ಬೆಂಗಳೂರಿನ ವೈಯಾಲಿಕಾವಲ್‌ನ ವಿನಾಯಕ ಸರ್ಕಲ್ ಬಳಿ ನಡುರಾತ್ರಿ ಕಾರೊಂದು ಹೊತ್ತಿ ಉರಿದಿದೆ. ಸಿಎನ್‌ಜಿ ವಾಹನಕ್ಕೆ ಬೆಂಕಿ ತಗುಲಿದೆ. ಕಾರು ಚಾಲಕ ಗಾಡಿಯಲ್ಲಿಯೇ ಮಲಗಿದ್ದಾಗಲೇ, ಏಕಾಏಕಿ ಬೆಂಕಿ ಹತ್ತಿದೆ. ಕೂಡಲೇ ಕಾರಿನಿಂದ ಹೊರಬಂದಿದ್ದ. ಕಾರಿನ ಕೆಳಗೆ ಪೆಟ್ರೋಲ್ ಕ್ಯಾನ್ ಇತ್ತು ಎನ್ನಲಾಗಿದೆ. ತಕ್ಷಣ ಅಗ್ನಿಶಾಮಕ ಸಿಬ್ಬಂದಿಗೆ ಬಂದು ಬೆಂಕಿಯನ್ನು ನಂದಿಸಿದ್ದಾರೆ. ಅಗ್ನಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ವೈಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬಸ್ ಚಲಾಯಿಸುವಾಗಲೇ ಕಾಣಿಸಿಕೊಂಡ ಎದೆನೋವು
ಬಿಎಂಟಿಸಿ ಬಸ್ ಚಾಲಕನಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದೆ. ಸಂಚಾರಿ ಪೊಲೀಸರ ಸಮಯ ಪ್ರಜ್ಞೆಯಿಂದ 40ಕ್ಕೂ ಹೆಚ್ಚು ಜನರ ಜೀವ ಉಳಿದಿದೆ. ನಿನ್ನೆ ಗುರುವಾರ ಮಧ್ಯಾಹ್ನ ಶಾಂತಿನಗರದ ಡಬಲ್ ರೋಡ್ ಬಳಿ ಘಟನೆ ನಡೆದಿದೆ. ಡ್ರೈವರ್ ವಿರೇಶ್ ಬಸ್ ಡ್ರೈವಿಂಗ್ ಮಾಡುತ್ತಿರುವಾಗ ಹಾರ್ಟ್ ಅಟ್ಯಾಕ್ ಆಗಿದೆ. ನಡುರಸ್ತೆಯಲ್ಲಿ ಬಸ್ ಸ್ಲೋ ಆಗಿರುವುದನ್ನು ಗಮನಿಸಿದ ಹಲಸೂರು ಟ್ರಾಫಿಕ್ ಎಎಸ್‌ಐ ಆರ್ ರಘುಕುಮಾರ್ ಓಡೋಡಿ ಬಂದರು. ಬಸ್ ಬಳಿ ಬಂದು ನೋಡಿದಾಗ ಚಾಲಕ ಎದೆಗೆ ಕೈ ಹಿಡಿದು ಒಂದು ಕಡೆಗೆ ವಾಲಿದ್ದರು. ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಸ್ಲೋ ರನ್ನಿಂಗ್‌ನಲ್ಲಿತ್ತು, ಕೂಡಲೇ ಹ್ಯಾಂಡ್ ಬ್ರೇಕ್ ಹಾಕಿ ಚಾಲಕನನ್ನು ಇಳಿಸಿದ್ದಾರೆ. ನಂತರ ಆ್ಯಂಬುಲೆನ್ಸ್‌ಗೂ ಕಾಯದೆ ಅಶೋಕ ನಗರ ಟ್ರಾಫಿಕ್ ಸಿಬ್ಬಂದಿ ಪ್ರಸನ್ನಕುಮಾರ್ ಸಹಾಯದಿಂದ ಆಸ್ಪತ್ರೆಗೆ ರವಾನಿಸಿದ್ದಾರೆ.
ನಿಯಂತ್ರಣ ತಪ್ಪಿ ಟಿಪ್ಪರ್ ಲಾರಿ
ಔಟರ್‌ರಿಂಗ್ ರೋಡ್ ಸರ್ವೀಸ್ ರಸ್ತೆಯಿಂದ ಮುಖ್ಯರಸ್ತೆಯಲ್ಲಿ 10 ಚಕ್ರದ ಲಾರಿ ಅಪಘಾತಕ್ಕೀಡಾಗಿದೆ. ನಾಗವಾರ-ಹೆಬ್ಬಾಳ ಮಾರ್ಗದ ಕೆಂಪಾಪುರದ ಬಳಿ ಟಿಪ್ಪರ್ ಲಾರಿ ನಿಯಂತ್ರಣ ತಪ್ಪಿದೆ. ಪರಿಣಾಮ ಟ್ರಾಫಿಕ್ ಜಾಮ್ ಉಂಟಾಗಿ, ಸತತ ಒಂದು ಗಂಟೆಯಿಂದ ವಾಹನಗಳು ನಿಂತಲ್ಲೆ ನಿಲ್ಲಬೇಕಾಯಿತು. ಶುಕ್ರವಾರ ಬೆ.7ಕ್ಕೆ ಘಟನೆ ನಡೆದಿದ್ದು, ಮೆಟ್ರೋ ಕಾಮಗಾರಿಯ ಗೋಡೆಗೆ ಲಾರಿ ಗುದ್ದಿದೆ. ಲಾರಿಯನ್ನು ತೆಗೆಯಲು ಪೊಲೀಸರು ಎರಡು ಜೆಸಿಬಿ ಬಳಸಿದರು. ರಸ್ತೆ ಸಂಪೂರ್ಣ ಬಂದ್ ಆಗಿರುವ ಹಿನ್ನೆಲೆಯಲ್ಲಿ 10 ಕಿ.ಮೀ ವರೆಗೂ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ