Site icon Vistara News

Sedition Case : ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ; ಮೂವರು ಆರೋಪಿಗಳಿಗೆ ಜಾಮೀನು

Sedition Law Nashipudi DS Munawar Iltaz

ಬೆಂಗಳೂರು: ಫೆ. 27ರಂದು ನಡೆದ ರಾಜ್ಯಸಭಾ ಚುನಾವಣೆಯ (Rajya Sabha Elections) ವಿಜಯೋತ್ಸವ ಸಂದರ್ಭದಲ್ಲಿ ವಿಧಾನ ಸೌಧದಲ್ಲೇ (Vidhana Soudha) ಪಾಕಿಸ್ತಾನ್‌ ಜಿಂದಾಬಾದ್‌ (Pakistan Zindabad) ಘೋಷಣೆ ಮಾಡಿದ ಪ್ರಕರಣಕ್ಕೆ (Sedition Case) ಸಂಬಂಧಿಸಿ ಬಂಧಿತರಾದ ಮೂವರಿಗೆ (Three Accused gets Bail) ಬೆಂಗಳೂರಿನ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು (ಎಸಿಎಂಎಂ) ಷರತ್ತುಬದ್ಧ ಜಾಮೀನು (Bangalore Court) ನೀಡಿದೆ.

ಬಂಧಿತರಾದ ದೆಹಲಿಯ ಕಿಶನ್‌ ಗಂಜ್‌ನ ಮೊಹಮ್ಮದ್ ಇಲ್ತಾಜ್, ಹಾವೇರಿ ಜಿಲ್ಲೆ ಬ್ಯಾಡಗಿಯ ಮೊಹಮ್ಮದ್ ಶಫಿ ನಾಶಿಪುಡಿ, ಬೆಂಗಳೂರಿನ ಜಯಮಹಲ್‌ ನಿವಾಸಿ ಡಿ.ಎಸ್‌ ಮುನಾವರ್ ಅಹ್ಮದ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು 39ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶ ವಿ ವಿಜೇತ್‌ ಪುರಸ್ಕರಿಸಿ ಜಾಮೀನು ನೀಡಿದ್ದಾರೆ.

ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸಯ್ಯದ್‌ ನಾಸೀರ್‌ ಹುಸೇನ್‌ ಅವರು ಜಯ ಗಳಿಸಿದ ಬಳಿಕ ವಿಜಯೋತ್ಸವ ಆಚರಿಸುತ್ತಿದ್ದ ಸಂದರ್ಭದಲ್ಲಿ ಕೆಲವು ವ್ಯಕ್ತಿಗಳು ಪಾಕಿಸ್ತಾನ್ ಜಿಂದಾಬಾದ್‌ ಘೋಷಣೆ ಕೂಗಿದ್ದಾರೆ ಎಂದು ಆರೋಪಿಸಲಾಗಿತ್ತು. ಕಾಂಗ್ರೆಸ್‌ ನಾಯಕರು ಆರಂಭದಲ್ಲಿ ಇದನ್ನು ನಿರಾಕರಿಸಿದ್ದರೂ ಎಫ್‌ಎಸ್‌ಎಲ್‌ ವರದಿ ಬಂದ ಬಳಿಕ ಮೂವರನ್ನು ಬಂಧಿಸಿದ್ದರು. ಇದೀಗ ಅವರಿಗೆ ಜಾಮೀನು ದೊರಕಿದೆ.

ಇದನ್ನೂ ಓದಿ : Sedition case: ನಾಸಿರ್ ಹುಸೇನ್‌ ಕ್ಷಮೆ ಕೇಳೋವರೆಗೆ ಪ್ರಮಾಣವಚನ ಬೇಡ: ಪ್ರಲ್ಹಾದ್‌ ಜೋಶಿ ಆಗ್ರಹ

ಜಾಮೀನಿಗೆ ಕೋರ್ಟ್‌ ವಿಧಿಸಿದ ಷರತ್ತುಗಳೇನು?

  1. ಆರೋಪಿಗಳು ₹1 ಲಕ್ಷ ಮೊತ್ತದ ಮುಚ್ಚಳಿಕೆ ನೀಡಬೇಕು.
  2. ಇಬ್ಬರು ವ್ಯಕ್ತಿಗಳು ಜಾಮೀನು ಒದಗಿಸಬೇಕು.
  3. ಆರೋಪಿಗಳು ದೇಶ ಬಿಟ್ಟು ಹೋಗಬಾರದು.
  4. ವಿಚಾರಣಾಧೀನ ನ್ಯಾಯಾಲಯದ ವಿಚಾರಣೆಗೆ ಹಾಜರಾಗಬೇಕು.
  5. ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಬಾರದು.

ಜಾಮೀನು ಕೊಡಲು ವಕೀಲರು ನೀಡಿದ ಕಾರಣಗಳು

ಆರೋಪಿಗಳಾದ ಮೂವರಿಗೆ ಜಾಮೀನು ನೀಡಬೇಕು ಎಂದು ಕೋರುವ ವೇಳೆ ವಕೀಲರು ಮಂಡಿಸಿದ ಅಂಶಗಳು ಇವು.

  1. ಪೊಲೀಸರು ಪ್ರಕರಣ ದಾಖಲಿಸುವ ಮುನ್ನ ಪೂರ್ವಾನುಮತಿ ಪಡೆದಿಲ್ಲ.
  2. ಆರೋಪಿಗಳಿಗೆ ಸಿಆರ್‌ಪಿಸಿ ಸೆಕ್ಷನ್‌ 41ರ ಅನ್ವಯ ನೋಟಿಸ್‌ ನೀಡಿಲ್ಲ.
  3. ಆರೋಪಿಸಲಾದ ಘೋಷಣೆಯ ಮಾದರಿಯನ್ನು ಧ್ವನಿ ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಹೀಗಾಗಿ, ಇದು ಮೇಲ್ನೋಟಕ್ಕೆ ಸಾಕ್ಷ್ಯವೇ ಇಲ್ಲದ ಪ್ರಕರಣ ಎಂಬುದು ಸಾಬೀತಾಗುತ್ತದೆ.

ರಾಜಕೀಯ ತಿರುವು ಪಡೆದ ಪ್ರಕರಣ

ವಿಧಾನ ಸೌಧದಲ್ಲಿ ಪಾಕಿಸ್ತಾನ್‌ ಜಿಂದಾಬಾದ್‌ ಕೂಗಿದ ಪ್ರಕರಣ ರಾಜಕೀಯವಾಗಿ ಭಾರಿ ತಿರುವುಗಳನ್ನು ಪಡೆದುಕೊಂಡಿತ್ತು. ಪ್ರಿಯಾಂಕ್‌ ಖರ್ಗೆ ಸೇರಿದಂತೆ ಹಲವು ಕಾಂಗ್ರೆಸ್‌ ನಾಯಕರು ಈ ರೀತಿ ಘೋಷಣೆ ಕೂಗಿದ್ದೇ ಇಲ್ಲ ಎಂಬ ರೀತಿಯಲ್ಲಿ ಹೇಳಿಕೆ ನೀಡಿದ್ದರು. ಇದನ್ನು ಬಿಜೆಪಿ ಬಲವಾಗಿ ಖಂಡಿಸಿತ್ತು. ಮಾತ್ರಲ್ಲ, ಹಿರಿಯ ವಿಧಿ ವಿಜ್ಞಾನ ತಜ್ಞ ಡಾ. ಫಣೀಂದ್ರ ಅವರು ಖಾಸಗಿಯಾಗಿ ಮಾಡಿದ ಘೋಷಣೆ ಸನ್ನಿವೇಶದ ಎಫ್‌ಎಸ್‌ಎಲ್‌ ವರದಿಯನ್ನು ಮುಂದಿಟ್ಟು ಕಾಂಗ್ರೆಸ್‌ ನಾಯಕರನ್ನು ತರಾಟೆಗೆ ತೆಗೆದುಕೊಂಡಿತು. ಅಂತಿವಾಗಿ ರಾಜ್ಯ ಸರ್ಕಾರವೂ ಇದನ್ನು ಒಪ್ಪಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿತು.

Exit mobile version