Site icon Vistara News

Road Accident : ಆಟೋಗೆ ಲೋಡ್‌ ತುಂಬಿದ್ದ ಲಾರಿ ಡಿಕ್ಕಿ; ಚಾಲಕನ ನಿದ್ರೆ ಮಂಪರಿಗೆ ಜೀವ ಬಿಟ್ಟಳು ಯುವತಿ

Road Accident

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ (Road Accident) ಸಂಭವಿಸಿದ್ದು, ಲಾರಿ-ಆಟೋ ಮುಖಾಮುಖಿ ಡಿಕ್ಕಿಯಾಗಿ ಯುವತಿಯೊಬ್ಬಳು ದಾರುಣವಾಗಿ ಮೃತಪಟ್ಟಿದ್ದಾಳೆ. ಶಾಲಿನಿ, ಮೃತ ದುರ್ದೈವಿ. ಬೆಂಗಳೂರಿನ ವಿಧಾನಸೌಧ ಕೂಗಳತೆಯ ಕಾಫಿ ಬೋರ್ಡ್ ಸಿಗ್ನಲ್ ಬಳಿ ಬೆಳಗಿನ ಜಾವ 4 ಗಂಟೆಗೆ ಅಪಘಾತ ಸಂಭವಿಸಿದೆ.

ನಮ್ಮ ಯಾತ್ರಿ ಆ್ಯಪ್‌ ಮೂಲಕ ಆಟೋ ಚಾಲಕ ಇಮ್ರಾನ್ ಶಾಲಿನಿಯನ್ನು ಪಿಕಪ್ ಮಾಡಿದ್ದರು. ಬೆನ್ಸನ್ ಟೌನ್ ಚಿನ್ನಪ್ಪ ಗಾರ್ಡನ್‌ನಿಂದ ಮೆಜೆಸ್ಟಿಕ್‌ಗೆ ಶಾಲಿನಿಯನ್ನು ಡ್ರಾಪ್ ಮಾಡಲು ಆಟೋ ಬರುತ್ತಿತ್ತು. ಈ ವೇಳೆ ಸಿಗ್ನಲ್ ಜಂಪ್ ಮಾಡಿ ಆಟೋಗೆ ಲೋಡ್ ತುಂಬಿದ್ದ ಲಾರಿ ಡಿಕ್ಕಿ ಹೊಡೆದಿದೆ. ಅಪಘಾತದ ಬಳಿಕ ಲೋಡ್ ಸಮೇತ ಲಾರಿ ಬಿಟ್ಟು ಚಾಲಕ ಎಸ್ಕೇಪ್ ಆಗಿದ್ದ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಾಲಿನಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೌರಿಂಗ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ನಿದ್ರೆ ಮಂಪರಿನಲ್ಲಿ ಅಪಘಾತ

ಅಪಘಾತದ ಬಳಿಕ ಕಾಲ್ಕಿತ್ತಿದ್ದ ಚಾಲಕನನ್ನು ಟ್ರಾಫಿಕ್ ಪೊಲೀಸರು ಬಂಧಿಸಿದ್ದಾರೆ. ಕಬ್ಬನ್ ಪಾರ್ಕ್ ಸಂಚಾರ ಪೊಲೀಸರಿಂದ ಅಭಿ ಎಂಬಾತನ ಬಂಧನವಾಗಿದ್ದು, ವಿಚಾರಣೆ ವೇಳೆ ನಿದ್ರೆ ಮಂಪರಿನಲ್ಲಿ ಅಪಘಾತ ಆಯಿತು ಎಂದು ಹೇಳಿದ್ದಾನೆ. ಇನ್ನೂ ಮೃತ ಶಾಲಿನ ಕೇರಳ ಮೂಲದವಳಾಗಿದ್ದಾಳೆ. ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದಿದ್ದ ಶಾಲಿನಿ ಬೆಳಗ್ಗೆ ಮೆಜೆಸ್ಟಿಕ್‌ಗೆ ತೆರಳುವಾಗ ಅಪಘಾತ ನಡೆದಿದೆ. ಘಟನೆಯಲ್ಲಿ ಆಟೋ ಪೂರ್ತಿ ಛಿದ್ರಗೊಂಡಿತ್ತು.

ಇದನ್ನೂ ಓದಿ: Robbery case : ಲವ್ವರ್ ಮೊಬೈಲ್‌ನಲ್ಲಿದ್ದ ತನ್ನ ಫೋಟೊ, ವಿಡಿಯೊ ಡಿಲೀಟ್‌ ಮಾಡಿಸಲು ಟೆಕ್ಕಿಯ ಖರ್ತನಾಕ್‌ ರಾಬರಿ ಪ್ಲ್ಯಾನ್‌

ಲಾರಿ ಹಾಗೂ ಕಾರು ನಡುವೆ ಅಪಘಾತ; ಮಹಿಳಾ ಯಾತ್ರಿ ಸಾವು

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮೊಗಿಲಿ ಘಾಟ್ ಹೆದ್ದಾರಿಯಲ್ಲಿ ಸಾಲು ಸಾಲು ಅಪಘಾತಗಳು ಸಂಭವಿಸುತ್ತಿದೆ. ಸದ್ಯ ಲಾರಿ ಹಾಗೂ ಕಾರು ನಡುವೆ ಡಿಕ್ಕಿಯಾಗಿದ್ದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಲಾರಿ ಪಲಮನೇರು ಕಡೆಯಿಂದ ಚಿತ್ತೂರಿಗೆ ಹೋಗುತ್ತಿದ್ದರೆ, ಮೊಗಿಲಿ ಘಾಟ್ ಬಳಿ ಕಾರಿಗೆ ಡಿಕ್ಕಿ ಹೊಡೆದು ಪಾದಚಾರಿ ರಸ್ತೆ ಮೇಲೆ ಪಲ್ಟಿ ಹೊಡೆದಿದೆ. ಮಹಿಳಾ ಯಾತ್ರಿ ಸಾವನ್ನಪ್ಪಿದ್ದು, ಕಾರಿನಲ್ಲಿದ್ದ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಘಟನಾ‌ ಸ್ಥಳಕ್ಕೆ ಬಂಗಾರುಪಾಳ್ಯಂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಧಾರವಾಡದಲ್ಲಿ ಅಪರಿಚಿತ ವಾಹನಕ್ಕೆ ಸವಾರ ಬಲಿ

ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಸವಾರನೊಬ್ಬ ಮೃತಪಟ್ಟಿದ್ದಾನೆ. ಧಾರವಾಡದ ಹೊಯ್ಸಳ ನಗರದ ಬ್ರಿಡ್ಜ್ ಮೇಲೆ ಘಟನೆ ನಡೆದಿದೆ. ರಾಣೆಬೆನ್ನೂರು ಮೂಲದ ಸುಲ್ತಾನ್ ಸಾಬ್ ಮೃತಪಟ್ಟವರು. ಸವಾರರಿಬ್ಬರು ರಾಣೆಬೆನ್ನೂರಿನಿಂದ ಕಿತ್ತೂರಿನ ಮಠಕ್ಕೆ ಹೊರಟಿದ್ದರು. ಈ ವೇಳೆ ಹಿಂದಿನಿಂದ ಬಂದ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟರೆ, ಮತ್ತೋರ್ವ ಸವಾರನಿಗೆ ಗಂಭೀರ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೊಡ್ಡಬಳ್ಳಾಪುರದಲ್ಲಿ ಗೂಡ್ಸ್‌ ವಾಹನಕ್ಕೆ ಸವಾರ ಸ್ಪಾಟ್‌ ಡೆತ್‌

ಕೋಳಿ ಸಾಗಿಸುವ ಗೂಡ್ಸ್ ವಾಹನವು ಬೈಕ್‌ಗೆ ಡಿಕ್ಕಿ ಹೊಡೆದಿದೆ. ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪ್ರವೀಣ್ (35) ಮೃತ ದುರ್ದೈವಿ. ದೊಡ್ಡಬಳ್ಳಾಪುರ ಹೊರವಲಯದ ಬಾಶೆಟ್ಟಿಹಳ್ಳಿ ಬಳಿ ಅಪಘಾತ ನಡೆದಿದೆ. ಬೈಕ್ ಸವಾರ ಪ್ರವೀಣ್‌ ಮಧುಗಿರಿ ತಾಲ್ಲೂಕಿನ ಸುದ್ದಗುಂಟೆ ಮೂಲದವರಾಗಿದ್ದು, ಬಾಶೆಟ್ಟಿಹಳ್ಳಿ ಬಳಿ ಚಿಲ್ಲರೆ ಅಂಗಡಿ ಇಟ್ಟುಕೊಂಡಿದ್ದರು. ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version