ವಿಧಾನಸಭೆ: ಬೆಂಗಳೂರಿನಲ್ಲಿ ಮಳೆಯಿಂದುಂಟಾದ ಹಾನಿಯ ಕುರಿತು ಚರ್ಚೆಯ ವೇಳೆಯಲ್ಲಿ ವಿಶೇಷ ಚರ್ಚೆಯೊಂದು ನಡೆಯಿತು. ಮಳೆ ಹಾನಿ ಪ್ರದೇಶಗಳಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ನೀಡಿದಾಗ ಬೋಟ್‌ನಲ್ಲಿ ಹೋದದ್ದೇಕೆ? ನಿಜಕ್ಕೂ ಅಲ್ಲಿ ಎಷ್ಟು ಅಡಿ ನೀರಿತ್ತು ಎಂಬ ಚರ್ಚೆ ಅನೇಕ ಹೊತ್ತು ನಡೆಯಿತು.
ನಿಯಮ 60ರ ಅಡಿಯಲ್ಲಿ ಮಳೆ ಹಾನಿ ಕುರಿತು ನಿಲುವಳಿ ಸೂಚನೆ ಮಂಡನೆಗೆ ಅವಕಾಶ ನೀಡುವಂತೆ ಸಿದ್ದರಾಮಯ್ಯ ಪತ್ರ ಬರೆದಿದ್ದರು. ಈ ಕುರಿತು ಚರ್ಚೆಗೆ ಜೆಡಿಎಸ್‌ನವರೂ ಅವಕಾಶ ಕೇಳಿದ್ದು, ನಿಯಮ 69ರ ಅಡಿಯಲ್ಲಿ ಎಲ್ಲರೂ ಚರ್ಚೆ ಮಾಡೋಣ ಎಂದು ಸ್ಪೀಕರ್ ಕಾಗೇರಿ ಹೇಳಿದರು.
ನಮ್ಮ ಹಕ್ಕನ್ನು ಈ ಮೂಲಕ ಮೊಟಕುಗೊಳಿಸಿದ್ದೀರ ಎನ್ನುತ್ತಲೇ ಚರ್ಚೆಗೆ ಸಿದ್ದರಾಮಯ್ಯ ಒಪ್ಪಿದರು. ಈ ಸಂದರ್ಭದಲ್ಲಿ ಮಾತನಾಡುತ್ತ, ಸೆಪ್ಟೆಂಬರ್ 8ರಂದು ಬೆಂಗಳೂರಿನಲ್ಲಿ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದ್ದೆ. ಅದ್ಯಾವುದೋ, ಸಿಇಒಗಳು ಗಣ್ಯರು ಇದ್ದಾರಲ್ಲ ಅಲ್ಲಿಗೂ ಹೋಗಿದ್ದೆ. ಅಲ್ಲಿ ನಡೆದುಕೊಂಡು ಹೋಗೋಕೇ ಆಗಲ್ಲ, ಬೋಟ್‌ನಲ್ಲೇ ಹೋದೆ ಎಂದರು.
ಮಧ್ಯಪ್ರವೇಶಿಸಿದ ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ, ನೀವು ಹೋಗಿದ್ದು ಎಪ್ಸಿಲಾನ್ ಎಂಬ ಖಾಸಗಿ ಲೇಔಟ್. ಅಲ್ಲಿನ ಬಿಲ್ಡರ್ ಮಾಡಿದ ತಪ್ಪಿನಿಂದ ನೀರು ನಿಂತಿತ್ತು. ಆದರೆ ಅಲ್ಲಿಗೆ ಬೋಟ್‌ನಲ್ಲಿ ಹೋಗೊ ಅಗತ್ಯ ಇರಲಿಲ್ಲ. ಸಿಎಂ ಇದೇ ಪ್ರದೇಶಕ್ಕೆ ಹೋದಾಗ ನಡೆದುಕೊಂಡೇ ಪರಿಶೀಲನೆ ನಡೆಸಿದರು ಎಂದರು.
ಸಿದ್ದರಾಮಯ್ಯ ಅವರನ್ನು ಇಕ್ಕಟ್ಟಿಗೆ ಸಿಲುಕಿಸಲು ಇದೇ ಅವಕಾಶ ಎಂದುಕೊಂಡ ಸಿಎಂ ಬೊಮ್ಮಾಯಿ, ಮೊಣಕಾಲು ಉದ್ದ ಇದ್ದ ನೀರಲ್ಲಿ ಬೋಟ್‌ನಲ್ಲಿ ಹೋಗಿದ್ದೀರ. ಒಂದೂವರೆ ಅಡಿ ನೀರಿನಲ್ಲಿ ಅದ್ಯಾವ ಪುಣ್ಯಾತ್ಮ ಬೋಟ್‌ನಲ್ಲಿ ಕರೆದುಕೊಂಡು ಹೋದನೋ ಎಂದರು.
ಒಂದೂವರೆ ಅಡಿ ನೀರಿನಲ್ಲಿ ಬೋಟ್‌ನಲ್ಲಿ ಹೋಗಿದ್ದರೆ ನೀವು ಹೇಳಿದಂತೆ ಕೇಳುತ್ತೇನೆ ಎಂದರು ಸಿದ್ದರಾಮಯ್ಯ. ಸಿಎಂ ಬೊಮ್ಮಾಯಿ ಮಾತನಾಡಿ, ನಾವು ಎಮರ್ಜೆನ್ಸಿಯಲ್ಲಿ ಜನರ ಬಳಕೆಗೆ ಬೋಟ್ ಇಟ್ಟಿರುತ್ತೇವೆ. ನಿಮ್ಮನ್ನು ಯಾರೋ ದಾರಿ ತಪ್ಪಿಸಿದ್ದಾರೆ. ಅಲ್ಲಿ ನಾನು ನಡೆದುಕೊಂಡೇ ಹೋಗಿದ್ದೆ ಎಂದರು.
ಬಹುಶಃ ಪಂಚೆ ತೊಟ್ಟಿದ್ದರಿಂದಾಗಿ, ಒದ್ದೆ ಆಗಬಾರದು ಎಂದು ಬೋಟ್‌ನಲ್ಲಿ ಹೋಗಿರಬಹುದು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು. ಸಿಎಂ ಬೊಮ್ಮಾಯಿ ಅವರಿಗೆ ಇನ್ನೂ ವಯಸ್ಸಿದೆ ಅವರು ನಡೆದು ಹೋಗಿದ್ದಾರೆ, ಬಹುಶಃ ನಿಮ್ಮ ಅನುಕೂಲಕ್ಕೆ ಬೋಟ್‌ನಲ್ಲಿ ಹೋಗಿದ್ದೀರ ಎಂದು ಲಿಂಬಾವಳಿ ಕಾಲೆಳೆದರು. ಒಂದೂವರೆ ಅಡಿ ನೀರಿತ್ತು ಎನ್ನೋದು ಸುಳ್ಳು, 4 ಅಡಿ ಇತ್ತು ಎಂದು ಕಾಂಗ್ರೆಸ್ ಶಾಸಕ ರಾಮಲಿಂಗಾರೆಡ್ಡಿ ಹೇಳಿದರು.
ಅದ್ಯಾಕೊ ಚರ್ಚೆ ತಮ್ಮನ್ನೇ ಸುತ್ತಿಕೊಳ್ಳುತ್ತಿದೆ ಎಂದು ಅರಿತ ಸಿದ್ದರಾಮಯ್ಯ, ಅಲ್ಲಿ ಹಿಂದೆ 10-12 ಅಡಿ ನೀರಿತ್ತು, ನಾನು ಹೋದಾಗ 4-5 ಅಡಿ ನೀರಿತ್ತು. ನಾನು ಬೋಟ್‌ನಲ್ಲಿ ಹೋಗಿದ್ದೆ, ಅವರು ಮೋಟರ್ ಆನ್ ಮಾಡಿ ಮುಂದಕ್ಕೆ ಕರೆದೊಯ್ದರು. ಬೋಟ್ ಮುಂದಕ್ಕೆ ಹೋಗಿದೆ ಎಂದ ಮೇಲೆ ನೀರು ಇರಲೇ ಬೇಕು ಎಂದು ಭೌತಶಾಸ್ತ್ರದ ಮಾತನ್ನಾಡಿದರು. ಕೊನೆಗೆ, ಇದು ಚರ್ಚೆಯ ವಿಷಯವೇ ಅಲ್ಲ ಬಿಡಿ ಎಂದು ಚರ್ಚೆಗೆ ತೆರೆ ಎಳೆದರು.
ಇದನ್ನೂ ಓದಿ | ಕೃಷ್ಣ ಬೈರೇಗೌಡರಿಗೆ ಸಿಎಂ ರಾಜಕೀಯ ʼಮಾರ್ಗದರ್ಶಕʼ?: ಚರ್ಚೆಯಿಂದ ಹಿಂದೆ ಸರಿದ ಬೊಮ್ಮಾಯಿ