ದೇವನಹಳ್ಳಿ: ಬೆಂಗಳೂರಿನ ದೇವನಹಳ್ಳಿಯಲ್ಲಿರುವ ನಾಡಪ್ರಭು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸ್ಥಾಪನೆಯಾಗುತ್ತಿರುವ 108 ಅಡಿ ಎತ್ತರದ ಕಂಚಿನ ಪ್ರತಿಮೆಗೆ ರಾಜ್ಯ ಸರ್ಕಾರ ನಾಮಕರಣ ಮಾಡಿದೆ. ನಾಡಪ್ರಭು ಕೆಂಪೇಗೌಡ ಥೀಮ್ ಪಾರ್ಕ್ ನಿರ್ಮಾಣಕ್ಕೆ ಭೂಮಿ ಪೂಜೆ ಮತ್ತು ನಾಡಪ್ರಭು ಕೆಂಪೇಗೌಡರ 108 ಅಡಿ ಕಂಚಿನ ಪ್ರತಿಮೆಯ ಉದ್ಘಾಟನಾ ಅಭಿಯಾನಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.
108 ಅಡಿಯ ಪ್ರತಿಮೆಗೆ “ಪ್ರಗತಿಯ ಪ್ರತಿಮೆ” ಎಂದು ನಾಮಕರಣ ಮಾಡಲಾಗಿದೆ ಎಂದು ಬೊಮ್ಮಾಯಿ ತಿಳಿಸಿದ್ದು, ನವೆಂಬರ್ 2ರಂದು ಉದ್ಘಾಟನೆ ಆಗುತ್ತದೆ ಎಂದೂ ತಿಳಿಸಿದ್ದಾರೆ. ಅಮೆರಿಕದಲ್ಲಿರುವ 151 ಅಡಿ ಎತ್ತರದ ಬೃಹತ್ ಪ್ರತಿಮೆಗೆ ಸ್ಟ್ಯಾಚ್ಯೂ ಆಫ್ ಲಿಬರ್ಟಿ ಎಂದು ನಾಮಕರಣ ಮಾಡಲಾಗಿದೆ. ಗುಜರಾತ್‌ನಲ್ಲಿ, ಸರ್ದಾರ್ ಪಟೇಲರ 597 ಅಡಿ ಎತ್ತರದ ಪ್ರತಿಮೆಗೆ ಏಕತಾ ಪ್ರತಿಮೆ ಎಂದು ಹೆಸರಿಡಲಾಗಿದೆ. ಹೈದರಾಬಾದ್ ಬಳಿ ಇತ್ತೀಚೆಗಷ್ಟೆ ನಿರ್ಮಾಣವಾದ ರಾಮಾನುಜಾಚಾರ್ಯರ 216 ಅಡಿ ಎತ್ತರದ ಪ್ರತಿಮೆಗೆ ಸಮಾನತೆಯ ಪ್ರತಿಮೆ ಎಂದು ಹೆಸರಿಡಲಾಗಿದೆ. ಇದೀಗ ಬೆಂಗಳೂರಿನಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆಗೆ ಪ್ರಗತಿಯ ಪ್ರತಿಮೆ ಎಂದು ಹೆಸರಿಡಲು ರಾಜ್ಯ ಸರ್ಕಾರ ಮುಂದಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಬೊಮ್ಮಾಯಿ, ಕರ್ನಾಟಕದ ಇತಿಹಾಸದಲ್ಲಿ ಸುವರ್ಣ ಯುಗ ವಿಜಯನಗರ ಸಾಮ್ರಾಜ್ಯ. ಆ ಯುಗದಲ್ಲಿ ಅನರ್ಘ್ಯ ರತ್ನ ಎಂದರೆ ಅದು ಕೆಂಪೇಗೌಡರು. ಬೆಂಗಳೂರು ಅಭಿವೃದ್ಧಿಗೆ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೆಂಪೇಗೌಡರ ಹೆಸರಿನ ವಿಮಾನನಿಲ್ದಾಣದಲ್ಲಿ ಬೃಹತ್ ಕೆಂಪೇಗೌಡರ ಪ್ರತಿಮೆಯನ್ನು ಮಾಜಿ ಸಿಎಂ ಬಿಎಸ್‌ವೈ ಅಡಿಗಲ್ಲು ಹಾಕಿದರು. ಕೆಂಪೇಗೌಡರ ಜೀವನ ಸ್ಪೂರ್ತಿಯಾಗಬೇಕು ಎಂದು ಪ್ರತಿ ಗ್ರಾಮದಿಂದಲೂ ಮಣ್ಣನ್ನು ತೆಗೆದುಕೊಂಡು ಬಂದು ಇಲ್ಲಿ ಥೀಮ್ ಪಾರ್ಕ್ ನಿರ್ಮಾಣ ಮಾಡಲಾಗುತ್ತಿದೆ ಎಂದರು.
ಯಾವ ದೇಶಕ್ಕೆ ಇತಿಹಾಸವಿದೆಯೋ ಆ ದೇಶಕ್ಕೆ ಭವಿಷ್ಯವಿದೆ. ನಮ್ಮ ದೇಶದಲ್ಲಿ ಸಾಕಷ್ಟು ಇತಿಹಾಸವಿದೆ. ಕದಂಬರು, ಹೊಯ್ಸಳರು, ಚಾಲುಕ್ಯರು ಅನೇಕ ಅಭಿವೃದ್ಧಿ ಕೆಲಸ ಮಾಡಿ ಹೋಗಿದ್ದಾರೆ. ಕೆಂಪೇಗೌಡರು ಒಬ್ಬ ಪಾಳೆಯಗಾರರಾಗಿ ಕೇವಲ ಕಂದಾಯ ವಸೂಲಿ ಮಾಡಿದ್ದಲ್ಲದೆ ಬೆಂಗಳೂರಿನ ಕೆರೆಕಟ್ಟೆಗಳನ್ನು ಅಭಿವೃದ್ಧಿ ಮಾಡಿದ್ದಾರೆ. ಸಾಮಾನ್ಯವಾಗಿ ನದಿ ತಟದಲ್ಲಿ ನಗರ ನಿರ್ಮಾಣವಾಗುತ್ತಿತ್ತು. ಆದರೆ ಕೆಂಪೇಗೌಡರು ಎತ್ತರದ ಸ್ಥಳವನ್ನು ಆಯ್ದುಕೊಂಡು ಹೊಸ ಕೆರೆ ಕಟ್ಟೆಗಳನ್ನು ನಿರ್ಮಾಣ ಮಾಡಿದ್ದರು. ದೇವನಹಳ್ಳಿಯಿಂದ ಮಾಗಡಿಯವರೆಗೆ ಬೆಂಗಳೂರನ್ನು ಬೆಳೆಸಿದರು. ನಾಲ್ಕು ದಿಕ್ಕುಗಳಲ್ಲಿ ಗೋಪುರ ಕಟ್ಡಿ ಪೇಟೆಗಳ ನಿರ್ಮಾಣ ಮಾಡಿದರು. ಒಕ್ಕಲಿಗರು ಒಕ್ಕಲುತನ ಮಾಡಬೇಕು ಎಂದು ಕೆಂಪೇಗೌಡರು ಪ್ರೋತ್ಸಾಹ ನೀಡಿದರು. ಕೆಂಪೇಗೌಡರು ಬೆಂಗಳೂರು ನಿರ್ಮಾತೃವಲ್ಲ, ಕೆಂಪೇಗೌಡರು ಬೆಂಗಳೂರು ನಾಗರಿಕತೆಯ ನಿರ್ಮಾತೃ ಎಂದು ಬಣ್ಣಿಸಿದರು.
ಪ್ರಧಾನಿ ಮೋದಿಯಿಂದ ಉದ್ಘಾಟನೆ
ರೋಮ್‌ನಲ್ಲಿ ಅಲೆಗ್ಸಾಂಡರ್‌ಗೆ ಅರಿಸ್ಟಾಟಲ್ ಇಲ್ಲೇ ಪಾಠ ಹೇಳಿದ ಎಂದು ಒಂದು ಕಲ್ಲಿಟ್ಟು ಇತಿಹಾಸ ಹೇಳುತ್ತಾರೆ ಎಂದ ಸಿಎಂ ಬೊಮ್ಮಾಯಿ, ನಮ್ಮಲ್ಲಿ ಅದಕ್ಕಿಂದ ದೊಡ್ಡ ಇತಿಹಾಸವಿದೆ. ಆ ಇತಿಹಾಸವನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು. ಇನ್ನು ಸ್ವಲ್ಪ ವರ್ಷ ಕಳೆದರೆ ಬೆಂಗಳೂರಿನ ಜನ ಕೆಂಪೇಗೌಡರನ್ನು ಮರೆಯುತ್ತಾರೆ, ಬೆಂಗಳೂರಿನ ಇತಿಹಾಸವನ್ನು ಮರೆಯುತ್ತಾರೆ. ಹಾಗಾಗಿ ಇಲ್ಲಿ ಕೆಂಪೇಗೌಡರ ಪ್ರತಿಮೆ ನಿರ್ಮಾಣ ಮಾಡಬೇಕು ಎಂದು ನಿರ್ಧಾರ ಮಾಡಿದೆವು. ಕೇವಲ ಇಲ್ಲಿ ಮಾತ್ರವಲ್ಲದೆ ಎಲ್ಲೆಲ್ಲಿ ಕೆಂಪೇಗೌಡರ ಕುರುಹುಗಳಿದೆಯೋ ಅಲ್ಲೆಲ್ಲ ಅಭಿವೃದ್ಧಿ ಮಾಡುವ ಕೆಲಸವನ್ನು ಪ್ರಾಧಿಕಾರ ಮಾಡುತ್ತದೆ ಎಂದರು. ಬೆಂಗಳೂರಿನ ಸುತ್ತ 4 ಸ್ಯಾಟಲೈಟ್ ಟೌನ್‌ಗಳನ್ನು ನಿರ್ಮಾಣ ಮಾಡಲಿದ್ದೇವೆ. ನವೆಂಬರ್ 2 ರಂದು 108 ಅಡಿ ಎತ್ತರದ ಪ್ರತಿಮೆಯನ್ನು ಪ್ರಧಾನಿ ಮೋದಿ ಉದ್ಘಾಟನೆ ಮಾಡಲಿದ್ದಾರೆ. ಕೆಂಪೇಗೌಡರು ಹಾಕಿಕೊಟ್ಟ ಪ್ರಗತಿ ಪ್ರಗತಿಯ ಸಾಲಿನಲ್ಲಿ ಸಾಗಲಿದ್ದೇವೆ ಎಂದು ಹೇಳಿದರು.
ಐಟಿಬಿಟಿ, ಉನ್ನತ ಶಿಕ್ಷಣ ಹಾಗೂ ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷ ಡಾ. ಸಿ.ಎನ್. ಅಶ್ವತ್ಥನಾರಾಯಣ ಮಾತನಾಡಿ, ಬೆಂಗಳೂರು ಎಂದರೆ ಕೆಂಪೇಗೌಡರು, ಕೆಂಪೇಗೌಡರು ಎಂದರೆ ಬೆಂಗಳೂರು ಎನ್ನುವಂತಾಗಿದೆ. ನಾಡಪ್ರಭು ಕೆಂಪೇಗೌಡರ ಪಾರಂಪರಿಕ ಪ್ರಾಧಿಕಾರದಿಂದ 46 ಸ್ಥಳಗಳನ್ನು ಗುರುತಿಸಲಾಗಿದೆ. ಕೆಂಪಾಪುರದಲ್ಲಿ ವೀರ ಭೂಮಿಯಾಗಿದ್ದು, ಸಂಪೂರ್ಣ ಗ್ರಾಮವನ್ನು ಸುಪರ್ದಿಗೆ ತೆಗೆದುಕೊಂಡು ಇಡೀ ಗ್ರಾಮದವರಿಗೆ ಬೇರೆಡೆ ಸ್ಥಳ ನೀಡಲಾಗಿದೆ. ಅಲ್ಲಿಯೂ ಅಭಿವೃದ್ಧಿ ಮಾಡುತ್ತೇವೆ ಎಂದರು.
ಇದನ್ನೂ ಓದಿ | ವಿಧಾನಸೌಧ ಆವರಣದಲ್ಲಿ ಕೆಂಪೇಗೌಡ, ಬಸವೇಶ್ವರ ಪ್ರತಿಮೆ ಸ್ಥಾಪನೆಗೆ ಸಿಎಂ ಬೊಮ್ಮಾಯಿ ಅನುಮೋದನೆ