ಬೆಂಗಳೂರು: ನನ್ನ ರಾಜಕೀಯ ಜೀವನದಲ್ಲಿ ಪ್ರತಿಪಕ್ಷ ನಾಯಕನ ಜತೆಗೆ ಮಾತೇ ಆಡಲ್ಲ, ಅಂತಹದ್ದರಲ್ಲಿ ಪ್ರತಾಪ್ ಸಿಂಹ ಈ ರೀತಿ ಮಾತಾಡಿರುವುದು ಎಳಸುತನ ತೋರಿಸುತ್ತದೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿಯ ಕೆಲ ಅತಿರಥಮಹಾರಥರು ಕಾಂಗ್ರೆಸ್ ಜತೆಗೆ ಹೊಂದಾಣಿಕೆ ಮಾಡಿಕೊಂಡಿದ್ದರು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಕ್ಕೆ ಸಿಎಂ ಸಿದ್ದರಾಮಯ್ಯ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಪ್ರತಾಪ್ ಸಿಂಹ ಹೇಳಿದ ತಕ್ಷಣ ತನಿಖೆ ಮಾಡ್ಸೋಕ್ಕಾಗುತ್ತಾ? ಪ್ರತಾಪ್ ಸಿಂಹ ತನಿಖೆ ಮಾಡಿ ಅಂತ ಆಗ ಹೇಳಿದ್ನಾ? ನಾವು ಯಾವಾಗ ತನಿಖೆ ಮಾಡಿಸಬೇಕು, ಯಾರಿಂದ ತನಿಖೆ ಮಾಡಿಸಬೇಕು ಅಂತ ನಮಗೆ ಗೊತ್ತು. ಅವನಿಗೆ ಗೊತ್ತಿಲ್ಲ. ಬಿಜೆಪಿಯಲ್ಲಿ ಯಾರು ಹೊಂದಾಣಿಕೆ ರಾಜಕೀಯ ಮಾಡೋರು ಅಂತ ಹೇಳಲಿ ಅವನು. ಅವನಿಗೆ ಗೊತ್ತಿರಬೇಕಲ್ಲ ಬಿಜೆಪಿಯಲ್ಲಿ ಯಾರು ಅಂತ?
ಪ್ರತಾಪ್ ಸಿಂಹ ಹೆಸರು ಹೇಳಲಿ. ನಾನು ನನ್ನ ರಾಜಕೀಯ ಜೀವನದಲ್ಲಿ ವಿಪಕ್ಷ ನಾಯಕರ ಜತೆ ಮಾತೇ ಆಡಲ್ಲ. ಪ್ರತಾಪ್ ಸಿಂಹಗೆ ಗೊತ್ತಿದ್ರೆ ಅವರ ಹೆಸರು ಹೇಳಲಿ. ಪ್ರತಾಪ್ ಸಿಂಹ ಎಳಸು, ಅವನಿಗೆ ರಾಜಕೀಯದ ಪಕ್ವತೆ ಇಲ್ಲ. ಬಾಯಿಗೆ ಬಂದಂತೆ ಏನೇನೋ ಮಾತಾಡ್ತಾನೆ ಅವನು. ದಶಪಥ ರಸ್ತೆ ನಾನೇ ಮಾಡಿಸಿದೆ ಅಂತಾನೆ ಅವನು. ಅವನು ಅಲ್ಲಿಗೆ ಎಂಪಿನಾ?
ನಾನು ಅಧಿಕಾರದಲ್ಲಿರುವಾಗ ವಿಪಕ್ಷದವರ ಜತೆ ಮಾತಾಡಲ್ಲ, ಅವರ ಮನೆಗೂ ಹೋಗಲ್ಲ ನಾನು. ಅವರೇ ಏನಾದರೂ ಬಂದರೆ ಸೌಜನ್ಯಕ್ಕೆ ಮಾತಾಡ್ತೀನಿ ಹೊರತು ರಾಜಕೀಯ ಮಾತಾಡಲ್ಲ. ನಾನಾಗಿ ನಾನು ವಿರೋಧ ಪಕ್ಷದವರನ್ನು ಫೋನೂ ಮಾಡಲ್ಲ, ಗೊತ್ತಾಯ್ತಾ? ಎಂದಿದ್ದಾರೆ.
ಇದನ್ನೂ ಓದಿ: BJP Karnataka: ಪ್ರತಾಪ್ ಸಿಂಹ ʼತುರಿಕೆʼ ಮಾತಿನಿಂದ ಬಿಜೆಪಿಯಲ್ಲಿ ಕಸಿವಿಸಿ: ಜಾರಿಕೊಂಡ ಸಿ.ಟಿ. ರವಿ, ಪೂಜಾರಿ!