ಬೆಂಗಳೂರು: ವೀಕೆಂಡ್‌ನಲ್ಲಿ ಎಲ್ಲ ಕೆಲಸಕ್ಕೂ ಬ್ರೇಕ್ ಹಾಕಿ ಮನೆಯಲ್ಲಿ ರಿಲ್ಯಾಕ್ಸ್ ಆಗಿರುವವರು, ಔಟಿಂಗ್ ಅಂತ ಓಡಾಡುವವರು ಭಾನುವಾರ ಮಲ್ಲೇಶ್ವರದಲ್ಲಿ ರೋಡಿಗಿಳಿದಿದ್ದರು. ದೇಸಿ ಸೀರೆ ತೊಟ್ಟ ನೀರೆಯರು (Run with saree) ಸೀರೆಯಲ್ಲೇ ಓಡಿ ದೈಹಿಕ ಚಟುವಟಿಕೆ ಕುರಿತು ಜಾಗೃತಿ ಮೂಡಿಸಿದರು.
ತನೈರಾ ಸಂಸ್ಥೆಯು ಭಾನುವಾರ ಬೆಳಗ್ಗೆ ಮಲ್ಲೇಶ್ವರಂನಲ್ಲಿ ಏರ್ಪಡಿಸಿದ್ದ 3 ಕಿ.ಮೀ ಉದ್ದದ ‘ಸೀರೆ ಉಟ್ಟ ನಾರಿಯರ ಓಟದ ಸ್ಪರ್ಧೆ’ಗೆ (ರನ್ ವಿತ್ ಸ್ಯಾರಿ) ಕ್ಷೇತ್ರದ ಶಾಸಕ ಮತ್ತು ಸಚಿವ ಸಿ ಎನ್ ಅಶ್ವತ್ಥ ನಾರಾಯಣ ಚಾಲನೆ ನೀಡಿದರು.18ನೇ ಅಡ್ಡರಸ್ತೆಯ ಮೈದಾನದಿಂದ ಆರಂಭವಾದ ಈ ಸ್ಪರ್ಧೆಯಲ್ಲಿ ಸಾವಿರಾರು ನಾರಿಯರು ಉತ್ಸಾಹದಿಂದ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಆರೋಗ್ಯದ ಗುಟ್ಟನ್ನು ಅರಿತರೆ ಬದುಕಿನ ಗುಟ್ಟನ್ನೇ ತಿಳಿಯಬಹುದು ಎಂದರು. ಇದೇ ವೇಳೆ ದೇಸಿ ಉಡುಪಿನಲ್ಲಿ ಮಹಿಳೆಯರು ಆಟೋಟಗಳಲ್ಲಿ ಭಾಗವಹಿಸಬಹುದು. ಇಂತಹ ಚಟುವಟಿಕೆಗಳಿಂದ ಮಹಿಳೆಯರಿಗೂ ಖುಷಿ ಸಿಗುತ್ತದೆ ಎಂದು ಹೇಳಿದರು.
ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ದೈಹಿಕ ಶಿಕ್ಷಣ ಮತ್ತು ಯೋಗಕ್ಷೇಮಕ್ಕೂ ಆದ್ಯತೆ ಕೊಡಲಾಗಿದೆ. ಸದೃಢ ಆರೋಗ್ಯದಿಂದ ಸದೃಢ ಭಾರತವನ್ನು ನಿರ್ಮಿಸಬಹುದು ಎಂದು ಸಚಿವರು ನುಡಿದರು. ಕಾರ್ಯಕ್ರಮದಲ್ಲಿ ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥೆ ಮತ್ತು ಬಿಜೆಪಿ ನಾಯಕಿ ತೇಜಸ್ವಿನಿ ಅನಂತಕುಮಾರ್ ಸಾಥ್ ನೀಡಿದರು.
ಸಚಿವರೊಂದಿಗೆ ನಾರಿಯರ ಸೆಲ್ಫಿ
ಕಾರ್ಯಕ್ರಮದ ಬಳಿಕ ಸಚಿವ ಅಶ್ವತ್ಥ ನಾರಾಯಣರಿಗೆ ಮಹಿಳಾ ಮಣಿಯರು ಫೋಟೊ ತೆಗೆಸಿಕೊಳ್ಳಲು ಮುತ್ತಿಗೆ ಹಾಕಿದರು. ಸಚಿವರೊಂದಿಗೆ ಸೆಲ್ಫಿ ಕ್ಲಿಕಿಸಿಕೊಂಡು ಸಂತಸಗೊಂಡರು. ಮಹಿಳೆಯರ ಉತ್ಸಾಹಕ್ಕೆ ಸಚಿವರು ಸಾಥ್ ನೀಡಿದರು.
ಇದನ್ನೂ ಓದಿ | ಎಸ್ಸಿ ಎಸ್ಟಿ ವಿದ್ಯಾರ್ಥಿಗಳ ಟೂಲ್‌ಕಿಟ್ ಹಗರಣ, ಆಪ್ ಆರೋಪ, ನಿರಾಕರಿಸಿದ ಸಚಿವ ಅಶ್ವಥ್ ನಾರಾಯಣ್