ಬೆಂಗಳೂರು: ಬೆಳ್ಳಂದೂರಿನ ಇಕೋಸ್ಪೇಸ್ ಬ್ಯುಸಿನೆಸ್ ಪಾರ್ಕ್ ಬಳಿ ನಿಂತಿದ್ದ ಭಾರಿ ಪ್ರಮಾಣದ ನೀರು ಇಳಿದಿದ್ದು, ಸ್ಥಳೀಯ ನಿವಾಸಿಗಳು ಹಾಗೂ ಓಡಾಡುವವರು ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ. ಸ್ಥಳೀಯರು ರಸ್ತೆಯಲ್ಲೇ ನಿಂತಿದ್ದ ನೀರಿನಲ್ಲಿ ಮೀನು ಹಿಡಿಯುತ್ತಿದ್ದಾರೆ!
ಭಾರಿ ಮಳೆಗೆ ಬೆಳ್ಳಂದೂರು ಕೆರೆಯ ನೀರು ರಸ್ತೆಗೆ ನುಗ್ಗಿತ್ತು. ಈಗ ನೀರು ಇಳಿಯುತ್ತಿರುವಂತೆ, ನಿಂತ ಸ್ವಲ್ಪ ನೀರಿನಲ್ಲಿ ಮೀನುಗಳು ಪತ್ತೆಯಾಗುತ್ತಿವೆ. ಸ್ಥಳೀಯರು ಇವುಗಳನ್ನು ಹಿಡಿಯಲು ಮುಗಿಬಿದಿದ್ದಾರೆ.
ರಸ್ತೆಯಲ್ಲಿ ನೀರು ತಗ್ಗಿದ್ದರೂ, ಹೊಂಡ ಬಿದ್ದಿರುವ ರಸ್ತೆಗಳು ಮಾತ್ರ ವಾಹನ ಸವಾರರು ಜೀವಭಯದಲ್ಲೇ ಸಂಚರಿಸುವಂತೆ ಮಾಡಿದೆ. ಇಕೋಸ್ಪೇಸ್‌ನಲ್ಲಿ ಮಳೆ ನೀರು ತಗ್ಗಿದೆ. ಎಂದಿನಂತೆ ವಾಹನ ಸವಾರರು ಸಂಚಾರ ಆರಂಭಿಸಿದ್ದಾರೆ. ಆದರೆ ಸ್ವಲ್ಪ ಪ್ರಮಾಣದ ನೀರು ಇನ್ನೂ ರಸ್ತೆಯಲ್ಲಿ ನಿಂತಿದೆ. ಗುಂಡಿ ಬಿದ್ದಿರುವ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರು ಜೀವಭಯದಲ್ಲೇ ಸಂಚಾರ ಮಾಡುತ್ತಿದ್ದಾರೆ. ಇನ್ನೂ ಕೆಲವು ಕಡೆಗಳಿಂದ ನೀರ ರಸ್ತೆಗೇ ಹರಿದುಬರುತ್ತಿದೆ.
ಕಳೆದ ಒಂದು ವಾರ ಭಾರಿ ಮಳೆಯಿಂದ ಉಂಟಾದ ಕೃತಕ ನೆರೆ ಬೆಳ್ಳಂದೂರು ಇಕೋಸ್ಪೇಸ್ ಆವರಣವನ್ನು ಕೆರೆಯಾಗಿ ಮಾರ್ಪಡಿಸಿತ್ತು. ಇಕೋಸ್ಪೇಸ್ ಸುತ್ತಮುತ್ತ ಮಳೆ ನೀರಿನಿಂದ ಭಾರಿ ಹಾನಿಯುಂಟಾಗಿತ್ತು. ಅಂಗಡಿ, ಹೋಟೆಲ್, ಪುಟ್‌ಪಾತ್ ಹಾಗೂ ಮನೆಗಳು ಮಳೆ ನೀರಿನಿಂದ ಡ್ಯಾಮೇಜ್ ಆಗಿದ್ದವು. ರಸ್ತೆಗಳು ಹಾಗೂ ಪುಟ್‌ಪಾತ್‌ಗಳು ಕಿತ್ತುಹೋಗಿದ್ದು, ಸಂಚಾರಕ್ಕೆ ಜನ ಸಂಕಷ್ಟ ಪಡುತ್ತಿದ್ದಾರೆ. ಮತ್ತೆ ಮಳೆ ಮುನ್ಸೂಚನೆ ಹಿನ್ನೆಲೆಯಲ್ಲಿ ಇಕೋಸ್ಪೇಸ್ ಸುತ್ತಲಿನ ಜನತೆ ಭಯದಲ್ಲೇ ಬದುಕುತ್ತಿದ್ದಾರೆ.
ಸಿದ್ದರಾಮಯ್ಯ ಇಂದು ಭೇಟಿ
ಮಾಜಿ ಸಿಎಂ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಇಂದು ಬೆಳಗ್ಗೆ 10.30ಕ್ಕೆ ಇಕೋಸ್ಪೇಸ್ ಸ್ಥಳಕ್ಕೆ ಭೇಟಿ ನೀಡಿ ಮಳೆಯಿಂದ ಆಗಿರುವ ಹಾನಿಯನ್ನು ಪರಿಶೀಲಿಸಲಿದ್ದಾರೆ. ಅವರ ಜತೆ ಇತರ ಕಾಂಗ್ರೆಸ್ ನಾಯಕರು ಇರಲಿದ್ದಾರೆ.
ಇದನ್ನೂ ಓದಿ | Bangalore Rain | ಬಿಗಡಾಯಿಸಿದ ಬೆಳ್ಳಂದೂರು, ಮುಳುಗಿದ ರಸ್ತೆಗಳು, ಶಾಲೆಗಳಿಗೆ ರಜೆ