ಬೆಂಗಳೂರು: ಬೆಂಗಳೂರಿನ ಉಲ್ಲಾಳ ಉಪನಗರ ಕೆರೆ ಬಳಿ ಬಿಎಂಟಿಸಿಗೆ (Road Accident) ಮಹಿಳೆಯೊಬ್ಬರು ಬಲಿಯಾಗಿದ್ದಾರೆ. ಸ್ಕೂಟರ್‌ನಲ್ಲಿ ಬರುತ್ತಿದ್ದಾಗ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದಿದೆ. ಘಟನಾ ಸ್ಥಳಕ್ಕೆ ಜ್ಞಾನಭಾರತಿ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗುರುವಾರ ಬೆಳಗ್ಗೆ 9.30ರ ಸುಮಾರಿಗೆ ಉಲ್ಲಾಳ ಮುಖ್ಯರಸ್ತೆ 100 ಫೀಟ್ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ಮೋನಿಕಾ ಮೃತ ದುರ್ದೈವಿ.
ಸೊನ್ನೆನಾಹಳ್ಳಿಯ ಮಾರುತಿ ನಗರದ ನಿವಾಸಿಯಾಗಿದ್ದ ಮೋನಿಕಾ, ರಿಂಗ್ ರೋಡ್‌ನಲ್ಲಿರುವ ಷೋ ರೂಂನಲ್ಲಿ ಹೆಚ್ಆರ್ ಆಗಿ ಕೆಲಸ ಮಾಡುತ್ತಿದ್ದರು. ಗುರುವಾರ ಜ್ಯೂಪಿಟರ್ ಸ್ಕೂಟರ್‌ನಲ್ಲಿ ಬರುತ್ತಿದ್ದರು. 100 ಫೀಟ್ ರಸ್ತೆ ಕಾಮಗಾರಿ ನಡೆಯುತ್ತಿದ್ದ ಕಾರಣ ಒಂದು ಬದಿಯ ರಸ್ತೆ ಕ್ಲೋಸ್ ಆಗಿತ್ತು. ಕೇವಲ ಒಂದೇ ಬದಿಯ ರಸ್ತೆಯಲ್ಲಿ ವಾಹನಗಳ ಓಡಾಟಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಈ ವೇಳೆ ಸ್ಕೂಟರ್‌ನಲ್ಲಿ ಬರುತ್ತಿದ್ದ ಮೋನಿಕಾಗೆ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದಿದೆ. ರಸ್ತೆಗೆ ಬಿದ್ದಿದ್ದ ಮೋನಿಕಾ ತಲೆ ಮೇಲೆ ಹಿಂಬದಿಯಿಂದ ಬರುತ್ತಿದ್ದ ಕಾರಿನ ಚಕ್ರ ಹತ್ತಿದೆ. ಪರಿಣಾಮ ಮೋನಿಕಾ ತಲೆ ಛಿದ್ರಗೊಂಡಿದೆ. ಆಕೆಯ ತಲೆ ಮೇಲೆ ಕಾರು ಹತ್ತಿದ ಕಾರಣ ಮೋನಿಕಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಂಡ್ಯ ಮೂಲದ ಮೊನಿಕಾ ನಾಲ್ಕು ವರ್ಷದ ಹಿಂದೆ ಮದುವೆಯಾಗಿತ್ತು. ಪತಿ ಜತೆಗೆ ಸೊನ್ನೆನಾಹಳ್ಳಿಯ ಮಾರುತಿ ನಗರದಲ್ಲಿ ವಾಸವಾಗಿದ್ದರು.
ಈ ಕುರಿತು ಬಿಎಂಟಿಸಿ ಸ್ಪಷ್ಟನೆ ನಡೆದಿದೆ. ಉಲ್ಲಾಳ ಕೆರೆಯ ಹತ್ತಿರ ದ್ವಿಚಕ್ರ ವಾಹನ ಸವಾರರು ಏಕಮುಖ ರಸ್ತೆಯಲ್ಲಿ ವಿರುದ್ಧ ದಿಕ್ಕಿನಿಂದ ವಾಹನ ಚಲಾವಣೆ ಮಾಡಿಕೊಂಡು ಬಂದು ಎದುರಿನಿಂದ ಬರುತ್ತಿದ್ದ ಬಸ್ಸಿನ ಬಲಕ್ಕೆ ಡಿಕ್ಕಿ ಹೊಡೆದಿದ್ದಾರೆ. ಈ ಡಿಕ್ಕಿಯ ಪರಿಣಾಮ, ಮಹಿಳೆ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದಿದ್ದಾರೆ. ಅವರು ಬಿದ್ದಾಗ, ಹಿಂಬದಿಯಿಂದ ಬರುತ್ತಿದ್ದ ಕಾರು ಅವರ ಮೇಲೆ ಹರಿದಿರುತ್ತದೆ .
ತಕ್ಷಣವೇ ಆಂಬ್ಯುಲೆನ್ಸ್ ಸ್ಥಳಕ್ಕೆ ಆಗಮಿಸಿ ಗಾಯಗೊಂಡ ಸವಾರರನ್ನು ಆಸ್ಪತ್ರೆಗೆ ಸಾಗಿಸಿದರು, ಅಪಘಾತದಲ್ಲಿ ಅವರು ಗಂಭೀರವಾಗಿ ಗಾಯಗೊಂಡು, ನಂತರ ಚಿಕಿತ್ಸೆಗೊಳಗಾಗಿದ್ದಾಗ ಕೊನೆಯುಸಿರೆಳೆದಿದ್ದಾರೆ. ಈ ದುರ್ಘಟನೆ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ತಕ್ಷಣ ಮಾಹಿತಿ ನೀಡಲಾಗಿದೆ. ಸಂಸ್ಥೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ.