ಬೆಂಗಳೂರು: ಚಾಮರಾಜಪೇಟೆ ಮೈದಾನ ಯಾರಿಗೆ ಸೇರಿದ್ದು ಎಂಬ ಕುರಿತು ಕಳೆದ ಅನೇಕ ತಿಂಗಳುಗಳಿಂದ ನಡೆಯುತ್ತಿದ್ದ ವಿವಾದ ಇದೀಗ ಮುಕ್ತಾಯದ ಹಂತಕ್ಕೆ ಬಂದಿದ್ದು, ಈ ಕುರಿತು ಕಂದಾಯ ಸಚಿವ ಆರ್. ಅಶೋಕ್ ಮಾತನಾಡಿದ್ದಾರೆ. ಚಾಮರಾಜಪೇಟೆ ಮೈದಾನ ಕಂದಾಯ ಇಲಾಖೆಗೆ ಸೇರಿದ್ದು ಎಂದು ಬಿಬಿಎಂಪಿ ಆದೇಶ ಹೊರಡಿಸಿದ್ದು, ಅದರಂತೆ ಮುಂದೆ ಯಾವುದೇ ಕಾರ್ಯಕ್ರಮಕ್ಕೆ ಅನುಮತಿ ಬೇಕಿದ್ದರೂ ಜಿಲ್ಲಾಧಿಕಾರಿ ಅನುಮತಿ ಪಡೆಯಬೇಕು ಎಂದು ತಿಳಿಸಿದ್ದಾರೆ.
ಈ ಹಿಂದೆ ವಿವಾದ ಹೆಚ್ಚಳವಾದಾಗ, ಬಿಬಿಎಂಪಿ ವಲಯ ಆಯುಕ್ತರ ಅನುಮತಿ ಪಡೆಯಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತರು ತಿಳಿಸಿದ್ದರು. ಇದೀಗ ಕಂದಾಯ ಸಚಿವ ಆರ್. ಅಶೊಕ್ ಅವರು ತಿಳಿಸಿದಂತೆ ಅನುಮತಿಯನ್ನು ಜಿಲ್ಲಾಧಿಕಾರಿಯಿಂದ ಪಡೆಯಬೇಕು.
ಮೈದಾನದ ಮಾಲೀಕತ್ವದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅಶೋಕ್, ಚಾಮರಾಜಪೇಟೆ ಮೈದಾನಕ್ಕೆ ನೀವು ಏನೇನೊ ಹೆಸರು ಕೊಟ್ಟಿದ್ದೀರ. ಅಲ್ಲಿ ಕುರಿ,ಎಮ್ಮೆ ಎಲ್ಲವನ್ನೂ ಮಾರಾಟ ಮಾಡುತ್ತಾರೆ. ಮೈದಾನ ತಮ್ಮದೆಂದು ಹೇಳಲು ದಾಖಲೆ ಕೊಡಿ ಎಂದು ವಕ್ಫ್ ಬೋರ್ಡ್‌ಗೆ ಬಿಬಿಎಂಪಿ ಕಮಿಷನರ್ ಹೇಳಿದ್ದರು. ಮೈದಾನ ತಮ್ಮದು ಎಂದು ಸುಪ್ರೀಂಕೋರ್ಟ್‌ನಲ್ಲಿ ಹೇಳುವ ವಕ್ಫ್ ಬೋರ್ಡ್, ಈ ಕುರಿತು ಯಾವುದೇ ದಾಖಲೆಯನ್ನು ಬಿಬಿಎಂಪಿಗೆ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಮೈದಾನವು ಕಂದಾಯ ಇಲಾಖೆಗೆ ಸೇರಿದ್ದು ಎಂದು ಆದೇಶ ಹೊರಡಿಸಲಾಗಿದೆ.
ಇಂದಿನ ಮಾಹಿತಿ ಪ್ರಕಾರ ಮೈದಾನ ಕಂದಾಯ ಇಲಾಖೆಗೆ ಸೇರಿದ್ದು. ಆ ಮೈದಾನದಲ್ಲಿ ಗಣೇಶ ಹಬ್ಬ ಮಾಡಬೇಕೇ, ನಮಾಜ್ ಮಾಡಬೇಕೇ, ಪ್ರೇಯರ್ ಮಾಡಬೇಕೇ ಎಂದು ಕಂದಾಯ ಇಲಾಖೆ ನಿರ್ಧಾರ ಮಾಡುತ್ತದೆ. ಕಾನೂನು ಪ್ರಕಾರ ಸೂಕ್ತ ಎನ್ನಿಸಿದ್ದಕ್ಕೆ ಕಾರ್ಯಕ್ರಮಕ್ಕೆ ಅನುಮತಿ ನೀಡಲು ಕಂದಾಯ ಇಲಾಖೆಗೆ ಅವಕಾಶವಿದೆ. ಅದರಂತೆ ಅನುಮತಿ ನೀಡಲಾಗುತ್ತದೆ. ಜಿಲ್ಲಾಧಿಕಾರಿ ಮೂಲಕ ಅನುಮತಿ ಪಡೆಯಬೇಕಾಗುತ್ತದೆ. ಈ ಕುರಿತು ಯಾರೂ ಸಾರ್ವಭೌಮತ್ವ ಮಾಡಲು ಹೋಗಬಾರದು ಎಂದು ಎಚ್ಚರಿಕೆ ನೀಡಿದರು.
ಮೈದಾನ ವಿವಾದದಲ್ಲಿದ್ದದ್ದರಿಂದ ತ್ರಿವರ್ಣ ಧ್ವಜ ಹಾರಿಸಲೂ ಅನುಮತಿ ಪಡೆಯಬೇಕು. ಇನ್ನು ಮುಂದೆ ಸಾಮೂಹಿಕ ನಮಾಜ್ ಮಾಡಲು ಅನುಮತಿ ಪಡೆಯಬೇಕು ಎಂದು ತಿಳಿಸಿದರು.
ಕೋವಿಡ್‌ಗೆ ಮೊದಲಿನಂತೆ ಗಣೇಶೋತ್ಸವ
ಕೋವಿಡ್ ಸಂದರ್ಭದಲ್ಲಿ ವಾರ್ಡ್‌ಗೆ ಒಂದರಂತೆ ಗಣೇಶ ಕಾರ್ಯಕ್ರಮಕ್ಕೆ ಅನುಮತಿ ನೀಡಲಾಗಿತ್ತು. ಆದರೆ ಈ ಬಾರಿ, ಕೋವಿಡ್‌ಗೂ ಮುನ್ನ ಯಾವ ರೀತಿ ಇತ್ತೋ ಆ ರೀತಿ ಅನುಮತಿ ನೀಡಲಾಗುತ್ತದೆ. ಆದಷ್ಟೂ ಎಲ್ಲರೂ ಪರಿಸರ ಸ್ನೇಹಿ ಗಣೇಶ ಪ್ರತಿಷ್ಠಾಪನೆ ಮಾಡಬೇಕು. ಪ್ಲಾಸ್ಟಿಕ್, ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ಪೂಜಿಸಲು ಅವಕಾಶ ನೀಡುವುದಿಲ್ಲ ಎಂದರು.
ಇದನ್ನೂ ಓದಿ | ಚಾಮರಾಜಪೇಟೆ ಮೈದಾನದಲ್ಲಿ ಧ್ವಜ ಹಾರುವುದು ಶತಃಸಿದ್ಧ: ನಾಗರಿಕರ ಒಕ್ಕೂಟ ಘೋಷಣೆ