ಬೆಂಗಳೂರು: ರಾಜಧಾನಿಯನ್ನು ನಡುಗಿಸಿರುವ ಮಹಾಮಳೆ (Rain News) ಕೇವಲ ರಸ್ತೆ, ಕಟ್ಟಡಗಳನ್ನು ಮುಳುಗಿಸಿದ್ದಲ್ಲ. ಕಾವೇರಿ ನೀರು ಸರಬರಾಜು ಮಾಡುವ ಯಂತ್ರಾಗಾರಗಳೂ ನೀರಿನಲ್ಲಿ ಮುಳುಗಿವೆ. ಹೀಗಾಗಿ ಮಂಡ್ಯ ಜಿಲ್ಲೆಯ ತೊರೆಕಾಡನಹಳ್ಳಿ (ಟಿ.ಕೆ. ಹಳ್ಳಿ) ಸಿಎಂ ಬಸವರಾಜ ಬೊಮ್ಮಾಯಿ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಗರದ ಹಲವು ಕಡೆಗಳಲ್ಲಿ ಇನ್ನು ಎರಡು ದಿನ ಕಾವೇರಿ ನೀರು ಸರಬರಾಜು ಮಾಡಲಾಗುತ್ತಿಲ್ಲ ಎಂದು ಬಿಡಬ್ಲ್ಯೂಎಸ್‌ಎಸ್‌ಬಿ (BWSSB) ಅಧಿಕಾರಿಗಳು ತಿಳಿಸಿದ್ದಾರೆ. ಕಾವೇರಿ 3ನೇ ಹಂತ ಹಾಗೂ 4ನೇ ಹಂತದ ನೀರು ಸರಬರಾಜು ಯಂತ್ರಗಳು ನೀರಿನಲ್ಲಿ ಮುಳುಗಡೆಯಾಗಿದೆ. ಹೀಗಾಗಿ ಬಿಬಿಎಂಪಿಯ 8 ವ್ಯಾಪ್ತಿಯಲ್ಲಿ ಕಾವೇರಿ ನೀರಿನ ಸಮಸ್ಯೆ ಎದುರಾಗಹುದೆಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಪ್ರತಿದಿನ ಟಿ.ಕೆ ಹಳ್ಳಿ ಕಾವೇರಿ ಜಲಾನಯನದಿಂದ ಬೆಂಗಳೂರಿಗೆ 1,450 ಎಂಎಲ್‌ಡಿ (MLD) ನೀರು ಸರಬರಾಜು ಆಗುತ್ತಿತ್ತು. ಆದರೆ ಭಾನುವಾರ ರಾತ್ರಿಯಿಂದ 600 ಎಂಎಲ್‌ಡಿ (MLD) ಮಾತ್ರ ನೀರು ಪೂರೈಕೆಯಾಗಿದೆ. ಉಳಿದಂತೆ 850 ಎಂಎಲ್‌ಡಿ (MLD) ನೀರು ಸರಬರಾಜು ಸ್ಥಗಿತಗೊಂಡಿದೆ. ಇದರಿಂದಾಗಿ ನಗರಕ್ಕೆ 850 MLD ನೀರು ಕೊರತೆ ಕಾಡಲಿದೆ. ಮತ್ತೆ ಇದೇ ರೀತಿ ಮಳೆಯಾದರೆ ನಗರಕ್ಕೆ ನೀರಿನ ಅಭಾವ ಮುಂದುವರೆಯುವ ಸಾಧ್ಯತೆ ಇದೆ.
ಸಿಎಂ ಬೊಮ್ಮಾಯಿ ಅವರಿಗೆ ಸಚಿವರಾದ ಆರ್.ಅಶೋಕ್, ಅಶ್ವತ್ಥ್ ನಾರಾಯಣ್, ಬೈರತಿ ಬಸವರಾಜು ಜತೆಯಾದರು. ಘಟಕದೊಳಗೆ ಯಂತ್ರೋಪಕರಣಗಳು ಮುಳುಗಡೆ ಆಗಿರುವುದನ್ನು ಪರಿಶೀಲಿಸಿ, ಮಾಹಿತಿಯನ್ನು ಪಡೆದುಕೊಂಡರು. ಇಷ್ಟು ನೀರು ಎಲ್ಲಿಂದ ಹರಿದುಬಂತು ಎನ್ನುವುದನ್ನು ಹೊರಗೆ ವೀಕ್ಷಣೆ ಮಾಡಿದರು.
ನಂತರ ಮಾತನಾಡಿದ ಸಿಎಂ ಬೊಮ್ಮಾಯಿ, ಬಾರೀ ಮಳೆಗೆ ಬೀಮೇಶ್ವರ ನದಿ ಉಕ್ಕಿ ಹರಿದು ಪಂಪ್ ಹೌಸ್ ಗೆ ನೀರು ನುಗ್ಗಿದೆ. ಇದರಿಂದ ಬಹಳಷ್ಟು ಹಾನಿಯಾಗಿದೆ. 75 ವರ್ಷ ಬಳಿಕ ಈ ನದಿಯಲ್ಲಿ ಇಷ್ಟು ನೀರು ಬಂದಿದೆ. ಎರಡು ಪಂಪ್ ಹೌಸ್ ಗಳಿಗೆ ನೀರು ನುಗ್ಗಿದೆ. 1,450 ಎಂಎಲ್ ಡಿ ಸಾಮರ್ಥ್ಯದ ಪಂಪ್ ಹೌಸ್ ಗಳಿದ್ದು, 550 ಎಂಎಲ್ ಡಿ ಸಾಮರ್ಥ್ಯದ ಪಂಪ್ ಹೌಸ್ ಗಳು ಈಗಾಗಲೇ ಕೆಲಸ ಮಾಡುತ್ತಿವೆ. 550 ಮತ್ತು 350 ಎಂಲ್ ಡಿ ಸಾಮರ್ಥ್ಯದ ಪಂಪ್ ಹೌಸ್ ಕೆಲಸ ಮಾಡುತ್ತಿದ್ದು, 550 ಎಂಲ್ ಡಿ ನೀರು ಬೆಂಗಳೂರಿಗೆ ನಿರಂತರವಾಗಿ ಸರಬರಾಜು ಆಗುತ್ತಿದೆ.
ನೀರು ತುಂಬಿದ ಎರಡು ಪಂಪ್ ಹೌಸ್ ಗಳನ್ನು ಸರಿಪಡಿಸುವ ಕೆಲಸ ಈಗಾಗಲೇ ಮಾಡಲಾಗುತ್ತಿದೆ. ಸ್ಟೇಜ್ 4 ಪಂಪ್ ಹೌಸ್ ನಲ್ಲಿ 12 ಅಡಿ ನೀರು ಹೊರಗೆ ತೆಗೆಯಲಾಗಿದೆ, ಇನ್ನೂ 11 ಅಡಿ ನೀರು ತೆಗೆಯಬೇಕು. ಮಧ್ಯರಾತ್ರಿ ಅಥವಾ ನಾಳೆ ಬೆಳಗ್ಗೆ ಒಳಗೆ ಈ ಕಾರ್ಯ ಮುಗಿಯಲಿದೆ. ಯಂತ್ರೋಪಕರಣಗಳನ್ನು ಡ್ರೈ ಮಾಡಿ, ಎಲ್ಲವನ್ನೂ ಪರಿಶೀಲಿಸಿ 350 ಎಂಎಲ್ ಡಿ ನೀರನ್ನು ಸರಬರಾಜು ಮಾಡಲಾಗುತ್ತದೆ. ಇದರಿಂದ ಮತ್ತಷ್ಟು ನೀರನ್ನು ಬೆಂಗಳೂರಿಗೆ ಒದಗಿಸಲು ಸಾಧ್ಯವಾಗುತ್ತದೆ. ಇದಕ್ಕೆ ಶಾಶ್ವತ ಪರಿಹಾರ ಒದಗಿಸಲು ಪಂಪ್ ಹೌಸ್ ಸುತ್ತ ಕಾಂಕ್ರೀಟ್ ತಡೆಗೋಡೆ ಮಾಡಲಾಗುತ್ತದೆ ಎಂದರು.
ನವೆಂಬರ್, ಜನವರಿಯಿಂದ ಪ್ರಾರಂಭವಾದ ಮಳೆ ನಿರಂತರವಾಗಿ ಸುರಿಯುತ್ತಿದೆ ಎಂದ ಸಿಎಂ ಬೊಮ್ಮಾಯಿ, ರಾಜ್ಯದ ಎಲ್ಲ ಕೆರೆ, ಕಟ್ಟೆಗಳು ಭರ್ತಿಯಾಗಿವೆ. ಮಳೆನೀರು, ಕೆರೆನೀರು ಒಟ್ಟಾಗಿ ಹರಿದು ಪ್ರವಾಹದ ಪರಿಸ್ಥಿತಿ ಎದುರಾಗಿದೆ. ಇದರ ಬಗ್ಗೆ ಜಾಗ್ರತೆ ವಹಿಸಲು ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಬೆಂಗಳೂರಿಗೆ ನೀರಿನ ಕೊರತೆಯಾಗದಂತೆ ಕ್ರಮ ವಹಿಸಲಾಗುತ್ತದೆ. ಬೋರ್‌ವೆಲ್‌ಗಳಿಂದ ನೀರು ಬರುವ ರೀತಿ ವ್ಯವಸ್ಥೆ ಮಾಡಲಾಗಿದೆ. 8 ಸಾವಿರ ಬೋರ್‌ವೆಲ್‌ಗಳು ಜಲಮಂಡಳಿ ಅಡಿಯಲ್ಲಿದ್ದು, 3 ಸಾವಿರಕ್ಕೂ ಹೆಚ್ಚು ಬೋರ್‌ವೆಲ್‌ಗಳು ಬಿಬಿಎಂಪಿ ವ್ಯಾಪ್ತಿಯಲ್ಲಿವೆ. ಅವೆಲ್ಲವನ್ನೂ ಸರಿಪಡಿಸಿ ನೀರು ಸರಬರಾಜು ವ್ಯವಸ್ಥೆ ಮಾಡುತ್ತೇವೆ. ಬೋರ್‌ವೆಲ್ ಇಲ್ಲದ ಕಡೆಯಲ್ಲಿ ಟ್ಯಾಂಕರ್ ವ್ಯವಸ್ಥೆ ಮಾಡಲಾಗುವುದು ಎಂದರು.
ಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿ ಕುರಿತು ಪ್ರತಿಕ್ರಿಯಿಸಿ, ಒತ್ತುವರಿ ತೆರವು ಆರಂಭಿಸಲಾಗಿದೆ. ದೊಡ್ಡ ಟ್ಯಾಂಕ್ ಕಾಲುವೆಗಳು ಒತ್ತುವರಿಯಾಗಿವೆ. ದೊಡ್ಡ ಮಳೆಯಾಗದ ಕಾರಣ ಇಷ್ಟು ವರ್ಷ ಗೊತ್ತಾಗಿರಲಿಲ್ಲ. ಬಹಳಷ್ಟು ಕಡೆ ಕೆರೆ, ಹಳ್ಳ ಒತ್ತುವರಿಯಾಗಿ ಪ್ರವಾಹ ಆಗುತ್ತಿದೆ. ಮುಂದಿನ ದಿನಗಳಲ್ಲಿ ಒತ್ತುವರಿ ವಿರುದ್ಧ ಕ್ರಮಗಳನ್ನು ಜರುಗಿಸುತ್ತೇವೆ. ಈಗ ಮೊದಲಿಗೆ ಪಂಪ್‌ಹೌಸ್‌ಗಳನ್ನು ಸರಿಪಡಿಸಿ ಬೆಂಗಳೂರಿಗೆ ನೀರು ಒದಗಿಸಬೇಕಿದೆ ಎಂದರು.
ರಾಜ್ಯಕ್ಕೆ ಕೇಂದ್ರದ ತಂಡ ಭೇಟಿ
ರಾಜ್ಯದಲ್ಲಿ ಸತತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಧ್ಯಯನಕ್ಕೆ ಕೇಂದ್ರ ಸರ್ಕಾರ ಮೂವರು ಅಧಿಕಾರಿಗಳ ನೇತೃತ್ವದಲ್ಲಿ ಮೂರು ತಂಡವನ್ನು ಕಳಿಸಿಕೊಟ್ಟಿದೆ. ಐಎಎಸ್ ಅಧಿಕಾರಿ ಅಭಿಷೇಕ್ ಕುಮಾರ್ ನೇತೃತ್ವದಲ್ಲಿ ಒಂದು ತಂಡವಿದ್ದು, ಚಿತ್ರದುರ್ಗ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳ ಪ್ರವಾಸ ಮಾಡಲಿದೆ.
ಆಶೋಕ್ ಕುಮಾರ್ ನೇತೃತ್ವದ ಮತ್ತೊಂದು ತಂಡ ಧಾರವಾಡ, ಗದಗ, ಹಾವೇರಿ ಪ್ರವಾಸ ಮಾಡಲಿದೆ. ಕೆ. ಮನೋಹರನ್ ನೇತೃತ್ವದ ಮೂರನೇ ತಂಡ ಕಲ್ಬುರ್ಗಿ, ಯಾದಗಿರಿ ಜಿಲ್ಲೆಗಳಲ್ಲಿ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಲಿದೆ. ಸೆಪ್ಟೆಂಬರ್ 7 ರಿಂದ 9ರವರೆಗೆ ತಪಾಸಣೆಯನ್ನು ಕೈಗೊಳ್ಳಲಾಗುತ್ತದೆ. ಬಳಿಕ ಎಲ್ಲ ತಂಡಗಳೂ ಕೇಂದ್ರಕ್ಕೆ ವರದಿ ನೀಡಲಿದ್ದು, ಪರಿಹಾರ ನೀಡುವ ಕುರಿತು ಕೇಂದ್ರ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ.
ಇದನ್ನೂ ಓದಿ | Heavy Rain | ಭಾರಿ ಮಳೆಗೆ ನಾಗಮಂಗಲದಲ್ಲಿ 20ಕ್ಕೂ ಕೆಎಸ್‌ಆರ್‌ಟಿಸಿ ಬಸ್ ಮುಳುಗಡೆ