ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಒಡೆತನದ ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಶಾಲೆಗೆ ಎರಡು ಬಾರಿ ಬಾಂಬ್ ಬೆದರಿಕೆ ಇಮೇಲ್ ಆಗಮಿಸಿವೆ.
ಭಾನುವಾರ ಸಂಜೆ 6.30ಕ್ಕೆ ಶಾಲೆಯ ಇಮೇಲ್ ವಿಳಾಸಕ್ಕೆ ಒಂದು ಇಮೇಲ್ ಮಾಡಿರುವ ದುಷ್ಕರ್ಮಿಗಳು ಸೋಮವಾರ ಬೆಳಗ್ಗೆ 8.30ರ ಸುಮಾರಿಗೆ ಡಿ.ಕೆ. ಶಿವಕುಮಾರ್ ಪುತ್ರಿ ಐಶ್ವರ್ಯ ಇಮೇಲ್ ವಿಳಾಸಕ್ಕೆ ಮತ್ತೊಂದು ಇಮೇಲ್ ಮಾಡಿದ್ದಾರೆ. ಹುಚ್ಚ ವೆಂಕಟ್ ಎಂಬ ಐಡಿಯಿಂದ ಬಾಂಬ್ ಬೆದರಿಕೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ | ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಒಡೆತನದ ಶಾಲೆಗೆ ಬಾಂಬ್ ಬೆದರಿಕೆ
ಪೋಷಕರಿಗೆ ಕರೆ
ಶಾಲೆಗೆ ಬಾಂಬ್ ಬೆದರಿಕೆ ಬಂದ ಕೂಡಲೆ ಮಕ್ಕಳನ್ನು ಮತ್ತೊಂದು ಬ್ಲಾಕ್ಗೆ ಸ್ಥಳಾಂತರ ಮಾಡಲಾಯಿತು. ಅನೇಕ ಪೋಷಕರು ಶಾಲೆಯ ಬಳಿ ಆಗಮಿಸಲು ಮುಂದಾದರು. ಈ ಸಮಯದಲ್ಲಿ ಡಿ.ಕೆ. ಶಿವಕುಮಾರ್ ಪುತ್ರಿ ಗೇಟ್ ಬಳಿಯಲ್ಲಿ ನಿಂತು, ಮಕ್ಕಳೆಲ್ಲರೂ ಸುರಕ್ಷಿತರಾಗಿದ್ದಾರೆ, ಭಯಪಡುವ ಅಗತ್ಯವಿಲ್ಲ ಎಂದು ಧೈರ್ಯ ಹೇಳಿದರು. ಅನೇಕ ಪೋಷಕರಿಗೆ ಕರೆ ಮಾಡಿ ಸಮಾಧಾನ ಹೇಳಿದರು.
ಭದ್ರತೆ ಲೋಪವಿಲ್ಲ ಎಂದ ಶಿವಕುಮಾರ್
ಬಾಂಬ್ ಬೆದರಿಕೆ ಕುರಿತು ಇಮೇಲ್ ಬಂದಿರುವುದನ್ನು ಖಚಿತಪಡಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಇಮೇಲ್ ನೋಡಿದ ತಕ್ಷಣ ಪ್ರಾಂಶುಪಾಲರು ನಮಗೆ ತಿಳಿಸಿದ್ದಾರೆ. ಕೂಡಲೆ ಪೊಲೀಸ್ ಆಯುಕ್ತರ ಜತೆ ಮಾತನಾಡಿದೆವು, ಈಗಾಗಲೆ ಬಹುತೇಕ ತಪಾಸಣೆ ಮುಕ್ತಾಯವಾಗಿದೆ. ಶಾಲೆಯಲ್ಲಿ ಸಾಕಷ್ಟು ಭದ್ರತಾ ವ್ಯವಸ್ಥೆಯಿದೆ, ಯಾರೂ ಭಯಪಡುವ ಅಗತ್ಯವಿಲ್ಲ. ಭಾನುವಾರ ಬೇರೆ ಪರೀಕ್ಷೆಯೊಂದು ಶಾಲೆಯಲ್ಲಿ ನಡೆದಿತ್ತು, ಹೀಗಾಗಿ ಹೊರಗಿನವರು ಆಗಮಿಸಿದ್ದರು. ಸಮಸ್ಯೆ ಆಗುವುದು ಬೇಡ ಎಂದು ಪೊಲೀಸರಿಗೆ ತಿಳಿಸಿದ್ದೇವೆ. ಪೋಷಕರು ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ | ಶಾಲೆ ಬಾಂಬ್ ಬೆದರಿಕೆ: ಸಾಫ್ಟ್‌ವೇರ್ ಉದ್ಯಮಿಯಾಗಲು ಹೊರಟ ಬಾಲಕನ ಕೈಚಳಕ !