ಬೆಂಗಳೂರು: ರಾಜ್ಯದ ಪೊಲೀಸ್ ಇಲಾಖೆ ಭಾರಿ ಹರಸಾಹಸಪಟ್ಟು ಕೆ.ಎಸ್. ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ (Santro Ravi case) ಎಂಬ ವೇಶ್ಯಾವಾಟಿಕೆ ಕಿಂಗ್‌ಪಿನ್‌ನನ್ನು ಗುಜರಾತ್‌ನಿಂದ ಬಂಧಿಸಿ ತಂದು ಈಗ ಸಿಐಡಿ ಪೊಲೀಸರ ಕೈಗೆ ಒಪ್ಪಿಸಿದೆ. ಆದರೆ, ದಲಿತ ಮಹಿಳೆಯ ಅತ್ಯಾಚಾರ, ವಂಚನೆ ಎಂಬ ಪ್ರಕರಣದಡಿ ವಿಚಾರಣೆಗೆ ಒಳಗಾಗುತ್ತಿರುವ ಸ್ಯಾಂಟ್ರೋ ರವಿ ವಿರುದ್ಧ ದಾಖಲೆಗಳೇ ಇಲ್ವಾ ಎಂಬ ಪ್ರಶ್ನೆ ಮೂಡಿದೆ.
ಸ್ಯಾಂಟ್ರೋ ರವಿ ತನ್ನನ್ನು ಉದ್ಯೋಗದ ಆಮಿಷ ಒಡ್ಡಿ ಅತ್ಯಾಚಾರ ಮಾಡಿದ್ದ, ಆಮೇಲೆ ಮದುವೆಯಾಗಿದ್ದಾನೆ. ಬಳಿಕ ವಂಚಿಸಿದ್ದಾನೆ, ಕೊನೆಗೆ ಬೇರೆಯವರ ಜತೆ ಹೋಗುವಂತೆ ಒತ್ತಾಯಿಸಿ ಬ್ಲ್ಯಾಕ್‌ಮೇಲ್ ಮಾಡಿದ್ದಾನೆ ಎನ್ನುವುದು ಸೇರಿದಂತೆ ಹಲವು ಆರೋಪಗಳನ್ನು ದಲಿತ ಮಹಿಳೆ ಮಾಡಿದ್ದರು. ಒಡನಾಡಿ ಸಂಸ್ಥೆಯ ಬೆಂಬಲದೊಂದಿಗೆ ವಿಜಯ ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು
ಇದೀಗ ಸಿಐಡಿ ಪೊಲೀಸರು ಸ್ಯಾಂಟ್ರೋ ರವಿಯನ್ನು ವಿಚಾರಣೆ ನಡೆಸುತ್ತಿದ್ದು, ಅವರ ತನಿಖೆಗೆ ಸಾಕ್ಷ್ಯಗಳ ಕೊರತೆ ಎದುರಾಗಿದೆ ಎಂದು ತಿಳಿದುಬಂದಿದೆ. ಅವರಿಗೆ ಎದುರಾಗಿರುವ ಪ್ರಮುಖ ಸಮಸ್ಯೆ ಏನೆಂದರೆ, ಮಹಿಳೆ ದೂರಿನಲ್ಲಿ ಎಲ್ಲ ವಿಚಾರಗಳನ್ನು ವಿವರಿಸಿದ್ದಾರಾದರೂ ಅದಕ್ಕೆ ಪೂರಕವಾದ ಯಾವುದೇ ದಾಖಲೆಗಳನ್ನು ನೀಡದೆ ಇರುವುದು ತನಿಖೆಗೆ ಹಿನ್ನಡೆಯಾಗಿದೆ.
ಸ್ಯಾಂಟ್ರೋ ರವಿ ಜತೆ ೨೦೧೯ರಲ್ಲಿ ಮದುವೆಯಾಗಿದೆ ಎಂದು ಅವರು ಹೇಳಿದ್ದಾರಾದರೂ ಮದುವೆ ಆಗಿರುವ ಬಗ್ಗೆ ಯಾವುದೇ ದಾಖಲೆ ನೀಡಿಲ್ಲ. ಸಿಐಡಿ ಪೊಲೀಸರು ದಾಖಲೆ ಕೇಳುತ್ತಿದ್ದಾರೆ. ಮೈಸೂರಿನ ವಿಜಯನಗರ ಪೊಲೀಸರಿಗೆ ದಾಖಲೆ ಹುಡುಕುವುದು ಒಂದು ಸವಾಲಾಗಿದೆ.
ಪೊಲೀಸರು ಮೂರು ಬಾರಿ ಸ್ಯಾಂಟ್ರೋ ರವಿ ಪತ್ನಿಯನ್ನು ವಿಚಾರಣೆ ಮಾಡಿದರೂ ಮದುವೆ ಬಗ್ಗೆ ಅವರು ದಾಖಲೆ ಕೊಟ್ಟಿಲ್ಲ. ಸ್ಯಾಂಟ್ರೋ ರವಿ ಕೈಯಿಂದ ಸೀಜ್ ಮಾಡಿದ್ದ ಮೊಬೈಲ್ ನಲ್ಲೂ ಇಲ್ಲ ಮದುವೆ ಆಗಿರುವ ಬಗ್ಗೆ ದಾಖಲೆ ಸಿಕ್ಕಿಲ್ಲ. ಹೀಗಾಗಿ ಮದುವೆ ಬಗ್ಗೆ ದಾಖಲೆ ಕೊಡುವಂತೆ ರವಿ ಪತ್ನಿಗೆ ನೋಟಿಸ್ ಕೊಡಲಾಗಿದೆ. ಆದರೂ ಅವರು ದಾಖಲೆಯನ್ನು ನೀಡಿಲ್ಲ.
ಸದ್ಯ ಎಲ್ಲಾ ಪ್ರಾಥಮಿಕ ಮಾಹಿತಿ ಪಡೆದು ಪರಿಶೀಲನೆ ಮಾಡುತ್ತಿರುವ ಸಿಐಡಿ ಅಧಿಕಾರಿಗಳು ಸ್ಯಾಂಟ್ರೋ ರವಿ ಪತ್ನಿ ವಿಚಾರಣೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಸ್ಯಾಂಟ್ರೋ ರವಿಯ ಎರಡೂ ಮೊಬೈಲ್ ಫೋನ್ ಗಳ ಪರಿಶೀಲನೆ ನಡೆಯುತ್ತಿದೆ. ಏನೆಲ್ಲಾ ಡೇಟಾ ಇದೆ, ಏನೆಲ್ಲಾ ಡಿಲೀಟ್ ಆಗಿದೆ ಅಂತ ಪರಿಶೀಲನೆ ಮಾಡಲಾಗುತ್ತಿದ್ದು, ಒಂದು ವೇಳೆ ಡಿಲೀಟ್ ಆಗಿದ್ದರೆ ಸೈಬರ್ ಸೆಲ್ ನಲ್ಲೇ ರಿಟ್ರೀವ್ ಮಾಡಬೇಕಾಗುತ್ತದೆ.
ಇದನ್ನೂ ಓದಿ | Santro Ravi case | ಅವಳು 2ನೇ ಪತ್ನಿಯಲ್ಲ, 10 ಲಕ್ಷ ರೂ. ಸಾಲ ಪಡೆದು ಮರಳಿಸದೆ ಸುಳ್ಳು ಆರೋಪ ಎಂದ ರವಿ ವಕೀಲರು