Site icon Vistara News

ನಾನು ಮುಸ್ಲಿಮರ ಮತ ಕೇಳಿಲ್ಲ, ಅವರು BJPಗೆ ವೋಟ್‌ ಹಾಕುವುದೂ ಇಲ್ಲ: ವಿ. ಸೋಮಣ್ಣ ಹೀಗೆ ಹೇಳಿದ್ದೇಕೆ?

Karnataka Election 2023: V Somanna lures JDS candidate with Rs 50 lakh; Complaint registered

ಬೆಂಗಳೂರು: ತಾವು ಮುಸ್ಲಿಮರ ಮತವನ್ನು ಕೇಳಿಲ್ಲ, ಅವರು ಬಿಜೆಪಿಗೆ ಮತವನ್ನು ನೀಡುವುದೂ ಇಲ್ಲ ಎಂದು ಗೋವಿಂದರಾಜನಗರ ಶಾಸಕ ಹಾಗೂ ವಸತಿ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.

ತಮ್ಮ ವಿಧಾನಸಭಾ ಕ್ಷೇತ್ರದ ಮೈದಾನದಲ್ಲಿ ಸಚಿವರೇ ಈದ್ಗಾ ಗೋಡೆ ನಿರ್ಮಿಸಿಕೊಟ್ಟಿದ್ದಾರೆ ಎಂಬ ಕುರಿತು ವಿವಾದವಾಗಿದೆ. ಹಿಂದುತ್ವದ ಜಪ ಮಾಡುವ ಬಿಜೆಪಿ ಬಿಜೆಪಿ ಶಾಸಕರು ಹಿಂದುಗಳಿಗೆ ಮಂಕುಬೂದಿ ಎರಚಿ ಚುನಾವಣೆ ಗಿಮಿಕ್‌ ಮಾಡುತ್ತಿದ್ದಾರೆ. ಚುನಾವಣೆ ಬರುತ್ತಿದ್ದಂತೆ ಮುಸ್ಲಿಂ ಬಾಂಧವರ ನೆರವಿಗೆ ಹೋಗುತ್ತಾರೆ. ಸುಮಾರು 30 ಸಾವಿರ ಮುಸ್ಲಿಂ ಮತದಾರರ ಓಲೈಕೆಗೆ ಸ್ಥಳೀಯ ಬಿಜೆಪಿ ಶಾಸಕ ಸೋಮಣ್ಣ ಈ ನಾಟಕ ನಡೆಸಿದ್ದಾರೆ ಎಂದು ವಿಶ್ವ ಸನಾತನ ಪರಿಷತ್ತು ಅಧ್ಯಕ್ಷ ಎಸ್. ಭಾಸ್ಕರನ್ ಆರೋಪ ಮಾಡಿದ್ದರು. ಈ ಕುರಿತು ಸೋಮಣ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಚಂದ್ರಾ ಲೇಔಟ್‌ನ ಚಂದ್ರಗಿರಿ ಪಾರ್ಕ್‌ನಲ್ಲಿ ಈದ್ಗಾ ಗೋಡೆ ನಿರ್ಮಾಣ ಮಾಡಲಾಗಿದೆ. 1982ರಲ್ಲಿ 78 ಎಕರೆ ಭೂ ಸ್ವಾಧೀನ ಆಗಿತ್ತು, ಆಗ ಉತ್ತರಹಳ್ಳಿ ಕ್ಷೇತ್ರ ಇತ್ತು. ಆಗ ಈದ್ಗಾ ಮೈದಾನಕ್ಕೆ ‌ಕಾಯ್ದಿರಿಸಲಾಗಿದೆ ಎಂದು ಡಿಸಿ ಪತ್ರ ಬರೆದಿದ್ದರು. ನಂತರ 1.20 ಗುಂಟೆ ಜಾಗವನ್ನು ಬಿಡಿಎ ಷರತ್ತಿನ ಮೇಲೆ ವಕ್ಫ್ ಬೋರ್ಡ್‌ಗೆ ಹಸ್ತಾಂತರ ಮಾಡಿದ್ದರು. ನೋಂದಣಿ ಶುಲ್ಕ ಮನ್ನಾ ಮಾಡುವಂತೆ ಅಂದಿನ‌ ಶಾಸಕರಾಗಿದ್ದ ಅಶೋಕ್ ಅವರಿಗೆ ಮುಸ್ಲಿಂ ಸಮುದಾಯ ಕೇಳಿತ್ತು. 2012ರಲ್ಲಿ ಅಶೋಕ್ ಅವರು ಸಿಎಂಗೆ ಪತ್ರ ಬರೆದು ನೋಂದಣಿ ಶುಲ್ಕ ಮನ್ನ ಮಾಡಿಕೊಡುವಂತೆ ಕೇಳಿದ್ದರು. ಫೀಸ್ ಕಟ್ಟಲಿಲ್ಲ, ಅದು ಹಾಗೆಯೇ ಉಳಿಯಿತು ಎಂದರು.

ನಾನು ಇವರ ಯಾರ ಮತವನ್ನೂ ಕೇಳಿದವನು ಅಲ್ಲ. ಅವರು ನಮಗೆ ಮತ ಹಾಕಿದವರೂ ಅಲ್ಲ. ಮೊನ್ನೆ ಶಾದಿ ಮಹಲ್ ನಿರ್ಮಾಣ ಕಾರ್ಯದಲ್ಲಿ, ಸರ್ಕಾರದ ಕಾರ್ಯಕ್ರಮಕ್ಕೆ ನಾನು ಹೋಗಿದ್ದೆ. ನಮ್ಮ ಕ್ಷೇತ್ರದಲ್ಲಿ ಸಾಕಷ್ಟು ಮುಸಲ್ಮಾನರು ಇದ್ದಾರೆ. ನಾನು ಮಾನವೀಯತೆಯಿಂದ ಕೆಲವು ಕೆಲಸ ಮಾಡಿಕೊಟ್ಟೆ ಎಂದು ಕೆಲವು ತಿಳಿಗೇಡಿಗಳು ಈ ರೀತಿ ಮಾತಾಡಿದ್ದಾರೆ.

ಈದ್ಗಾ ಮೈದಾನ ಗೋಡೆ ಬಿದ್ದು ಹೋಗುತ್ತದೆ ಎಂದು ಸರ್ಕಾರದ ದುಡ್ಡಲ್ಲಿ ಗೋಡೆ ಮಾಡಿಸಿದ್ದೇನೆ. ಎಲ್ಲವೂ ದಾಖಲೆಯಲ್ಲಿ ಇದೆ. ಮುಸಲ್ಮಾನರು ಕೂಡಾ ದೇಶದಲ್ಲಿ ವಾಸ ಮಾಡಲು, ಭಾವನೆ ವ್ಯಕ್ತಪಡಿಸಲು ಅವಕಾಶ ಇದೆ. ಮೂಲಭೂತ ಸೌಕರ್ಯ ಕೊಟ್ಟೆವು ಎಂದು ಈ ರೀತಿ ಚಿಲ್ಲರೆ ಕೆಲಸ ಮಾಡೋದು ಬಿಡಬೇಕು. ನಾನು ಗೋಡೆ ಕಟ್ಟಿ ಕೊಟ್ಟಿರೋದು ಮಾನವೀಯತೆಯ ದೃಷ್ಟಿಯಿಂದ. ನಾನು ಯಾರಿಗೂ ಸ್ವಂತಕ್ಕೆ ಕಟ್ಟಿಕೊಟ್ಟಿಲ್ಲ. ಕೇವಲ ಹಿಂದುಗಳಿಗೆ ಸೂರು ಕೊಡಿ ಎಂದು ಮೋದಿ ಹೇಳಿಲ್ಲ. ಪ್ರತಿಯೊಬ್ಬರಿಗೂ ಸೂರು ಕೊಡಿ ಎಂದು ಹೇಳಿದ್ದಾರೆ. ನಮ್ಮ ಕ್ಷೇತ್ರದ ಮುಸಲ್ಮಾನರಲ್ಲಿ ೯೦% ಅವಿದ್ಯಾವಂತರು ಇದ್ದಾರೆ. ನಾನು ಈವರೆಗೆ ಅವರ ಮತ ಕೇಳುವುದಕ್ಕೇ ಹೋಗಿಲ್ಲ. ಮುಸಲ್ಮಾನರು ಬಿಜೆಪಿಗೆ ಮತ ಹಾಕಿದರೆ ಖುಷಿ ಪಡುವವರಲ್ಲಿ ನಾನು ಮೊದಲಿಗ ಎಂದಿದ್ದಾರೆ.

ಇದನ್ನೂ ಓದಿ | ಈದ್ಗಾ ಮೈದಾನದಲ್ಲಿ ಗಣೇಶ | ಹುಬ್ಬಳ್ಳಿಯಲ್ಲಿ ಬೃಹತ್‌ ಮೆರವಣಿಗೆ; ಮೂರು ದಿನಗಳ ಉತ್ಸವಕ್ಕೆ ಭವ್ಯ ತೆರೆ

Exit mobile version