ಬೆಂಗಳೂರು: ಕರ್ನಾಟಕದ ಜನಜೀವನ, ಆಡಳಿತದ ಕುರಿತು ಚರ್ಚೆ ನಡೆಸುವ ಸಲುವಾಗಿ ನಡೆಯುವ ವಿಧಾನಮಂಡಲ ಅಧಿವೇಶನದಲ್ಲಿ ಭಾಗವಹಿಸಲು ಸದಸ್ಯರಿಗೆ ಆಸಕ್ತಿ ಇಲ್ಲ ಎನ್ನುವುದು ಈ ಬಾರಿಯೂ ಸಾಬೀತಾಗಿದೆ.
ಸದನದಲ್ಲಿ ಚರ್ಚೆಗಳು ನಡೆಯುವ ವೇಳೆ, ಕನಿಷ್ಟ ಕೋರಂ ಬಿಟ್ಟರೆ ಹೆಚ್ಚಿನ ಸದಸ್ಯರು ಆಸಕ್ತಿ ತೋರುತ್ತಿಲ್ಲ. ಈ ಕುರಿತು ಸ್ವತಃ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಾರದಲ್ಲಿ ಐದು ದಿನ ಸದನ ನಡೆಸಲಾಗುತ್ತದೆ. ಶನಿವಾರ ಹಾಗೂ ಭಾನುವಾರ ರಜೆ ಇದ್ದರೂ ಶುಕ್ರವಾರದಿಂದಲೇ ರಜೆ ಮೂಡ್‌ಗೆ ಸದಸ್ಯರು ಜಾರಿರುತ್ತಾರೆ. ಇದೇ ಕಾರಣಕ್ಕೆ ಶುಕ್ರವಾರ ಮದ್ಯಾಹ್ನವೇ ಸದನವನ್ನು ಸೋಮವಾರಕ್ಕೆ ಮುಂದೂಡಲಾಯಿತು.
ಮುಂದೂಡುವ ಮುನ್ನ ನಡೆದ ಪ್ರಶ್ನೋತ್ತರ ಅವಧಿಯಲ್ಲಿ ಅನೇಕ ಸದಸ್ಯರು ಉಪಸ್ಥಿತರೇ ಇರಲಿಲ್ಲ. ಸ್ಪೀಕರ್ ಸ್ಥಾನದಲ್ಲಿ ಶಾಸಕ ಕುಮಾರ್ ಬಂಗಾರಪ್ಪ ಆಸೀನರಾಗಿದ್ದರು. ಅವರ ನಂತರ ಸ್ಪೀಕರ್ ಕಾಗೇರಿ ಆಗಮಿಸಿ, ಪ್ರಶ್ನೆಗಳನ್ನು ಕೈಗೆತ್ತಿಕೊಂಡರು. ಈ ಸಮಯದಲ್ಲಿ, ಪ್ರಶ್ನೆ ಕೇಳಿದ ಅನೇಕ ಸದಸ್ಯರು ಆಗಮಿಸಿಯೇ ಇರಲಿಲ್ಲ. ಕುಮಾರ್ ಬಂಗಾರಪ್ಪ ಮಾತ್ರ ಇದ್ದರು.
ಸ್ಪೀಕರ್ ಕಾಗೇರಿಯವರು ಮಾತನಾಡಿ, ನೀವಾದರೂ ಇದ್ದೀರಲ್ಲ ಎಂದು ತಿಳಿಸಿದರು. ಅದಕ್ಕೆ ಹಾಸ್ಯ ಧಾಟಿಯಲ್ಲೇ ಪ್ರತಿಕ್ರಿಯೆ ನೀಡಿದ ಕುಮಾರ್ ಬಂಗಾರಪ್ಪ, ನೀವು ನನ್ನನ್ನು ಕುರ್ಚಿಯಲ್ಲಿ (ಸ್ಪೀಕರ್) ಕೂರಿಸಿ ಹೋಗಿದ್ದರಿಂದ ಉಳಿದುಕೊಂಡಿದ್ದೇನೆ ಎಂದಿದ್ದರು. ನಂತರ, ಶುಕ್ರವಾರ ಮದ್ಯಾಹ್ನವೇ ಸದನವನ್ನು ಸೋಮವಾರಕ್ಕೆ ಮುಂದೂಡಲಾಗಿತ್ತು.
ಸೋಮವಾರವೂ ಸದಸ್ಯರಿಲ್ಲ
ರಾಜ್ಯದಲ್ಲಿ ಅತಿವೃಷ್ಟಿಯಿಂದ ಉಂಟಾಗಿರುವ ಅನಾಹುತದ ಕುರಿತು ಇಡೀ ವಾರ ಚರ್ಚೆಯಾಗಿದೆ. ಬಿಜೆಪಿಯಿಂದ 6 ಸದಸ್ಯರು, ಜೆಡಿಎಸ್‌ನಿಂದ 12 ಸದಸ್ಯರು, ಕಾಂಗ್ರೆಸ್‌ನಿಂದ 16 ಸದಸ್ಯರು, ಪಕ್ಷೇತರ ಇಬ್ಬರು ಸದಸ್ಯರು ಸೇರಿ ಒಟ್ಟು 36 ಸದಸ್ಯರು 12.44 ಗಂಟೆ ಚರ್ಚೆ ಮಾಡಿದ್ದಾರೆ. ಇದೆಲ್ಲವನ್ನೂ ಕೇಳಿಸಿಕೊಂಡಿರುವ ಸರ್ಕಾರ ಸೋಮವಾರ ಬೆಳಗ್ಗೆ ಉತ್ತರ ನೀಡಬೇಕಿತ್ತು. ಆದರೆ ಸೋಮವಾರ ಬೆಳಗ್ಗೆಯೂ ಸದಸ್ಯರು ಗೈರಾಗಿರುವುದು ಮುಂದುವರಿದಿತ್ತು.
ಪ್ರಶ್ನೋತ್ತರ ವೇಳೆಯಲ್ಲಿ ಶಾಸಕರು ಗೈರಾಗಿರುವುದಕ್ಕೆ ಸ್ಪೀಕರ್ ಕಾಗೇರಿ ಆಕ್ಷೇಪಿಸಿದರು. ಪ್ರಶ್ನೆ ಕೇಳಿದ್ದ ಭೀಮಾ ನಾಯ್ಕ್, ಭರತ್ ಶೆಟ್ಟಿ, ನಿರಂಜನ್ ಕುಮಾರ್, ಬಿ.ಕೆ. ಸಂಗಮೇಶ್, ಎಂ. ಶ್ರೀನಿವಾಸ್, ಸಿ.ಎನ್. ಬಾಲಕೃಷ್ಣ, ಸಿ.ಎಸ್. ಪುಟ್ಟರಾಜು, ಶಿವಾನಂದ್ ಪಾಟೀಲ್ ಸೇರಿ ಅನೇಕರು ಗೈರಾಗಿದ್ದರು. ಸೋಮವಾರ ಏಕೆ ರಜೆ ಹಾಕಿದ್ದಾರೆ? ಏಕೆ ಹೀಗಾಗಿದೆ ಎಂಬುದೇ ಗೊತ್ತಾಗುತ್ತಿಲ್ಲ. ಸಮಸ್ಯೆ ಎಂದುಕೊಂಡು ಎಲ್ಲರೂ ಬರುತ್ತಾರೆ, ನಂತರ ಯಾರೂ ಬಂದು ಪ್ರಶ್ನೆ ಮಾಡುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ | ಉತ್ತರ ಕನ್ನಡ ಜಿಲ್ಲೆಯ ಸೂಕ್ತ ಸ್ಥಳದಲ್ಲಿ ಟ್ರಾಮಾ ಸೆಂಟರ್: ವಿಶ್ವೇಶ್ವರ ಹೆಗಡೆ ಕಾಗೇರಿ