ಬೆಂಗಳೂರು: ತನ್ನ ಜಮೀನನ್ನು ಕಬಳಿಸಲು ಸುಧೀರ್ ರೆಡ್ಡಿ ಎನ್ನುವವರು ಪ್ರಯತ್ನಿಸುತ್ತಿದ್ದು, ಪತ್ನಿ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಯವರಿಂದ ಸಹಾಯವನ್ನು ಪಡೆದು ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಖ್ಯಾತ ಬಾಲಿವುಡ್ ಗಾಯಕ ಹಾಗೂ ನಟ ಲಕ್ಕಿ ಅಲಿ ಆರೋಪಿಸಿದ್ದಾರೆ.
ಬೆಂಗಳೂರನ್ನು ಸ್ವಚ್ಛವಾಗಿ ಇರಿಸಿಕೊಳ್ಳುವ ಸಲುವಾಗಿ 2020ರಲ್ಲಿ ಬಿಬಿಎಂಪಿ ಆರಂಭಿಸಿದ ಅಭಿಯಾನಕ್ಕೆ ಲಕ್ಕಿ ಅಲಿ ಬೆಂಬಲ ಸೂಚಿಸಿದ್ದರು. ಜೊತೆಯಾಗಿ ಎಂಬ ಧ್ಯೇಯ ಗೀತೆಯನ್ನು ಹಾಡಿದ್ದರು.
ತಮ್ಮ ಟ್ವಿಟರ್ ಖಾತೆಯ ಮೂಲಕ ಸರಣಿ ಟ್ವೀಟ್ ಮಾಡಿರುವ ಲಕ್ಕಿ ಅಲಿ, ಕರ್ನಾಟಕ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರನ್ನು ಟ್ಯಾಗ್ ಮಾಡಿ ಮನವಿ ಮಾಡಿದ್ದಾರೆ. ಅವರು ಇಂಗ್ಲಿಷ್‌ನಲ್ಲಿ ಭಾನುವಾರ ಮಾಡಿರುವ ಒಟ್ಟು ಟ್ವೀಟ್ ಸಾರಾಂಶ ಈ ರೀತಿ ಇದೆ.
ನನ್ನ ಹೆಸರು ಮಕ್ಸೂದ್ ಮಹಮೂದ್ ಅಲಿ(ಲಕ್ಕಿ ಅಲಿ). ನಮ್ಮ ತಂದೆ, ಖ್ಯಾತ ಹಾಸ್ಯ ನಟ ದಿವಂಗತ ಮೆಹಮೂದ್ ಅಲಿ. ನನ್ನ ಕೆಲಸಕ್ಕಾಗಿ ಸದ್ಯ ದುಬೈನಲ್ಲಿದ್ದೇನೆ ಹಾಗಾಗಿ ಇಲ್ಲಿ ಟ್ವೀಟ್ ಮಾಡುತ್ತಿದ್ದೇನೆ. ಟ್ರಸ್ಟ್ ಆಸ್ತಿಯಾಗಿರುವ ನನ್ನ ಫಾರ್ಮ್ ಯಲಹಂಕದ ಕೆಂಚೇನಹಳ್ಳಿಯಲ್ಲಿದ್ದು, ಬೆಂಗಳೂರಿನ ಭೂ ಮಾಫಿಯಾದಿಂದ ಸದ್ಯ ಸುಧೀರ್ ರೆಡ್ಡಿ (ಹಾಗೂ ಮಧು ರೆಡ್ಡಿ) ಅವರಿಂದ ಒತ್ತುವರಿಯಾಗುತ್ತಿದೆ. ಪತ್ನಿ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರಿಂದ ಪತಿ ಸುಧೀರ್ ರೆಡ್ಡಿ ಸಹಾಯ ಪಡೆಯುತ್ತಿದ್ದಾರೆ.\
ತಮ್ಮ ವೈಯಕ್ತಿಕ ಲಾಭಕ್ಕಾಗಿ ಇವರು ರಾಜ್ಯದ ಸಂಪನ್ಮೂಲವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇವರು ಒತ್ತಾಯಪೂರ್ವಕವಾಗಿ ಹಾಗೂ ಅನಧಿಕೃತವಾಗಿ ನನ್ನ ಫಾರ್ಮ್‌ಗೆ ಬರುತ್ತಾರೆ ಹಾಗೂ ಯಾವುದೇ ಸೂಕ್ತ ದಾಖಲೆಗಳನ್ನೂ ತೋರಿಸುವುದಿಲ್ಲ. ಕಳೆದ ಐವತ್ತು ವರ್ಷದಿಂದ ನಾವಲ್ಲಿ ವಾಸಿಸುತ್ತಿದ್ದೇವೆ ಹಾಗೂ ಆಸ್ತಿಯು ನಮ್ಮ ಸ್ವಾಧೀನಾನುಭವದಲ್ಲಿ ಇರುವುದರಿಂದ ಹೀಗೆ ಒಳಗೆ ಆಗಮಿಸುವುದು ಸಂಪೂರ್ಣ ಕಾನೂನುಬಾಹಿರ ಎಂದು ನಮ್ಮ ವಕೀಲರು ಮಾಹಿತಿ ನೀಡಿದ್ದಾರೆ. ದುಬೈಗೆ ತೆರಳುವ ಮುನ್ನ ತಮ್ಮನ್ನು ಭೇಟಿ ಮಾಡಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಫಾರ್ಮ್ ವ್ಯಾಪ್ತಿಯ ಎಸಿಪಿಗೆ ದೂರು ನೀಡಿದರೂ ಯಾವುದೇ ಸ್ಪಂದನೆ ಇಲ್ಲ.
ಸ್ಥಳೀಯ ಪೊಲೀಸರಿಂದ ಯಾವುದೇ ಸಹಾಯ ದೊರಕುತ್ತಿಲ್ಲ. ಹಾಗೆ ನೋಡಿದರೆ ಅವರೇ ಒತ್ತುವರಿದಾರರಿಗೆ ಸಹಾಯ ಮಾಡುತ್ತಿದ್ದಾರೆ. ಡಿಸೆಂಬರ್ 7ರಂದು ನ್ಯಾಯಾಲಯದಲ್ಲಿ ಅಂತಿಮ ಆದೇಶವಾಗುವುದಕ್ಕೂ ಮುನ್ನವ, ತಮ್ಮ ಸ್ವಾಧೀನದಲ್ಲಿದೆ ಎಂದು ತೋರಿಸಿಕೊಳ್ಳುವ ಈ ಅನಧಿಕೃತ ಚಟುವಟಿಕೆಯನ್ನು ತಡೆಯಬೇಕು. ಸಾರ್ವಜನಿಕವಾಗಿ ಹೇಳುವುದನ್ನು ಬಿಟ್ಟು ನನಗೆ ಬೇರೆ ದಾರಿ ಇರಲಿಲ್ಲ, ದಯಮಾಡಿ ಸಹಾಯ ಮಾಡಿ ಎಂದು ಲಕ್ಕಿ ಅಲಿ ಹೇಳಿದ್ದಾರೆ.
ಇದನ್ನೂ ಓದಿ | ಶ್ರೀರಾಮುಲು ವಿರುದ್ಧ ಭೂ ಕಬಳಿಕೆ ಆರೋಪ; ಸಂಪುಟದಿಂದ ಕೈಬಿಡಿ ಎಂದ ಎಸ್.ಆರ್.ಹಿರೇಮಠ್