Site icon Vistara News

Republic Day : ಹ್ಯಾರಿಸ್‌ ಕಾರ್ಯಕ್ರಮದಲ್ಲಿ ಹಾರದ ತ್ರಿವರ್ಣ ಧ್ವಜ: ಸಿಎಂ ಸಮ್ಮುಖದಲ್ಲೇ ಎರಡೆರಡು ಎಡವಟ್ಟು

republic day tricolour the tricolour flag was not unfurled during the program

ಬೆಂಗಳೂರು: ಸರ್ಕಾರಿ ಕಚೇರಿಗಳಲ್ಲಿ, ಶಾಲೆಗಳಲ್ಲಿ ತ್ರಿವರ್ಣ ಧ್ವ್ವಜ ಹಾರಿಸುವಾಗ ಎಡವಟ್ಟು ಆಗುವುದು ಸಾಮಾನ್ಯ. ಆದರೆ ಸ್ವತಃ ರಾಜ್ಯದ ಮುಖ್ಯಮಂತ್ರಿ ಭಾಗವಹಿಸಿದ್ದ ಗಣರೋಜ್ಯೋತ್ಸವ (Republic Day) ಕಾರ್ಯಕ್ರಮದಲ್ಲೇ ತ್ರಿವರ್ಣ ಧ್ವಜವೂ ಹಾರದೆ, ರಾಷ್ಟ್ರಗೀತೆಯನ್ನೂ ತಪ್ಪಾಗಿ ಹಾಡಿದ ಘಟನೆ ನಡೆದಿದೆ.

ಗುರುವಾರ ಬೆಳಗ್ಗೆ ಸರ್ಕಾರದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಶಾಂತಿನಗರದ ಕಾಂಗ್ರೆಸ್‌ ಶಾಸಕ ಎನ್‌.ಎ. ಹ್ಯಾರಿಸ್‌ ಅವರು ಬ್ರಿಗೇಡ್‌ ರಸ್ತೆಯ ಒಪೆರಾ ಜಂಕ್ಷನ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭಾಗವಹಿಸಿದರು.

ಅತ್ಯಂತ ಎತ್ತರದ ಸ್ತಂಭದ ಮೇಲೆ 24 X 36 ಅಡಿ ವಿಸ್ತೀರ್ಣದ ಧ್ವಜವನ್ನು ಹಾರಿಸಬೇಕಿತ್ತು. ಸಿಎಂ ಬೊಮ್ಮಾಯಿ ಆಗಮಿಸಿ ಧ್ವಜಾರೋಹಣಕ್ಕೆ ಮುಂದಾದರು. ಎಷ್ಟು ಬಾರಿ ಎಳೆದರೂ,ಮೇಲೆ ಕಟ್ಟಿದ್ದ ತ್ರಿವರ್ಣ ಧ್ವಜ ಬಿಚ್ಚಿಕೊಳ್ಳಲೇ ಇಲ್ಲ. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರೂ ಆಗಮಿಸಿ ಹಗ್ಗವನ್ನು ಎಷ್ಟು ಜಗ್ಗಿದರೂ ಧ್ವಜ ಹಾರಲೇ ಇಲ್ಲ.

ಕೊನೆಗೆ ಧ್ವಜ ಸ್ತಂಭದ ಸಿಬ್ಬಂದಿ ಆಗಮಿಸಿ ಹ್ಯಾಂಡಲ್‌ ಮೂಲಕ, ಧ್ವಜವನ್ನೇ ಕೆಳಕ್ಕೆ ಇಳಿಸಿದರು. ಕೆಳಭಾಗದಲ್ಲಿಯೇ ಧ್ವಜವನ್ನು ಬಿಚ್ಚಿ ನಂತರ ಮೇಲೇರಿಸಲಾಯಿತು. ಇದಿಷ್ಟೂ ಕಸರತ್ತಿಗೆ ಸುಮಾರು 15 ನಿಮಿಷ ವ್ಯಯವಾಯಿತು. ಎಡವಟ್ಟು ಇಲ್ಲಿಗೇ ಮುಗಿಯಲಿಲ್ಲ.

ಸಾಕಷ್ಟು ಹೊತ್ತಿನ ಕಸರತ್ತಿನ ನಂತರ ಹಾರಿದ ಧ್ವಜ

ಧ್ವಜಾರೋಹಣದ ನಂತರ ರಾಷ್ಟ್ರಗೀತೆ ಹಾಡಲು ಆರಂಭಿಸಲಾಯಿತು. ಆಯೋಜಕರು ಇದಕ್ಕೂ ಸೂಕ್ತ ತಯಾರಿ ಮಾಡಿಕೊಂಡಿರಲಿಲ್ಲ. ರಾಷ್ಟ್ರಗೀತೆ ಆರಂಭವಾಗಿ ಕೆಲ ಹೊತ್ತಿನಲ್ಲೇ ಸ್ಥಗಿತಗೊಂಡಿತು. ಮತ್ತೆ ಪ್ರಾರಂಭದಿಂದಲೂ ಪೂರ್ಣ ರಾಷ್ಟ್ರಗೀತೆಯನ್ನು ಹಾಡಲಾಯಿತು.

ನಂತರ ಮಾತನಾಡಿದ ಎನ್‌.ಎ. ಹ್ಯಾರಿಸ್‌, ಈ ಭಾಗದಲ್ಲಿ 2 ಲಕ್ಷ ವಿದ್ಯಾರ್ಥಿಗಳು ಓಡಾಡುತ್ತಾರೆ. ದೇಶಪ್ರೇಮವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ನಿಟ್ಟಿನಲ್ಲಿ ಇಲ್ಲಿ ಧ್ವಜಾರೋಹಣ ಮಾಡಲಾಗಿದೆ. ಕ್ಷೇತ್ರದಲ್ಲಿ ಇನ್ನೂ ಕೆಲವು ಕಡೆ ಧ್ವಜಸ್ತಂಭ ನಿರ್ಮಾಣ ಮಾಡಲಾಗುವುದು ಎಂದರು.

ಇದನ್ನೂ ಓದಿ : Republic Day Parade: ದೆಹಲಿ ಕರ್ತವ್ಯ ಪಥದಲ್ಲಿ ವೈಭವದ ಪಥ ಸಂಚಲನ; ಇಲ್ಲಿವೆ ಫೋಟೋಗಳು

ಧ್ವಜಾರೋಹಣ ವೇಳೆ ಎಡವಟ್ಟಿನ ಕುರಿತು ಪ್ರತಿಕ್ರಿಯಿಸಿ, ತಾಂತ್ರಿಕ ದೋಷದಿಂದ ಹಾಗೆ ಆಗಿದೆ. ಇದು ಸಂಪೂರ್ಣವಾಗಿ ಯಂತ್ರದ ಮೂಲಕ ಧ್ವಜಾರೋಹಣವಾಗುತ್ತದೆ. ಎಲ್ಲವೂ ಕೇಬಲ್ ಮೂಲಕ ಮಾಡಲಾಗುತ್ತದೆ. ವರ್ಷಪೂರ್ತಿ ಹಾರುತ್ತಲೇ ಇರುತ್ತದೆ. ಇಂದು ಹಗ್ಗ ಕಟ್ಟಿ ಹಾರಿಸಬೇಕಾದಾಗ ಸ್ವಲ್ಪ ಸಮಸ್ಯೆ ಆಗಿದೆ. ಯಾವುದೇ ತಪ್ಪು ನಡೆದಿಲ್ಲ, ನಿಯಮಗಳ ಪ್ರಕಾರವೇ ಧ್ವಜಾರೋಹಣ ನೆರವೇರಸಿದ್ದೇವೆ ಎಂದರು.

Exit mobile version