Site icon Vistara News

Road Accident: ಬೆಂಗಳೂರಿನಲ್ಲಿ ಕಸದ ಲಾರಿಯ ಆರ್ಭಟಕ್ಕೆ ಇಬ್ಬರು ಟೆಕ್ಕಿಗಳು ಬಲಿ

bbmp lorry road accident

ಬೆಂಗಳೂರು: ರಾಜಧಾನಿಯಲ್ಲಿ ಬಿಬಿಎಂಪಿ ಕಸದ ಲಾರಿ (BBMP Lorry) ಮತ್ತೆರಡು ಬಲಿ (Road Accident) ಪಡೆದುಕೊಂಡಿದೆ. ನಗರದ ಹೃದಯ ಭಾಗದ ಕೆಆರ್ ಸರ್ಕಲ್ (KR Circle) ಬಳಿ ಈ ದುರ್ಘಟನೆ ನಡೆದಿದೆ. ಮೃತರಿಬ್ಬರೂ ಟೆಕ್ಕಿಗಳಾಗಿದ್ದು, ಟಿಸಿಎಸ್‌ನಲ್ಲಿ (TCS) ಕೆಲಸ ಮಾಡುತ್ತಿದ್ದರು.

ರಾತ್ರಿ 8.45ರ ಸುಮಾರಿಗೆ ಈ ಭೀಕರ ಅಪಘಾತ ನಡೆದಿದೆ. ಪ್ರಶಾಂತ್ (25), ಬಯನ್ನಗಾರಿ ಶಿಲ್ಪ (27) ಮೃತ ದುರ್ದೈವಿಗಳು. ಪ್ರಶಾಂತ್ ಮೂಲತಃ ಬೆಂಗಳೂರಿನ ಬಾಣಸವಾಡಿಯ ಯುವಕ. ಶಿಲ್ಪ ಆಂಧ್ರ ಮೂಲದವಳು. ಪ್ರಶಾಂತ್ ಮತ್ತು ಯುವತಿ ಇಬ್ಬರು ಸಹೋದ್ಯೋಗಿಗಳಾಗಿದ್ದು, ಐಟಿಪಿಎಲ್ ಟಿಸಿಎಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಪಿಜಿಯಲ್ಲಿ ವಾಸ ಮಾಡುತ್ತಿದ್ದ ಯುವತಿ ಶಿಲ್ಪ, ಊಟಕ್ಕೆ ಎಂದು ಹೊರಗೆ ಬಂದಾಗ ಅಪಘಾತವಾಗಿದೆ.

ಮೆಜೆಸ್ಟಿಕ್‌ದ ಕೆಆರ್ ಸರ್ಕಲ್ ಮಾರ್ಗವಾಗಿ ಇವರಿಬ್ಬರೂ ಬೈಕ್‌ನಲ್ಲಿ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ. ಸಿಐಡಿ ಸಿಗ್ನಲ್ ಮಾರ್ಗದಿಂದ ಕೆಆರ್ ಸರ್ಕಲ್ ಕಡೆ ಕಸದ ಲಾರಿ ತೀವ್ರ ವೇಗದಿಂದ ಬಂದಿದೆ. ತಿರುವು ಇದ್ದ ಮಾರ್ಗದಲ್ಲಿ ಲಾರಿ ವೇಗವಾಗಿ ಬಂದ ಕಾರಣ ಕಸದ ಲಾರಿಯ ವೇಗದಿಂದ ತಪ್ಪಿಸಿಕೊಳ್ಳಲಾಗದೇ ಬೈಕ್‌ ಲಾರಿ ಕೆಳಗೆ ಸಿಲುಕಿಕೊಂಡಿದೆ.

ಮೃತರ ಮೇಲೆ ಹರಿದ ಕಸದ ಲಾರಿ ಸುಮಾರು 10 ಮೀಟರ್‌ನಷ್ಟು ದೂರ ದೇಹಗಳನ್ನು ಎಳೆದೊಯ್ದಿದೆ. ರಸ್ತೆ ಮೇಲೆ ರಕ್ತ ಚೆಲ್ಲಾಡಿದೆ ಎಂದು ಪ್ರತ್ಯಕ್ಷದರ್ಶಿಗಳು ವಿವರಿಸಿದ್ದಾರೆ. ಅಪಘಾತದ ಬಳಿಕ ಕಸದ ಲಾರಿ ಚಾಲಕ ಪರಾರಿಯಾಗಿದ್ದಾನೆ. ಕೂಡಲೇ ಅಪಘಾತಕ್ಕೊಳಗಾದವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಮಾರ್ಗದಲ್ಲಿಯೇ ಇಬ್ಬರೂ ಮೃತ ಪಟ್ಟರು. ಮೃತದೇಹಗಳನ್ನು ಬೌರಿಂಗ್ ಆಸ್ಪತ್ರೆಗೆ ಒಯ್ಯಲಾಗಿದೆ.

ಸ್ಥಳಕ್ಕೆ ಹಲಸೂರು ಗೇಟ್ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಹಲಸೂರು ಗೇಟ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಗನನ್ನು ಕಳೆದುಕೊಂಡು ತಂದೆ ತಾಯಿ ಕಣ್ಣೀರು ಹಾಕಿದ್ದು, ಆಸ್ಪತ್ರೆಯಲ್ಲಿ ಪ್ರಶಾಂತ್ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. “ಬಿಬಿಎಂಪಿ ವಾಹನ ಅಪಘಾತ ಆಗಿದೆ. ನನ್ನ ಮಗ ಹಾಗೂ ಯುವತಿ ಸಾವನ್ನಪ್ಪಿದ್ದಾರೆ. ಮೊದಲು ಪೊಲೀಸರು ಸರಿಯಾಗಿ ರೆಸ್ಪಾನ್ಸ್ ಕೂಡ ಮಾಡಿಲ್ಲ. ನಮಗೆ ನ್ಯಾಯ ಬೇಕಾಗಿದೆ. ಅಪಘಾತ ಮಾಡಿದ ಚಾಲಕನ ಬಂಧನ ಆಗಬೇಕು. ನ್ಯಾಯ ಸಿಗದಿದ್ದರೆ ನಾನು ನನ್ನ ಪತ್ನಿ ಮತ್ತು ಮಗಳು ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಳ್ತೇವೆ. ನನ್ನ ಮಗ ಮಾರ್ಥಾಸ್ ಆಸ್ಪತ್ರೆಯಲ್ಲಿಯೇ ಜನಿಸಿದ್ದ. ಇದೇ ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದ್ದಾನೆ” ಎಂದು ಮೃತ ಪ್ರಶಾಂತ್ ತಂದೆ ಲೋಕೇಶ್ ಹೇಳಿದ್ದಾರೆ.

ವಿಡಿಯೋ ಮಾಡುತ್ತಾ ನೇಣು ಹಾಕಿಕೊಂಡ ಮಹಿಳೆ

ಬೆಂಗಳೂರು: ಪತಿ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಿ ಮಹಿಳೆಯೊಬ್ಬಳು ಲೈವವ ವಿಡಿಯೊ ಮಾಡಿಟ್ಟುಕೊಂಡು ಫ್ಯಾನ್​​ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿದ (Women Suicide) ಘಟನೆ ನಗರದ ಬ್ಯಾಡರಹಳ್ಳಿಯಲ್ಲಿ ನಡೆಡಿದೆ. ಮಾನಸ(25)ಆತ್ಮಹತ್ಯೆ ಮಾಡಿಕೊಂಡು ಮಹಿಳೆ.

ಮಾನಸ 6 ವರ್ಷದ ಹಿಂದೆ ದಿಲೀಪ್ ಎಂಬುವನ ಜತೆ ವಿವಾಹವಾಗಿದ್ದರು ದಂಪತಿಗೆ 5 ವರ್ಷದ ಒಂದು ಹೆಣ್ಣು ಮಗು ಇದೆ. ಆದರೆ, ದಿಲೀಪ್​ ಒಂದೂವರೆ ವರ್ಷದಿಂದ ಬೇರೊಂದು ಮಹಿಳೆ ಸಹವಾಸ ಮಾಡುತ್ತಿದ್ದ ಎನ್ನಲಾಗಿದೆ. ಇದೇ ವಿಚಾರಕ್ಕೆ ಪತಿ ಪತ್ನಿ ಮಧ್ಯೆ ಆಗಾಗ ಗಲಾಟೆ ನಡೆಯುತ್ತಿತ್ತು. ಬೇಸತ್ತ ಮಾನಸ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಾನಸ ಅಂದ್ರಹಳ್ಳಿ ಗಂಡನ ಮನೆಯಲ್ಲಿ ವಾಸವಿದ್ದರು. ಭಾನುವಾರ ಸಂಜೆ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನೆ ಬಳಿಕ ದಿಲೀಪ್​ ಮನೆಯವರ ವಿರುದ್ಧ ಮಾನಸ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪತಿ ಕಿರುಕುಳದಿಂದ ಆತ್ಮಹತ್ಯೆ ಎಂದು ಆರೋಪಿಸಿದ್ದಾರೆ. ಠಾಣೆ ಮುಂಭಾಗವೇ ಗಂಡನ ಕಡೆಯವರಿಗೆ ಹಲ್ಲೆ ನಡೆಸಲಾಗಿದೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Puttamadegowda: ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರ ತಂದೆ ಅನಾರೋಗ್ಯದಿಂದ ನಿಧನ

Exit mobile version