Site icon Vistara News

Book Policy : ಶೀಘ್ರದಲ್ಲೇ ಬರಲಿದೆ ಹೊಸ ಪುಸ್ತಕ ನೀತಿ: ಸಾರ್ವಜನಿಕರು ಸಲಹೆ ನೀಡಲು ಫೆಬ್ರವರಿ 10 ಕಡೆಯ ದಿನ

state govt to draft new book-policy

ಬೆಂಗಳೂರು: ಕರ್ನಾಟಕದಲ್ಲಿ ಪುಸ್ತಕ ಕ್ಷೇತ್ರಕ್ಕೆ ಉತ್ತೇಜನ ನೀಡುವ ಸಲುವಾಗಿ ಹೊಸ ಪುಸ್ತಕ ನೀತಿಯನ್ನು (Book Policy) ರಚಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಇದಕ್ಕಾಗಿ ಕನ್ನಡ ಪುಸ್ತಕ ಪ್ರಾಧಿಕಾರವು ಉಪಸಮಿತಿಯನ್ನೂ ರಚನೆ ಮಾಡಲಾಗಿದ್ದು, ಸಾರ್ವಜನಿಕರಿಂದ ಅಹವಾಲು ಆಹ್ವಾನಿಸಿದೆ.

ಕನ್ನಡ ಪುಸ್ತಕ ಲೋಕವು ಆಧುನಿಕ ಮಾಧ್ಯಮಗಳ ನೂತನ ಆವಿಷ್ಕಾರಗಳ ಫಲವಾಗಿ ವಿಸ್ತಾರಗೊಳ್ಳುತ್ತಿದೆ. ಹೀಗಾಗಿ, ಪುಸ್ತಕೋದ್ಯಮದ ಎಲ್ಲ ಸಾಧ್ಯತೆ ಮತ್ತು ಸವಾಲುಗಳನ್ನು ಹೊಸ ದೃಷ್ಠಿಕೋನದಿಂದ ನೋಡುವ ಅಗತ್ಯತೆ ಇದೆ. ಆದ್ದರಿಂದ ಕನ್ನಡ ಪುಸ್ತಕ ನೀತಿಯನ್ನು ಪುನರ್‌ ರಚಿಸಲು ನಿರ್ಧರಿಸಲಾಗಿದೆ.

ಇ-ಪುಸ್ತಕ, ಆಡಿಯೋ ಪುಸ್ತಕ ಒಳಗೊಂಡಂತೆ ಆಧುನಿಕ ಪುಸ್ತಕೋದ್ಯಮದ ಸಾಧಕ-ಬಾಧಕಗಳು ಹಾಗೂ ಕನ್ನಡ ಪುಸ್ತಕ ಲೋಕದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಈ ಪುಸ್ತಕ ನೀತಿ ರಚನೆ ಆಗಬೇಕಿದೆ. ಇದಕ್ಕಾಗಿ ಕನ್ನಡ ಪುಸ್ತಕ ಪ್ರಾಧಿಕಾರವು ಹಿರಿಯ ಚಿಂತಕ, ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ಅಧ್ಯಕ್ಷತೆಯಲ್ಲಿ ಉಪ ಸಮಿತಿಯನ್ನು ರಚಿಸಿದ್ದು, ಸಮಿತಿಯು ಅಂತಿಮ ಹಂತದ ಕರಡನ್ನು ಸಿದ್ಧಪಡಿಸುತ್ತಿದೆ.

ನಾಡಿನ ಬರಹಗಾರರು, ಚಿಂತಕರು, ಓದುಗರು, ಪ್ರಕಾಶಕರು ಹಾಗೂ ಆಸಕ್ತ ಸಾರ್ವಜನಿಕರಿಂದ ಪುಸ್ತಕ ಲೋಕಕ್ಕೆ ಸಂಬಂಧಿಸಿದಂತೆ ಅನುಷ್ಠಾನ ಮಾಡಬಹುದಾದ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳನ್ನು ಪಡೆಯಲು ಈ ಸಮಿತಿಯು ನಿರ್ಧರಿಸಿದೆ.

ಇದನ್ನೂ ಓದಿ : ಸಾಲಭಂಜಿಕೆ ಅಂಕಣ: ಎರಡು ಕವಿತೆಗಳಲ್ಲಿ ಒಂದೇ ಹಾಡು

ಆದ್ದರಿಂದ ನಾಡಿನ ಬರಹಗಾರರು, ಚಿಂತಕರು, ಓದುಗರು, ಪ್ರಕಾಶಕರು ಹಾಗೂ ಆಸಕ್ತ ಸಾರ್ವಜನಿಕರು “ಪುಸ್ತಕ ನೀತಿ”ಯಲ್ಲಿ ಅಳವಡಿಸಬೇಕಾದ ಅಂಶಗಳ ಬಗ್ಗೆ ತಮ್ಮ ಸಲಹೆ ಸೂಚನೆ ಮತ್ತು ಅಭಿಪ್ರಾಯಗಳನ್ನು 2023ರ ಫೆಬ್ರವರಿ 10ರೊಳಗೆ ಅಂಚೆ ಮೂಲಕ “ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, 1ನೇ ಮಹಡಿ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560 002” ಈ ವಿಳಾಸಕ್ಕೆ ಕಳುಹಿಸಬಹುದಾಗಿದೆ. ಇಲ್ಲವೇ ಪ್ರಾಧಿಕಾರದ ಇ-ಮೇಲ್‌ ವಿಳಾಸ kannadappradhikara@gmail.com ಮೂಲಕವೂ ಕಳುಹಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Exit mobile version