Site icon Vistara News

Stop Tobacco App: ಸಾರ್ವಜನಿಕ ಸ್ಮೋಕಿಂಗ್ ಮೇಲೆ ‘ಸ್ಟಾಪ್ ಟಬ್ಯಾಕೋ’ ನಿಗಾ, ಆ್ಯಪ್ ಬಳಸಿ ದೂರು ನೀಡಿ

Stop Tobacco App is used for to stop public smoking in bengaluru

ಬೆಂಗಳೂರು, ಕರ್ನಾಟಕ: ಸಾರ್ವಜನಿಕ ಹಿತಾಸಕ್ತಿಗಾಗಿ ಸರ್ಕಾರವು ಅನೇಕ ಆ್ಯಪ್‌ಗಳನ್ನು ಬಿಡುಗಡೆ ಮಾಡಿದೆ. ಈ ಪೈಕಿ ‘ಸ್ಟಾಪ್ ಟಬ್ಯಾಕೋ'(Stop Tobacco) ಗಮನ ಸೆಳೆಯುತ್ತಿದೆ. ಸಾರ್ಜನಿಕ ಸ್ಥಳಗಳಲ್ಲಿ ಧೂಮಪಾನ (Smoking) ಮಾಡುವುದನ್ನು ನಿಷೇಧಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಸ್ಮೋಕಿಂಗ್ ಮಾಡುವುದರಿಂದ ಅದರ ದುಷ್ಪರಿಣಾಮ ಇತರರಿಗೂ ಆಗುತ್ತದೆ. ಈ ಹಿನ್ನೆಲೆಯಲ್ಲಿ ನಿಷೇಧಿಸಲಾಗಿದೆ. ಹೀಗಿದ್ದೂ, ಈ ಪ್ರವೃತ್ತಿಗೆ ಕಡಿವಾಣ ಬಿದ್ದಿಲ್ಲ. ಎಲ್ಲೆಂದರಲ್ಲಿ ಜನರು ಸ್ಮೋಕ್ ಮಾಡುತ್ತಲೇ ಇರುತ್ತಾರೆ. ಇದಕ್ಕೆ ಕಡಿವಾಣ ಹಾಕಲು ಜಿಪಿಎಸ್ ಆಧಾರಿತ ಮೊಬೈಲ್ ಆ್ಯಪ್ ಸ್ಟಾಪ್ ಟಬ್ಯಾಕೋ ಲಾಂಚ್ ಮಾಡಲಾಗಿದೆ. ಈ ಆ್ಯಪ್‌ನಲ್ಲಿ ದೂರುಗಳು ದಾಖಲಾಗುತ್ತಿವೆ.

ಫೆಬ್ರವರಿ 28ರಂದು ಈ ಆ್ಯಪ್ ಲಾಂಚ್ ಮಾಡಲಾಗಿದೆ. ಈವರೆಗೆ 50 ದೂರುಗಳು ದಾಖಲಾಗಿವೆ. ಸಾರ್ವಜನಿಕ ಸ್ಮೋಕಿಂಗ್ ತಡೆಯಲು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಗ ಸಂಸ್ಥೆಯಾಗಿರುವ ರಾಜ್ಯ ತಂಬಾಕು ನಿಯಂತ್ರಣ ಕೋಶ(STCC) ಈ ಆ್ಯಪ್ ಲಾಂಚ್ ಮಾಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ಸ್ಮೋಕಿಂಗ್ ಪ್ರವೃತ್ತಿಯನ್ನು ಕಡಿಮೆ ಮಾಡುವುದೇ ಈ ಆ್ಯಪ್ ಬಿಡುಗಡೆಯ ಪ್ರಮುಖ ಉದ್ದೇಶವಾಗಿದೆ.

ಆ್ಯಪ್ ಲಾಂಚ್ ಆದಾಗಿನಿಂದಲೂ ಈವರೆಗೆ 200 ಡೌನ್ಲೋಡ್ ಆಗಿದೆ. ನಿಧಾನವಾಗಿ ಆ್ಯಪ್ ಜನಪ್ರಿಯವಾಗುತ್ತಿದೆ. ಈ ಆ್ಯಪ್ ಮೂಲಕ ದಾಖಲಾಗಿರುವ ದೂರುಗಳನ್ನು ಪರಿಶೀಲಿಸಿ, ಈವರೆಗೆ ಮೂರ್ನಾಲ್ಕು ಜನರ ವಿರುದ್ಧ ಕ್ರಮ ಕೂಡ ಕೈಗೊಳ್ಳಲಾಗಿದೆ. ವಿಶೇಷವಾಗಿ ಅಂಗಡಿ ಮಾಲೀಕರು ನೋ ಸ್ಮೋಕಿಂಗ್ ಫಲಕ ಪ್ರದರ್ಶನ ಮಾಡಿದೇ ಇದ್ದದ್ದಕ್ಕೆ ಮತ್ತು ಧೂಮಪಾನಕ್ಕೆ ಅವಕಾಶ ಮಾಡಿ ಕೊಟ್ಟಿದ್ದಕ್ಕಾಗಿ ಕ್ರಮ ಕೈಗೊಳ್ಳಲಾಗಿದೆ. ಇಂಥ ಅಂಗಡಿಗಳ ಸುತ್ತ ಮುತ್ತ ಸ್ಮೋಕಿಂಗ್ ಮಾಡುತ್ತಿರುವವರಿಗೆ ದಂಡ ಕೂಡ ವಿಧಿಸಲಾಗಿದೆ. ಬೆಂಗಳೂರಿನ ಗಾಂಧಿನಗರ, ಎಚ್ಎಸ್ಆರ್ ಲೇ ಔಟ್, ಬಾಣಸವಾಡಿ ಪ್ರದೇಶಗಳಿಂದ ಹೆಚ್ಚು ದೂರುಗಳು ದಾಖಲಾಗಿವೆ. ಬೆಳಗಾವಿ ಮತ್ತು ದಕ್ಷಿನ ಕನ್ನಡ ಜಿಲ್ಲೆಗಳಿಂದಲೂ ಪ್ರಕರಣಗಳು ದಾಖಲಾಗಿವೆ ಎಂದು ಸ್ಟೇಟ್ ಟಬ್ಯಾಕೋ ಕಂಟ್ರೋಲ್ ಪ್ರೋಗ್ರಾಮ್ ಮುಖ್ಯಸ್ಥ ಪ್ರಭಾಕರ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಇದನ್ನೂ ಓದಿ: Smoking Zone | ಹೋಟೆಲ್​​​, ಬಾರ್‌ & ರೆಸ್ಟೋರೆಂಟ್‌ನಲ್ಲಿ ಸ್ಮೋಕಿಂಗ್ ಜೋನ್ ಕಡ್ಡಾಯ ವಿವಾದ; ಧೂಮಪಾನಕ್ಕೆ ಅವಕಾಶ ಏಕೆ ಎಂಬ ವಾದ

ವಿಶ್ವ ಆರೋಗ್ಯ ಸಂಸ್ಥೆ(WHO)ಯ ಪ್ರಕಾರ, ತಂಬಾಕು ನಿಯಂತ್ರಣ ವಿಷಯದಲ್ಲಿ ಜಗತ್ತಿನಲ್ಲೇ ಬೆಂಗಳೂರು ಅತ್ಯುತ್ತಮ ನಗರವಾಗಿದೆ. ತಂಬಾಕು ಉತ್ಪಾದನೆ ಮತ್ತು ಉತ್ಪನ್ನಗಳ ಸೇವನೆ ತಡೆಗೆ ಅನೇಕ ಕ್ರಮಗಳನ್ನು ಕರ್ನಾಟಕ ಸರ್ಕಾರವು ಕೈಗೊಂಡಿದೆ. ಈ ವಿಷಯದಲ್ಲಿ ಹಲವು ಸಂಘ ಸಂಸ್ಥೆಗಳು ಕೈಗೊಡಿಸಿವೆ. ಜನರಲ್ಲಿ ಧೂಮಪಾನದಿಂದಾಗುವ ಆರೋಗ್ಯ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸುವುದು ಹಾಗೂ ಸಂಬಂಧಿಸಿದ ಕಾನೂನುಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಿರುವುದರಿಂದ ಸಾರ್ವಜನಿಕ ಸ್ಮೋಕಿಂಗ್ ನಿಯಂತ್ರಣದಲ್ಲಿದೆ ಎನ್ನಲಾಗಿದೆ.

Exit mobile version