ಬೆಂಗಳೂರು: ರಾಜಕಾಲುವೆ (Rajakaluve)ಗೆ ಬಿದ್ದ ಬೈಕ್ ಸವಾರನ ಮೃತದೇಹ ಮೂರು ದಿನಗಳ ಬಳಿಕ ಪತ್ತೆಯಾಗಿದೆ. ಶುಕ್ರವಾರ ರಾತ್ರಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಹೇಮಂತ ಕುಮಾರ್ (27) ಜ್ಞಾನ ಭಾರತಿ ಮೆಟ್ರೋ ಸ್ಟೆಷನ್ ಬಳಿ ರಾಜಕಾಲುವೆಗೆ ಬಿದ್ದಿದ್ದರು. ಡಿವೈಡರ್‌ಗೆ ಗುದ್ದಿದ ಪರಿಣಾಮ ಹೇಮಂತ ಕುಮಾರ್ ಚಿಮ್ಮಿ ವೃಷಭಾವತಿ ನದಿ ರಾಜಕಾಲುವೆ ಒಳಗೆ ಬಿದ್ದಿದ್ದರು. ವೇಗವಾಗಿ ಬೈಕ್ ಚಲಾಯಿಸಿದ್ದರಿಂದ, ಬೈಕ್ ಡಿವೈಡರ್‌ಗೆ ಗುದ್ದಿದ ಪರಿಣಾಮ ಅವರು ಚಿಮ್ಮಿ ರಾಜಕಾಲುವೆ ಒಳಗೆ ಬಿದ್ದಿದ್ದಾರೆ ಎಂದು ಊಹಿಸಲಾಗಿದೆ. ಸಣ್ಣದಾಗಿ ಮಳೆ ಬರುತ್ತಿದ್ದುದರಿಂದ ಡಿವೈಡರ್ ಗುರುತಿಸಲು ಸಾಧ್ಯವಾಗದೆ ಈ ಅವಘಡ ಸಂಭವಿಸಿದೆ. ಆದರೆ ಮೂರು ದಿನಗಳಿಂದ ಅವರು ಪತ್ತೆಯಾಗಿರಲಿಲ್ಲ. ಇದೀಗ ಮೃತದೇಹ ಕಂಡು ಬಂದಿದೆ (Road Accident).
ಸತತ ಶೋಧ ಕಾರ್ಯ
ಶುಕ್ರವಾರದಿಂದ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಹೇಮಂತ ಕುಮಾರ್‌ಗಾಗಿ ಸತತವಾಗಿ ಹುಡುಕಾಟ ನಡೆಸುತ್ತಿದ್ದರು. ಇದೀಗ ಬಿದ್ದ ಸ್ಥಳದಲ್ಲಿಯೇ ಯುವಕನ ಮೃತದೇಹ ಪತ್ತೆಯಾಗಿದೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಮೃತದೇಹವನ್ನು ಪತ್ತೆ ಹಚ್ಚಿದ್ದಾರೆ. ಸದ್ಯ ಮೃತದೇಹವನ್ನು ಮೇಲಕ್ಕೆ ಎತ್ತಿ ಅಂಬ್ಯುಲೆನ್ಸ್ ಮೂಲಕ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ಹಸುಗೂಸನ್ನು ಬಾವಿಗೆ ಎಸೆದು ಕೊಂದರು ಹಂತಕರು
ಯಾದಗಿರಿ: ಬಾವಿಗೆ ಎಸೆದು ಹಸುಗೂಸನ್ನು ಕೊಲೆ (Murder case) ಮಾಡಲಾಗಿದೆ. ಯಾದಗಿರಿ ನಗರದ ಅಂಬೇಡ್ಕರ್ ಬಡಾವಣೆಯಲ್ಲಿ ಅಮಾನವೀಯ ಘಟನೆ ನಡೆದಿದೆ. ಮೀನಾಕ್ಷಿ (2 ತಿಂಗಳು) ಮೃತ ದುರ್ದೈವಿ. ನಾಗೇಶ್ ಹಾಗೂ ಚಿಟ್ಟೆಮ್ಮ ದಂಪತಿಯ ಮಗು ಮೀನಾಕ್ಷಿಯನ್ನು ಕೊಲೆ ಯಾರು ಮಾಡಿದ್ದಾರೆ? ಯಾಕೆ ಮಾಡಿದ್ದಾರೆ ಎಂಬುದು ಗೊತ್ತಿಲ್ಲ. ಬಡಾವಣೆಯ ಹೊರ ಭಾಗದ ನಿರ್ಜನ ಪ್ರದೇಶದಲ್ಲಿರುವ ಬಾವಿಗೆ ಬಿಸಾಡಿ ಹೋಗಿದ್ದಾರೆ.
ಹೆಣ್ಣು ಮಗು ಎಂಬ ಕಾರಣಕ್ಕೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಸ್ಥಳದಲ್ಲಿ ಮಗುವಿನ ಪೋಷಕರು ಕಣ್ಣೀರು ಹಾಕುತ್ತಿದ್ದು, ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಯಾದಗಿರಿ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾವಿಯಲ್ಲಿದ್ದ ಮೃತದೇಹವನ್ನು ಮೇಲೆ ಎತ್ತಿದ್ದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಯಾದಗಿರಿ ನಗರ ಠಾಣೆಯಲ್ಲಿ ಈ ಸಂಬಂಧ ಕೇಸ್ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.
ಬನ್ನೇರುಘಟ್ಟ ಸಫಾರಿ ವೇಳೆ ಸಿಬ್ಬಂದಿ ಮೇಲೆ ಕರಡಿ ದಾಳಿ
ಬೆಂಗಳೂರು ಗ್ರಾಮಾಂತರ: ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಫಾರಿ ವೇಳೆ ಕರಡಿಯೊಂದು (Bear Attack) ಸಿಬ್ಬಂದಿ ಮೇಲೆ ದಾಳಿ (Wild Animal Attack) ಮಾಡಿದೆ. ಬೆಂಗಳೂರು ಹೊರವಲಯ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಘಟನೆ ನಡೆದಿದೆ.ಬೆಟ್ಟಪ್ಪ (54) ಕರಡಿ ದಾಳಿಗೊಳಗಾದವರು. ಬೆಟ್ಟಪ್ಪ ಕಳೆದ ಇಪ್ಪತ್ತು ವರ್ಷಗಳಿಂದ ಬನ್ನೇರುಘಟ್ಟದಲ್ಲಿ ಸಫಾರಿಯ ಗೇಟ್ ಆಪರೇಟರ್ ಕೆಲಸ ಮಾಡುತ್ತಿದ್ದಾರೆ. ಶನಿವಾರ ಸಫಾರಿಯಲ್ಲಿ ಗೇಟ್ ಆಪರೇಟ್ ಮಾಡುವಾಗ ಏಕಾಏಕಿ ಕರಡಿ ದಾಳಿ ಮಾಡಿದೆ. ಬೆಟ್ಟಪ್ಪ ಗಂಭೀರ ಗಾಯಗೊಂಡಿದ್ದು. ಅಪೋಲೋ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸಾವು ಬದುಕಿನ ನಡುವೆ ಬೆಟ್ಟಪ್ಪ ಹೋರಾಟ ನಡೆಸುತ್ತಿದ್ದಾರೆ.
ಇದನ್ನೂ ಓದಿ | Viral News: ಮದುವೆಯಾಗಲು ನಿರಾಕರಿಸಿದ ಪ್ರಿಯಕರನ ಆ ʼಅಂಗʼಕ್ಕೆ ಕತ್ತರಿ ಹಾಕಿದ ಪ್ರಿಯತಮೆ