಸ್‌ಐ ನೇಮಕಾತಿಗೆ ನಡೆಸಲಾಗಿದ್ದ ಲಿಖಿತ ಪರೀಕ್ಷೆ ರದ್ದುಪಡಿಸಿ, ಮರುಪರೀಕ್ಷೆ ನಡೆಸುವ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ, ಆಯ್ಕೆಯಾಗಿದ್ದ ಕೆಲ ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಆಡಳಿತಾತ್ಮಕ ನ್ಯಾಯಾಧಿಕರಣ (ಕೆಎಟಿ) 2022ರ ಜುಲೈ 19ರಂದು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಭಾದಿತ ಅಭ್ಯರ್ಥಿಗಳು ಸಲ್ಲಿಸಿರುವ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿರುವ ನ್ಯಾಯಾಲಯವು ಆದೇಶ ಕಾಯ್ದಿರಿಸಿತ್ತು.

ಇದನ್ನೂ ಓದಿ: Belagavi Winter Session: ಸದನದಲ್ಲಿ ಮುಟ್ಟಿನ ಶುಚಿತ್ವ ಚರ್ಚೆ; ಜನವರಿಯಿಂದ ಶಾಲೆಗಳಿಗೆ ನ್ಯಾಪ್‌ಕಿನ್‌

ಏನಿದು ಪರೀಕ್ಷೆ ಅಕ್ರಮ ವಿವಾದ?

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2021ರ ಅಕ್ಟೋಬರ್‌ ಮೂರರಂದು ಪಿಎಸ್‌ಐ ನೇಮಕಾತಿ ಪ್ರವೇಶ ಪರೀಕ್ಷೆಯನ್ನು ನಡೆಸಿತ್ತು. ಒಟ್ಟು 545 ಹುದ್ದೆಗಳಿಗಾಗಿ ಲಕ್ಷಾಂತರ ಜನ ಪರೀಕ್ಷೆ ಬರೆದಿದ್ದರು. ಈ ಪರೀಕ್ಷೆಯಲ್ಲಿ ದೊಡ್ಡ ಮಟ್ಟದ ಅಕ್ರಮ ನಡೆದಿರುವುದು ಬೆಳಕಿಗೆ ಬಂದ ಬಳಿಕ 52 ಮಂದಿ ಅಭ್ಯರ್ಥಿಗಳು ಇದರಲ್ಲಿ ಭಾಗಿಯಾಗಿದ್ದು ಬೆಳಕಿಗೆ ಬಂದಿತ್ತು. ಈ ಪ್ರಕರಣದಲ್ಲಿ ಹಲವರ ಬಂಧನವಾಗಿದೆ ಮತ್ತು ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾದ 52 ಮಂದಿಯನ್ನು ಇನ್ನು ಯಾವುದೇ ಪೊಲೀಸ್‌ ಪರೀಕ್ಷೆಗೆ ಹಾಜರಾಗದಂತೆ ಶಾಶ್ವತವಾಗಿ ನಿರ್ಬಂಧಿಸಲಾಗಿದೆ. ಈ ನಡುವೆ ಅಕ್ರಮ ಎಸಗಿದವರನ್ನು ಹೊರತುಪಡಿಸಿ ಉಳಿದವರ ಆಯ್ಕೆ ಪಟ್ಟಿಯನ್ನು ಪ್ರಕಟಿಸುವಂತೆ ಅಭ್ಯರ್ಥಿಗಳು ಆಗ್ರಹಿಸಿದ್ದರು. ಆದರೆ, ಸರ್ಕಾರ ಮರುಪರೀಕ್ಷೆಗೆ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಅಭ್ಯರ್ಥಿಗಳು ಹೈಕೋರ್ಟ್‌ ಮೊರೆ ಹೊಕ್ಕಿದ್ದರು.

ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದ ಘಟನಾವಳಿ

2021, ಜನವರಿ 21: ಕರ್ನಾಟಕ ಪೊಲೀಸ್‌ ಇಲಾಖೆಯಿಂದ 545 ಪಿಎಸ್ಐ ಹುದ್ದೆಗಳ ನೇರ ನೇಮಕಾತಿಗೆ ನೋಟಿಫಿಕೇಷನ್
2021, ಅಕ್ಟೋಬರ್‌ 3: ರಾಜ್ಯದ ವಿವಿಧ ಕೇಂದ್ರಗಳಲ್ಲಿ ಪಿಎಸ್‌ಐ ನೇಮಕಾತಿಯ ಲಿಖಿತ ಪರೀಕ್ಷೆ
2022, ಜನವರಿ 1: ಪರೀಕ್ಷಾ ಕೇಂದ್ರಗಳಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರರನ್ನು ಭೇಟಿಯಾಗಿ ಅಭ್ಯರ್ಥಿಗಳಿಂದ ದೂರು
2022, ಜನವರಿ 18: 545 ಪಿಎಸ್‌ಐ ನೇಮಕಾತಿಯ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ
2022, ಫೆಬ್ರವರಿ 7: ತಾತ್ಕಾಲಿಕ ಆಯ್ಕೆ ಪಟ್ಟಿ ತಡೆಗೆ ನೇಮಕಾತಿ ವಿಭಾಗದ ಎಡಿಐಜಿ ಸೂಚನೆ

2022, ಏಪ್ರಿಲ್‌ 7: ರಾಜ್ಯ ಸರ್ಕಾರದಿಂದ ಪಿಎಸ್ಐ ನೇಮಕಾತಿ ಅಕ್ರಮದ ತನಿಖೆ ಸಿಐಡಿಗೆ
2022, ಏಪ್ರಿಲ್‌ 8: ಕಲಬುರ್ಗಿ ನಗರ ಪೊಲೀಸ್‌ ಠಾಣೆಗೆ ಬೆಂಗಳೂರು ಸಿಐಡಿ, ಇನ್‌ಸ್ಪೆಕ್ಟರ್ ಕೆ.ಎಚ್ ದಿಲೀಪ್‌ ಕುಮಾರ್‌ ದೂರು
2022, ಏಪ್ರಿಲ್‌ 9: ಆರೋಪಿಗಳ ವಿರುದ್ಧ ಕಲಬುರ್ಗಿ ನಗರ ಪೊಲೀಸ್‌ ಠಾಣೆಯಲ್ಲಿ ಎಫ್ಐಆರ್ ದಾಖಲು
2022, ಏಪ್ರಿಲ್‌ 9: ಪಿಎಸ್‌ಐ ಹಗರಣಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿ ವೀರೇಶ್ ನನ್ನು ಮೊದಲು ಬಂಧನ
2022, ಏಪ್ರಿಲ್‌ 21: ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಸೇರಿ ಐವರನ್ನು ಮಹಾರಾಷ್ಟ್ರದ ಪುಣೆಯಲ್ಲಿ ಬಂಧನ.
2022, ಏಪ್ರಿಲ್‌ 22: ಅಫಜಲಪುರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಹಾಂತೇಶ್‌ ಪಾಟೀಲ್‌ ಬಂಧನ.

ಇದನ್ನೂ ಓದಿ: Karnataka Weather : ಮಿಚುಂಗ್ ಚಂಡಮಾರುತ ಎಫೆಕ್ಟ್‌; ನಾಳೆ ಭಾರಿ ಮಳೆ ಸಾಧ್ಯತೆ

2022, ಏಪ್ರಿಲ್‌ 27: ಪೊಲೀಸ್‌ ನೇಮಕಾತಿ ವಿಭಾಗದ ಎಜಿಡಿಪಿ ಅಮೃತ್‌ ಪೌಲ್‌ ವರ್ಗಾವಣೆ
2022, ಏಪ್ರಿಲ್‌ 29: ಪಿಎಸ್‌ಐ ನೇಮಕಾತಿ ಮರು ಪರೀಕ್ಷೆಗೆ ನಿರ್ಧರಿಸಿದ ಸರ್ಕಾರ
2022, ಏಪ್ರಿಲ್‌ 30: ಮರು ಪರೀಕ್ಷೆ ನಿರ್ಧಾರ ಹಿಂಪಡೆಯಲು ಆಗ್ರಹಿಸಿ ಬೆಂಗಳೂರಿನಲ್ಲಿ 400ಕ್ಕೂ ಹೆಚ್ಚು ಅಭ್ಯರ್ಥಿಗಳಿಂದ ಪ್ರತಿಭಟನೆ
2022, ಮೇ 1: 400ಕ್ಕೂ ಹೆಚ್ಚು ಅಭ್ಯರ್ಥಿಗಳ ವಿಚಾರಣೆ ನಡೆಸಿದ ಸಿಐಡಿ
2022, ಮೇ 10: ನೇಮಕಾತಿ ವಿಭಾಗದಲ್ಲಿ ನಾಲ್ವರು ಅಧಿಕಾರಿಗಳು ಸೇರಿ 6 ಮಂದಿ ಬಂಧನ
2022, ಮೇ 12: ನೇಮಕಾತಿ ವಿಭಾಗದಲ್ಲಿ ಡಿವೈಎಸ್‌ಪಿ ಆಗಿದ್ದ ಶಾಂತಕುಮಾರ್‌ ಬಂಧನ
2022, ಮೇ 26, 27: ಸಿಐಡಿ ಅಧಿಕಾರಿಗಳಿಂದ ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್‌ ಪೌಲ್‌ ವಿಚಾರಣೆ
2022, ಜೂನ್‌ 1: ಸಿಐಡಿ ಅಧಿಕಾರಿಗಳಿಂದ ಆರ್‌ಡಿ ಪಾಟೀಲ್‌ ಅಳಿಯ ಪ್ರಕಾಶ್‌ ಸೇರಿ ಮೂವರ ಬಂಧನ
2022, ಜುಲೈ 4: ಸಿಐಡಿ ಅಧಿಕಾರಿಗಳಿಂದ ಪೊಲೀಸ್‌ ನೇಮಕಾತಿ ವಿಭಾಗದ ಎಡಿಜಿಪಿ ಆಗಿದ್ದ ಅಮೃತ್‌ ಪೌಲ್‌ ಬಂಧನ.

Exit mobile version