ಬೆಂಗಳೂರು: ಬಿಎಸ್ಸಿ ಓದಿಕೊಂಡಿದ್ದ ಆ ಹರಿಹರೆಯದ ಯುವಕನಿಗೆ ಬೈಕ್ ಅಂದರೆ ಪಂಚಪ್ರಾಣ. ಆದರೆ ಸ್ಥಿತಿವಂತಿಕೆ ಇಲ್ಲದ ಕಾರಣ ಬೈಕ್ ಖರೀದಿಸಲು ಆಗಿರಲಿಲ್ಲ. ಅದೇ ಕಾರಣಕ್ಕೆ ತಾಳ್ಮೆ ಕಳೆದುಕೊಂಡು ದುಡುಕಿ ತನ್ನ ಪ್ರಾಣವನ್ನೇ (Self Harming) ಕಳೆದುಕೊಂಡಿದ್ದಾನೆ. ಅಯ್ಯಪ್ಪ (20) ಮೃತ ದುರ್ದೈವಿ.
ತಮಿಳುನಾಡು ಮೂಲದ ಅಯ್ಯಪ್ಪ ತನ್ನ ತಾಯಿ ಜತೆಗೆ ಬೆಂಗಳೂರಲ್ಲೇ ಬಂದು ನೆಲೆಸಿದ್ದ. ಥಣಿಸಂದ್ರದಲ್ಲಿ ಸಣ್ಣದೊಂದು ಮನೆ ಮಾಡಿಕೊಂಡು ವಾಸವಿದ್ದರು. ಆರು ವರ್ಷಗಳ ಹಿಂದಷ್ಟೇ ಅಯ್ಯಪ್ಪ ತಂದೆ ತೀರಿ ಹೋಗಿದ್ದರು. ತಾಯಿ ಹೌಸ್ ಕೀಪಿಂಗ್ ಕೆಲಸ ಮಾಡಿಕೊಂಡು ಮಗನನ್ನು ಓದಿಸುತ್ತಿದ್ದರು. ಖಾಸಗಿ ಕಾಲೇಜಿನಲ್ಲಿ ಎರಡನೇ ವರ್ಷದ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದ ಅಯ್ಯಪ್ಪಗೆ ಇತ್ತೀಚಿಗೆ ಬೈಕ್ ಕ್ರೇಜ್ ಹೆಚ್ಚಾಗಿತ್ತು. ಬೈಕ್ ಕೊಡಿಸುವಂತೆ ಅಮ್ಮನ ಹಿಂದೆ ಬಿದ್ದಿದ್ದ, ಆದರೆ ಬೈಕ್ ಕೊಡಿಸಲಿಲ್ಲ ಎಂಬ ಕಾರಣಕ್ಕೆ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸೆಪ್ಟೆಂಬರ್ 11 ರ ಮಂಗಳವಾರ ಅಯ್ಯಪ್ಪ ತಾಯಿ ಬೆಳಗ್ಗೆ 6 ಗಂಟೆಗೆ ಕೆಲಸಕ್ಕೆಂದು ಹೋಗಿದ್ದರು. ಸಂಜೆ 4:30ರ ಸುಮಾರಿಗೆ ಮನೆಗೆ ವಾಪಸ್ ಆಗಿದ್ದ ಅವರಿಗೆ ಶಾಕ್ ಆಗಿದ್ದರು. ಯಾಕಂದರೆ ಎದೆ ಎತ್ತರಕ್ಕೆ ಬೆಳೆದು ನಿಂತಿದ್ದ ಮಗ ನೇಣು ಕುಣಿಕೆಯಲ್ಲಿ ನೇತಾಡ್ತಿದ್ದ. ಇದರಿಂದ ಗಾಬರಿಗೊಂಡ ತಾಯಿ ಸಂಬಂಧಿಕರಿಗೆ ತಿಳಿಸಿದ್ದಾರೆ. ಸಂಬಂಧಿಕರು ಬಂದು ಹೆಣ್ಣೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮೃತದೇಹ ಕೆಳಗೆ ಇಳಿಸಿ ಮರಣೋತ್ತರ ಪರೀಕ್ಷೆಗಾಗಿ ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಿದ್ದಾರೆ.
ಆಸರೆ ಆಗಬೇಕಿದ್ದ ಮಗನ ಕಳೆದುಕೊಂಡ ತಾಯಿ
ಅಷ್ಟಕ್ಕೂ ಅಯ್ಯಪ್ಪ ಆತ್ಮಹತ್ಯೆಗೆ ಕಾರಣ ಬೈಕ್. ಕಾಲೇಜಿಗೆ ಬರುವ ಎಲ್ಲ ಹುಡುಗರಂತೆಯೇ ನಾನು ಬೈಕ್‌ನಲ್ಲಿ ಬರಬೇಕು. ಬೈಕ್‌ನಲ್ಲಿ ಸುತ್ತಾಡಬೇಕು ಎಂಬ ಆಸೆ ಹೊಂದಿದ್ದ. ಹೀಗಾಗಿಯೇ ತನ್ನ ತಾಯಿಗೆ ಕಳೆದ ಎರಡು ತಿಂಗಳಿಂದ ಬೈಕ್ ಬೇಕು ಎಂದು ಕೇಳುತ್ತಲೇ ಇದ್ದ. ಆದರೆ ಒಬ್ಬಂಟಿಯಾಗಿ ದುಡಿಯುತ್ತಿದ್ದ ಆ ತಾಯಿಗೆ ಅಷ್ಟು ಹಣ ಹೊಂದಿಸುವುದು ಕಷ್ಟವಾಗಿತ್ತು. ಹಾಗಾಗಿ ಸ್ವಲ್ಪ ದಿನ ಕಾಯುವಂತೆ ಹೇಳಿದ್ದರು. ಆದರೂ ಬೆಂಬಿಡದೇ ಬೈಕ್‌ಗಾಗಿ ಹಠ ಮಾಡಿದ್ದ.
ಯಾವಾಗ ಮಗನ ಹಠ ಜಾಸ್ತಿ ಆಯಿತೋ ಬೈಕ್ ಕೊಡಿಸಿಬಿಡೋಣ ಅಂತಾ ಮಗನಿಗೆ ಗೊತ್ತಿಲ್ಲದಂತೆ ಸಾಲ ಮಾಡಿ 50 ಸಾವಿರ ಹೊಂದಿಸಿದ್ದರು. ಆದರೆ ಈ ವಿಚಾರ ಗೊತ್ತಿಲ್ಲದ ಅಯ್ಯಪ್ಪ, ನಿನ್ನೆ ಬುಧವಾರ ಕಾಲೇಜಿಗೆ ಹೋಗದೇ ಮನೆಯಲ್ಲೇ ಇದ್ದ. ಆತನ ತಲೆಗೆ ಅದ್ಯಾವ ಆಲೋಚನೆ ಬಂತೋ ಏನೋ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇತ್ತ ಮಗನ ಮೃತದೇಹ ಇದ್ದ ಅಂಬೇಡ್ಕರ್ ಆಸ್ಪತ್ರೆಗೆ ಆಗಮಿಸಿದ್ದ ತಾಯಿ ಕಣ್ಣೀರು ಹಾಕಿ ಗೋಳಾಡಿದ್ದರು. ಕೊನೆಗಾಲದಲ್ಲಿ ಆಸರೆ ಆಗಬೇಕಿದ್ದ ಮಗನನ್ನು ಕಳೆದುಕೊಂಡು ಒಂಟಿಯಾಗಿದ್ದಾರೆ. ಸದ್ಯ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ