ಬೆಂಗಳೂರು: ಅಬ್ಬಾ.. ಬೆಂಗಳೂರಿನ ಸರ್ಜಾಪುರದಲ್ಲಿ ಡೆಡ್ಲಿ ಆ್ಯಕ್ಸಿಡೆಂಟ್‌ವೊಂದು (Road Accident) ಸಂಭವಿಸಿದ್ದು, ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಶರವೇಗದಲ್ಲಿ ಬಂದ ಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರ ಗಾಳಿಗೆ ತೂರಿ ಹಾರಿ ಬಿದ್ದಿದ್ದಾನೆ.
ಕಾರು ಬೈಕ್‌ಗೆ ಡಿಕ್ಕಿಯಾದರೂ ಪವಾಡ ಸದೃಶ್ಯ ರೀತಿ ಬೈಕ್ ಸವಾರ ಬಚಾವಾಗಿದ್ದಾನೆ. ಅದೃಷ್ಟವಶಾತ್ ಸವಾರ ಸಣ್ಣ-ಪುಟ್ಟ ಗಾಯವಾಗಿದ್ದು, ಯಾವುದೇ ಪ್ರಾಣಾಪಾಯವಿಲ್ಲ.
ಕಾರು ಡಿಕ್ಕಿಯಾದ ರಭಸಕ್ಕೆ ಸವಾರ ಬೈಕ್ ಸಮೇತ ರಸ್ತೆಗೆ ಹಾರಿ ಬಿದ್ದರೆ, ಧರಿಸಿದ್ದ ಹೆಲ್ಮೆಟ್ ಒಂದು ಕಡೆ ಎಗರಿ ಬಿದ್ದಿದೆ. ಅಪಘಾತದ ದೃಶ್ಯ ಮುಂದಿದ್ದ ಕಾರೊಂದರ ಡ್ಯಾಶ್ ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಆಗಸ್ಟ್ 15ರ ಬೆಳಗ್ಗೆ 7:50 ರ ಸುಮಾರಿಗೆ ಸರ್ಜಾಪುರ ರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಸರ್ಜಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಬೈಕ್ ಸಂಪೂರ್ಣ ಜಖಂಗೊಂಡಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ.
ಇದನ್ನೂ ಓದಿ: Assault Case : ಕುಂದಾಪುರದಲ್ಲಿ ಗಾಂಜಾ ನಶೆಯಲ್ಲಿ ಝಳಪಿಸಿದ ತಲ್ವಾರ್; ಇಬ್ಬರು ಗಂಭೀರ
ಗೂಡ್ಸ್ ವಾಹನ ಡಿಕ್ಕಿಗೆ ಮಹಿಳೆ ಸಾವು
ಬೈಕ್‌ಗೆ ಗೂಡ್ಸ್ ವಾಹನ ಡಿಕ್ಕಿಯಾಗಿ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಂಗಳೂರಿನ ಹಲಸೂರು ಗೇಟ್ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ನಿನ್ನೆ ಭಾನುವಾರ ಮಧ್ಯಾಹ್ನ 2ಗಂಟೆ ಸುಮಾರಿಗೆ ಅಪಘಾತ ನಡೆದಿದೆ.
ಸತ್ಯಪ್ರೇಮ ಎಂಬುವವರು ಮೃತ ದುರ್ದೈವಿ. ಸತ್ಯಪ್ರೇಮ ಅವರು ತಮ್ಮ ಪತಿ ಜತೆಗೆ ಬೈಕ್‌ನಲ್ಲಿ ತೆರಳುತ್ತಿದ್ದರು. ಕಾರ್ಪೊರೇಷನ್ ಬಸ್ ನಿಲ್ದಾಣದ ಬಳಿ ಹಿಂದಿನಿಂದ ಬಂದ ಐಷರ್ ವಾಹನ ಬೈಕ್‌ಗೆ ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ಕೆಳಗೆ ಬಿದ್ದ ಸತ್ಯಪ್ರೇಮಾರ ತಲೆಗೆ ಗಂಭೀರ ಗಾಯವಾಗಿದೆ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಸತ್ಯಪ್ರೇಮಾರ ಪತಿಗೆ ಗಾಯಗಳಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನಾ ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.
ನಿಯಂತ್ರಣ ತಪ್ಪಿದ ಕಾರು, 17 ಬೈಕ್‌ಗಳು ಜಖಂ
ಹಾಸನದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ನಿಂತಿದ್ದ ಬೈಕ್‌ಗಳ ಮೇಲೆ ನುಗ್ಗಿದೆ. ಪರಿಣಾಮ ಹದಿನೇಳು ಬೈಕ್‌ಗಳು ಜಖಂಗೊಂಡಿವೆ. ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಬಾಣಾವರ ಹೋಬಳಿ, ಕೆಂಕೆರೆಹಳ್ಳಿ ಗೇಟ್ ಬಳಿ ಅಪಘಾತ ನಡೆದಿದೆ.
ಧಾರಾಕಾರ ಮಳೆ ಸುರಿಯುತ್ತಿದ್ದ ಹಿನ್ನೆಲೆಯಲ್ಲಿ ಸವಾರರು ಬೈಕ್‌ಗಳನ್ನು ನಿಲ್ಲಿಸಿ ಬಸ್ ನಿಲ್ದಾಣದಲ್ಲಿ ನಿಂತಿದ್ದರು. ಈ ವೇಳೆ ಅತಿ ವೇಗವಾಗಿ ಚಲಿಸುತ್ತಿದ್ದ ಫಾರ್ಚೂನರ್ ಕಾರು, ಮಳೆಯಿಂದ ರಸ್ತೆ ಕಾಣದೆ ನಿಯಂತ್ರಣ ತಪ್ಪಿ ಬೈಕ್‌ಗಳ ಮೇಲೆ ನುಗ್ಗಿದೆ. ಬೈಕ್‌ಗಳ ಮೇಲೆ ನುಗ್ಗಿ ಬಳಿಕ ಬಸ್ ನಿಲ್ದಾಣದ ಗೋಡೆಗೆ ಡಿಕ್ಕಿ ಹೊಡೆದು ಕಾರು ನಿಂತಿದೆ.
ಕಾರು ಗುದ್ದಿದ ರಭಸಕ್ಕೆ ಗೋಡೆ ಕುಸಿದು ಬಿದ್ದಿದೆ. ಘಟನೆಯಲ್ಲಿ ಓರ್ವನಿಗೆ ಗಾಯವಾಗಿದ್ದು, ಅದೃಷ್ಟವಶಾತ್ ಬಸ್ ನಿಲ್ದಾಣದಲ್ಲಿ ನಿಂತಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಸ್ ನಿಲ್ದಾಣದಲ್ಲಿ ಬೈಕ್ ಸವಾರರು ನಿಂತಿದ್ದರಿಂದ ಎಲ್ಲರ ಜೀವ ಉಳಿದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾಣಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ