ಬೆಂಗಳೂರು: ಡೇಟಿಂಗ್ ಆ್ಯಪ್‌ಗಳ (Dating App) ಮೂಲಕ ಸಾಫ್ಟ್‌ವೇರ್ ಉದ್ಯೋಗಿಯನ್ನು ಕಾಂಟ್ಯಾಕ್ಟ್ ಮಾಡಿ ರಾಬರಿ ಮಾಡುತ್ತಿದ್ದ ಗ್ಯಾಂಗ್ ಅನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ.
ಸಲ್ಮಾನ್ ಖಾನ್ ಮತ್ತವನ ತಂಡವು ದರೋಡೆ ಮಾಡುವ ಶೈಲಿಯನ್ನು ಬದಲಾಯಿಸಿಕೊಂಡಿದ್ದು, ಡೇಟಿಂಗ್ ಆ್ಯಪ್‌ಗಳ ಮೊರೆ ಹೋಗಿದ್ದರು. ಡೇಟಿಂಗ್ ಆ್ಯಪ್ ಬಳಸಿ ಟಾರ್ಗೆಟ್ ಮಾಡಿ ರಾಬರಿ ಮಾಡುತ್ತಿದ್ದರು.
ʻಗೇʼಗಳಿಗಾಗಿ ಡೆವಲಪ್ ಮಾಡಿರುವ ಗ್ರಿಂಡರ್ ಆ್ಯಪ್ ಮೂಲಕ ಆರೋಪಿಗಳು ತಾವೂ ಗೇಗಳು ಎಂದು ಅಕೌಂಟ್ ಕ್ರಿಯೇಟ್ ಮಾಡಿಕೊಳ್ಳುತ್ತಿದರು. ಡೇಟಿಂಗ್ ಆ್ಯಪ್‌ಗಳ ಮೂಲಕ ದೊಡ್ಡ ದೊಡ್ಡ ಕುಳಗಳನ್ನು ಸಂಪರ್ಕ ಮಾಡಿ ಸಲುಗೆ ಬೆಳೆಸಿಕೊಂಡು ಬಳಿಕ ಸುಲಿಗೆ ಮಾಡುತ್ತಿದ್ದರು.
ಟ್ರಿನಿಟಿ ಸರ್ಕಲ್ ಬಳಿ ಸಾಫ್ಟ್‌ವೇರ್ ಉದ್ಯೋಗಿಯೊಬ್ಬನನ್ನು ಆ್ಯಪ್ ಮೂಲಕ ಪುಸಲಾಯಿಸುವಂತೆ ಚಾಟಿಂಗ್ ಮಾಡಿ ಸ್ನೇಹ ಬೆಳಸಿಕೊಂಡ ಸಲ್ಮಾನ್ ಖಾನ್ ಗ್ಯಾಂಗ್, ಕಾರಿನಲ್ಲಿ ಪ್ಯಾಲೇಸ್ ಗ್ರೌಂಡ್‌ಗೆ ಕರೆದುಕೊಂಡು ಬಂದು ಹಲ್ಲೆ ನಡೆಸಿ ರಾಬರಿ ಮಾಡಿದ್ದಾರೆ. ಸಾಫ್ಟ್‌ವೇರ್ ಉದ್ಯೋಗಿ ಬಳಿ ಇದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಲ್ಯಾಪ್‌ಟಾಪ್, ಹಣ, ಚಿನ್ನಾಭರಣ ದೋಚಿ ಪರಾರಿಯಾಗಿದ್ದರು.
ಈ ಸಂಬಂಧ ಸದಾಶಿವನಗರ ಪೊಲೀಸ್ ಠಾಣೆಗೆ ಸಾಫ್ಟ್‌ವೇರ್ ಉದ್ಯೋಗಿ ದೂರು ನೀಡಿದ್ದರು. ಖತರ್ನಾಕ್ ಗ್ಯಾಂಗ್‌ಗೆ ಬಲೆ ಬೀಸಿದ ಪೊಲೀಸರು ಸಲ್ಮಾನ್ ಖಾನ್, ಮೊಹಮ್ಮದ್ ಇಸ್ಮಾಯಿಲ್, ಸಮೀರ್ ಪಾಷಾ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | ಒಂಟಿ ಮಹಿಳೆಯರನ್ನು ಬೆತ್ತಲಾಗಿಸಿ ಹಣ ದೋಚುತಿದ್ದ ಗ್ಯಾಂಗ್ ಅರೆಸ್ಟ್