ಬೆಂಗಳೂರು: ಮಾರ್ಚ್ 1ರಂದು ಬಾಂಬ್ ಸ್ಫೋಟ (Blast in Bengaluru) ಸಂಭವಿಸಿ ಜಗತ್ತಿನಾದ್ಯಂತ ಸುದ್ದಿಯಾದ ಬೆಂಗಳೂರಿನ ವೈಟ್ ಫೀಲ್ಡ್ ಸಮೀಪದ ಬ್ರೂಕ್ ಫೀಲ್ಡ್‌ನಲ್ಲಿರುವ ಪ್ರತಿಷ್ಠಿತ, ಜನಪ್ರಿಯ ಫುಡ್ ಜಾಯಿಂಟ್ ರಾಮೇಶ್ವರಂ ಕೆಫೆ (Rameshwaram Cafe) ಮಾರ್ಚ್ 9ರ ಶನಿವಾರ ಬೆಳಗ್ಗೆ 6.30ಕ್ಕೆ ಪುನರಾರಂಭಗೊಳ್ಳಲಿದೆ (Rameshwaram Cafe Reopen) ಬೆಳಗ್ಗೆ 6.30ಕ್ಕೆ ರಾಷ್ಟ್ರಗೀತೆ (National Anthem) ಹಾಡುವ ಮೂಲಕ ಕೆಫೆ ಮರು ಚಾಲನೆ ಪಡೆಯಲಿದೆ.
ರಾಷ್ಟ್ರದ್ರೋಹಿಗಳ ಸಂಚಿನಿಂದ ಬಾಂಬ್ ಸ್ಫೋಟ ನಡೆದು ಆತಂಕ ಮೂಡಿಸಿದ್ದ ಘಟನೆಯ ವಿಚಾರದಲ್ಲಿ ಜನರ ಆತಂಕ ನಿವಾರಿಸಲು ಮತ್ತು ರಾಷ್ಟ್ರಭಕ್ತಿ ಇದ್ದರೆ ಎಲ್ಲ ಭಯೋತ್ಪಾದಕ ಕೃತ್ಯಗಳನ್ನು ಮೆಟ್ಟಿ ನಿಲ್ಲಬಹುದು ಎಂಬ ಸಂದೇಶ ನೀಡುವ ಉದ್ದೇಶದಿಂದ ರಾಷ್ಟ್ರಗೀತೆ ಹಾಡುವ ಕಾರ್ಯಕ್ರಮ ಆಯೋಜಿಸಲಾಗಿದೆ.
ವಾರದ ಬಳಿಕ ಮತ್ತೆ ಕೆಫೆ ಆರಂಭಗೊಳ್ಳುತ್ತಿದೆ. ರಾಷ್ಟ್ರಗೀತೆ ಹಾಡುವ ಮೂಲಕ ನಾಳೆ ಕೆಫೆಯನ್ನು ಮತ್ತೆ ಆರಂಭಿಸುತ್ತೇವೆ ಎಂದು ಕೆಫೆಯ ಮಾಲೀಕರಾದ ರಾಘವೇಂದ್ರ ರಾವ್ (Raghavendra Rao) ಮಾಹಿತಿ ಹಂಚಿಕೊಂಡರು.
ಇದನ್ನೂ ಓದಿ : Blast in Bengaluru: ರಾಮೇಶ್ವರಂ ಕೆಫೆ ಸ್ಫೋಟದಲ್ಲಿ ಬಳ್ಳಾರಿಯ ಬಂಧಿತ ಉಗ್ರ ಮಿನಾಝ್ ಕೈವಾಡ? ತೀವ್ರ ವಿಚಾರಣೆ
ಶುಕ್ರವಾರ ದಿನವಿಡೀ ಹೋಮ, ಹವನ; ಸಿಎಂ, ಡಿಸಿಎಂ ಕೂಡಾ ಭೇಟಿ
ರಾಮೇಶ್ವರಂ ಕೆಫೆಯ ಮಾಲೀಕರಾದ ರಾಘವೇಂದ್ರ ರಾವ್ ಮತ್ತು ದಿವ್ಯ ರಾಘವೇಂದ್ರ ರಾವ್ ಅವರು ಶಿವರಾತ್ರಿಯ ದಿನವೇ ಮತ್ತೆ ಹೋಟೆಲ್‌ಗೆ ಚಾಲನೆ ನೀಡುವುದಾಗಿ ಈ ಹಿಂದೆ ಪ್ರಕಟಿಸಿದ್ದರು. ಆದರೆ, ಬಾಂಬ್ ಸ್ಫೋಟದ ತನಿಖೆ ನಡೆಸುತ್ತಿರುವ ಎನ್‌ಐಎ ಮತ್ತು ಸಿಸಿಬಿ ಪೊಲೀಸರು ಸ್ಥಳ ತಪಾಸಣೆ ಮತ್ತು ಇತರ ಪ್ರಕ್ರಿಯೆಗಳು ಪೂರ್ಣಗೊಂಡಿಲ್ಲ ಎಂಬ ಕಾರಣ ನೀಡಿ ಅನುಮತಿ ಕೊಟ್ಟಿರಲಿಲ್ಲ.
ಅದಾದ ಬಳಿಕ ಪೊಲೀಸರು ಮತ್ತು ಎನ್‌ಐಎ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಬೇಕಾದ ಎಲ್ಲಾ ಮಾಹಿತಿಗಳನ್ನು ಪಡೆದ ಬಳಿಕ ಹೋಟೆಲ್ ಮರು ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಹೀಗಾಗಿ ರಾಘವೇಂದ್ರ ರಾವ್ ಕುಟುಂಬ ಎಲ್ಲ ಸಿದ್ಧತೆಗಳನ್ನು ಆರಂಭಿಸಿದೆ.
ಮಾರ್ಚ್ 9ರಿಂದ ಹೋಟೆಲ್ ಮರು ಆರಂಭದ ಮಾಹಿತಿಯನ್ನು ಇನ್ಸ್ಟಾಗ್ರಾಂ ಮೂಲಕ ಹಂಚಿಕೊಂಡ ರಾಮೇಶ್ವರಂ ಕೆಫೆ, ಹೋಟೆಲ್‌ನ ಒಳಗೆ ಸ್ವಚ್ಛತಾ ಕಾರ್ಯಗಳನ್ನು ನಡೆಸುವ ದೃಶ್ಯಗಳನ್ನು ಅಪ್ಲೋಡ್ ಮಾಡಿದೆ.
ಶಿವರಾತ್ರಿಯ ದಿನ ಇಡೀ ದಿನ ಹೋಮ ಹವನ
ಮಾರ್ಚ್ 9ರಂದು ಹೋಟೆಲ್ ಆರಂಭಕ್ಕೆ ದಿನ ನಿಗದಿ ಮಾಡಿದ ರಾಮೇಶ್ವರಂ ಕೆಫೆ ಮಾಲೀಕರು ಶುಕ್ರವಾರ ಇಡೀ ದಿನ ಪೂಜೆ. ಹೋಮ ಹವನಗಳನ್ನು ಆಯೋಜಿಸಿದ್ದಾರೆ. ರಾಮೇಶ್ವರಂ ಕೆಫೆಯಲ್ಲಿ ಶುಕ್ರವಾರ ಪೂಜಾ ಕಾರ್ಯಗಳು ನಡೆಯುತ್ತಿವೆ. ಹೀಗಾಗಿ ಕೆಫೆಯನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿದೆ.
ಶಿವರಾತ್ರಿ ಪ್ರಯುಕ್ತ ರುದ್ರ ಹೋಮ ನವಗ್ರಹ ಹೋಮ ಮೃತ್ಯುಂಜಯ ಹೋಮ ವಾಸ್ತು ಹೋಮ ಲಕ್ಷ್ಮಿ ಪೂಜೆ ಗಣೇಶ ಪೂಜೆ ಹಮ್ಮಿಕೊಂಡಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಜಿ ಪರಮೇಶ್ವರ್ ಸೇರಿದಂತೆ ಆರ್ ಅಶೋಕ್ ಬಿ ವೈ ವಿಜಯೇಂದ್ರ ಪಿ ಸಿ ಮೋಹನ್ ಮಂಜುಳಾ ಅರವಿಂದ್ ಎಲ್ಲಾ ಗಣ್ಯರು ಆಗಮಿಸಲಿದ್ದಾರೆ ಎಂದು ಹೋಟೆಲ್ ಮಾಲೀಕರಾದ ರಾಘವೇಂದ್ರ ರಾವ್ ತಿಳಿಸಿದರು.
ಶನಿವಾರ ಬೆಳಗ್ಗೆ 6:30ಕ್ಕೆ ರಾಷ್ಟ್ರಗೀತೆ ಹಾಡಿ ಕೆಫೆ ಪ್ರಾರಂಭ ಮಾಡುತ್ತೇವೆ ಎಂದು ರಾಘವೇಂದ್ರ ರಾವ್ ತಿಳಿಸಿದರು.
ಹೆಚ್ಚುವರಿ ಭದ್ರತೆ, ಮೆಟಲ್ ಡಿಟೆಕ್ಟರ್ ಅಳವಡಿಕೆ
ಬಾಂಬ್ ಸ್ಫೋಟದ ಬಳಿಕ ಪೊಲೀಸರು ಕೆಲವೊಂದು ಹೆಚ್ಚುವರಿ ಸುರಕ್ಷಾ ವ್ಯವಸ್ಥೆಗಳನ್ನು ಸೂಚಿಸಿದ್ದಾರೆ. ಅದರಂತೆ ಕೆಫೆಯ ಪ್ರವೇಶ ದ್ವಾರದಲ್ಲಿ ಎರಡು ಮೆಟಲ್ ಡಿಟೆಕ್ಟರ್ ಕೂಡ ಅಳವಡಿಕೆ ಮಾಡಲಾಗಿದೆ ಎಂದು ಅವರು ಹೇಳಿದರು.
ಏನಾಗಿತ್ತು ರಾಮೇಶ್ವರಂ ಕೆಫೆಯಲ್ಲಿ?
ಕಳೆದ ಮಾರ್ಚ್ 1ರಂದು ಮಧ್ಯಾಹ್ನ 12.55ಕ್ಕೆ ರಾಮೇಶ್ವರಂ ಕೆಫೆಯಲ್ಲಿ ಹತ್ತು ಸೆಕೆಂಡ್‌ಗಳ ಅಂತರದಲ್ಲಿ ಎರಡು ಬಾಂಬ್‌ಗಳು ಸ್ಫೋಟಿಸಿದ್ದವು. ಘಟನೆಯಲ್ಲಿ ಒಟ್ಟು 10 ಮಂದಿ ಗಾಯಗೊಂಡಿದ್ದು ಎಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ.
ಬಿಎಂಟಿಸಿಯಲ್ಲಿ ಬಂದಿದ್ದ ಟೋಪಿ ಧರಿಸಿದ್ದ, ಬ್ಯಾಗ್ ಹೊಂದಿದ್ದ ವ್ಯಕ್ತಿಯೊಬ್ಬ 11.34ಕ್ಕೆ ಈ ಹೋಟೆಲ್ ಪ್ರವೇಶ ಮಾಡಿ ರವೆ ಇಡ್ಲಿ ಆರ್ಡರ್ ಮಾಡಿ 11.43ಕ್ಕೆ ಹೊರಗೆ ಹೋಗಿದ್ದ. ಹೋಗುವ ಮುನ್ನ ಕಸದ ಡಬ್ಬಿ ಇರುವ ಜಾಗದಲ್ಲಿ ಬ್ಯಾಗ್ ಇಟ್ಟು ಹೋಗಿದ್ದ. ಅದು 12.55ಕ್ಕೆ ಸಿಡಿದಿತ್ತು.
ಬಾಂಬಿಟ್ಟು ಹೋದ ದುಷ್ಕರ್ಮಿಯ ಸಿಸಿಟಿವಿ ಫೂಟೇಜ್‌ಗಳು ಲಭ್ಯವಾಗಿದ್ದರೂ ಆತನನ್ನು ಇನ್ನೂ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಆತ ಬಸ್‌ನಲ್ಲೇ ಪ್ರಯಾಣಿಸಿ ತುಮಕೂರು, ಬಳ್ಳಾರಿ ಮೂಲಕ ಸಾಗಿದ್ದಾನೆ ಎಂಬ ಮಾಹಿತಿ ಇದೆ. ಆತನ ಸುಳಿವಿಗಾಗಿ ಎನ್‌ಐಎ ಹತ್ತು ಲಕ್ಷ ರೂ. ಬಹುಮಾನ ಘೋಷಿಸಿದೆ. ಆತನ ಭಾವಚಿತ್ರವನ್ನೂ ಪ್ರಕಟಿಸಿದೆ.